ಸಿದ್ದಾಪುರ, ಜು. 8: ಸಿದ್ದಾಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂತನ ಸದಸ್ಯರುಗಳ ಸೇರ್ಪಡೆ ಕಾರ್ಯಕ್ರಮ ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠ ದರ್ಶನ್ ಪುಟ್ಟಣ್ಣಯ್ಯ ಹಾಗೂ ಕೊಡಗು ಜಿಲ್ಲಾ ಘಟಕದ ಖಜಾಂಚಿ ಮಾಲ್ದಾರೆಯ ಸಬಿತಾ ಭೀಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ರೈತರ ಸಮಸ್ಯೆಗಳನ್ನು ಹೊರಾಟದ ಹಾದಿಯಲ್ಲಿ ತಿಳಿಯಪಡಿಸಿ ನ್ಯಾಯ ಪಡೆಯಬೇಕು ರಾಜ್ಯದ ವಿವಿಧ ಸ್ಥಳಗಳಲ್ಲಿ ರೈತರು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಸರ್ಕಾರವು ಸ್ಪಂದನೆ ನೀಡುತ್ತಿಲ್ಲವೆಂದು ದೂರಿದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸಂಬವಳ್ಳಿ ರಾಮಕೃಷ್ಣಯ್ಯ ಮಾತನಾಡಿ, ಕರ್ನಾಟಕ ರಾಜ್ಯ ರೈತ ಸಂಘವು ರಾಜಕೀಯ ರಹಿತ ಸಂಘಟನೆಯಾಗಿದ್ದು, ರೈತರ ಹಿತಕ್ಕಾಗಿ ಸದಾ ಹೋರಾಟದ ಮೂಲಕ ಸ್ಪಂದಿಸುತ್ತಿದ್ದೇವೆ ಎಂದರು. ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ರೈತರು ಒಗ್ಗೂಡಿ ಸಂಘಟಿತವಾಗಿ ಹೋರಾಟ ಮಾಡುವದರಿಂದ ತಮ್ಮ ಹಕ್ಕು ಪಡೆಯಲು ಸಹಕಾರಿಯಗುತ್ತದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಶಂಬವಲ್ಲಿ ಸುರೇಶ್ ಮಾತನಾಡಿ, ರೈತರ ಬೇಡಿಕೆಗಳನ್ನು ಸರ್ಕಾರಕ್ಕೆ ಮನ ಮುಟ್ಟುವಂತೆ ಮಾಡಲು ಹೋರಾಟಗಳು ಮುಖ್ಯವಾಗಿದ್ದು, ರೈತರು ಸಂಘಟನೆಗೆ ಬೆಂಬಲ ನೀಡುವಂತೆ ಕರೆ ನೀಡಿದರು.
ಮಂಡ್ಯ ಜಿಲ್ಲಾ ಅಧ್ಯಕ್ಷ ಸುರೇಶ್ ಮಾತನಾಡಿ, ಸರಕಾರಗಳು ರೈತರನ್ನು ಕಡೆಗಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಸರಕಾರ ಮಾಡುವ ಕೊಲೆ ಎಂದು ಆರೋಪಿಸಿದರು. ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ರೈತ ಸಂಘವು ಕೊಡಗಿನಲ್ಲಿ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾದ ಕಾಡಾನೆಗಳ ಉಪಟಳವನ್ನು ನಿಗ್ರಹಿಸಲು ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಇಲಾಖಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದೆ ಎಂದರು. ರೈತರು ಘನತೆ ಗೌರವವನ್ನು ಉಳಿಸಿಕೊಂಡು ಸಾಗಬೇಕು ಸಂಘದ ಮೌಲ್ಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ರೈತರು ನಡೆದುಕೊಳ್ಳಬೇಕು ಎಂದು ಹೇಳಿದರು.
ಅಮ್ಮತ್ತಿ ಹೋಬಳಿಯ ರೈತ ಸಂಘದ ಅಧ್ಯಕ್ಷ ಮಂಡೇಪಂಡ ಪ್ರವೀಣ್ ಬೋಪಯ್ಯ ಅವರು ರೈತ ಸಂಘವು ಕೊಡಗಿನ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಂತಿಯುತ ಹೋರಾಟ ಮಾಡುತ್ತಾ ಬಂದಿದ್ದು ಕಾಡಾನೆಗಳ ಸಮಸ್ಯೆಯಿಂದ ಬೇಸತ್ತು ಇಲಾಖಾಧಿಕಾರಿಗಳಿಗೆ ಮನವಿ ಮತ್ತು ಸಭೆಯಲ್ಲಿ ವರದಿ ಸಲ್ಲಿಸಿತ್ತು ಹಾಗೂ ಉನ್ನತ ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಪರಿಣಮವಾಗಿ ಸಿದ್ದಾಪುರ ಭಾಗದಲ್ಲಿ ಎರಡು ಪುಂಡಾನೆಗಳನ್ನು ಸೆರೆ ಹಿಡಿದು ಸಾಕಾನೆ ಶಿಬಿರಕ್ಕೆ ಸಾಗಿಸಲಾಯಿತು. ಕಾಡಾನೆಗಳನ್ನು ನಿಗ್ರಹಿಸಲು ಸರ್ಕಾರವು ಶಾಶ್ವತ ಪರಿಹಾರ ಒದಗಿಸಬೇಕು. ವೀರಾಜಪೇಟೆ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತೀವ್ರವಾಗಿದ್ದು, ಈ ಬಾಗದ ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದರು.
ಸಿದ್ದಾಪುರ ರೈತ ಸಂಘದ ಅಧ್ಯಕ್ಷ ದೇವಣಿರ ವಜ್ರ ಬೋಪಣ್ಣ, ರಾಜ್ಯ ರೈತ ಸಂಘದ ಪ್ರಮುಖರಾದ ಕೆಂಪು ಗೌಡ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾನೂನು ಸಲಹೆಗಾರ ಹೇಮಚಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿದ್ದಾಪುರ, ಕರಡಿಗೋಡು, ನೆಲ್ಲಿಹುದಿಕೇರಿ ಭಾಗದಿಂದ 63 ಮಂದಿ ರೈತರು ಸದಸ್ಯತ್ವ ಪಡೆದುಕೊಂಡರು. ರೈತ ಸಂಘದ ಪ್ರಮುಖರಿಂದ ಹೊಸ ಸದಸ್ಯರಿಗೆ ಹಸಿರು ಶಾಲು ಹೊದಿಸಿ ಸಂಘಟನೆಗೆ ಬರಮಾಡಿಕೊಂಡರು. ನಂತರ ಹೊಸ ಸದಸ್ಯರಿಗೆ ಪ್ರಮಾಣ ವಚನ ಭೋದಿಸಲಾಯಿತು. ಪ್ರವೀಣ್ ಬೋಪಯ್ಯ ಸ್ವಾಗತಿಸಿ, ಸೂರಜ್ ವಂದಿಸಿದರು. - ವಾಸು