ಸುಂಟಿಕೊಪ್ಪ, ಜು. 8: ಸರಕಾರದ ಯೋಜನೆಗಳು ಸುಲಲಿತವಾಗಿ ಜನರಿಗೆ ತಲಪಿಸುವ ಉದ್ದೇಶದಿಂದ ಕಂದಾಯ ಇಲಾಖೆಯ ಅಟಲ್ ಬಿಹಾರಿ ವಾಜಪೇಯಿ ಜನಸ್ನೇಹಿ ಕೇಂದ್ರದಲ್ಲಿ ಕೆಲಸದ ಒತ್ತಡವನ್ನು ತಗ್ಗಿಸುವ ನಿಮಿತ ಖಾಸಗಿ ಸೇವಾ ಸಿಂಧು ಕೇಂದ್ರಗಳನ್ನು ನಿಯೋಜಿಸಿದ್ದು ಶುಲ್ಕದ ಸುಲಿಗೆಯಿಂದ ಸಾರ್ವಜನಿಕರ ನೆಮ್ಮದಿ ಕೆಡಿಸಿದೆ.

ಜನನ ಮತ್ತು ಮರಣ, ಜಾತಿ ಆದಾಯ ದೃಢೀಕರಣ ಪತ್ರ, ಪಡಿತರಚೀಟಿ, ಪಿಂಚಣಿ ಕಾರ್ಡು, ಪ್ರಧಾನ ಮಂತ್ರಿ ಕಿಸಾನ್ ಕಾರ್ಡು ಕೇಂದ್ರ ಸರಕಾರದ ಆಯುಷ್ಮಾನ್ ಆರೋಗ್ಯ ಕಾರ್ಡ್‍ಗಾಗಿ ಜನರು ದಿನಗಟ್ಟಲೆ ಸರತಿ ಸಾಲಿನಲ್ಲಿ ಜನಸ್ನೇಹಿ ಕೇಂದ್ರಗಳಲ್ಲಿ ಅಲೆದಾಡುವದನ್ನು ಮನಗಂಡು ಸರಕಾರ ಜವಾಬ್ದಾರಿ ಯನ್ನು ಖಾಸಗಿ ಸಂಸ್ಥೆಗೆ ವಹಿಸಿದೆ. ಈ ಸಂಸ್ಥೆಗೆ ಕೇವಲ 10 ರೂ. ದೃಢೀಕರಣ ಪತ್ರಕ್ಕೆ ಶುಲ್ಕ ವಿಧಿಸಿ ಸಾರ್ವಜನಿಕರ ಕೆಲಸ ಕಾರ್ಯಗಳು ನಿರ್ವಹಿಸಿಕೊಡಬೇಕೆಂದು ಷರತ್ತು ವಿಧಿಸಿದೆ. ಖಾಸಗಿ ಸಂಸ್ಥೆಗೆ ಸರಕಾರವೇ ನಿಗದಿತ ವೆಚ್ಚವನ್ನು ಭರಿಸುತ್ತಿದೆ.

ಹೀಗಿದ್ದು ಸುಂಟಿಕೊಪ್ಪದಲ್ಲಿ ಮೂರು ಸೇವಾ ಸೆಂಟರ್‍ಗಳಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡು, ಪ್ರಧಾನ ಮಂತ್ರಿ ಕಿಸಾನ್ ಕಾರ್ಡ್, ಪಿಂಚಣಿ ಕಾರ್ಡ್‍ಗೆ, ಜಾತಿ ಆದಾಯ ದೃಢೀಕರಣ ಪತ್ರ ಹಾಗೂ ಪಡಿತರ ಚೀಟಿಗೆ ರೂ. 100 ರಿಂದ 150 ರೂ.ಗಳವರೆಗೆ ಜನನ ಮತ್ತು ಜಾತಿ ದೃಢೀಕರಣ ಪತ್ರ ಪಡೆದುಕೊಂಡರೆ, ಪಡಿತರ ಚೀಟಿಗೆ 500 ರೂ. ವರೆಗೆ ವಸೂಲಿ ಮಾಡಲಾಗುತ್ತಿದೆ. ಇದರಿಂದ ಮುಗ್ಧ ಜನರ ಜೇಬಿಗೆ ಕತ್ತರಿ ಹಾಕುತ್ತಿರುವದು ಸಾಮಾನ್ಯವಾಗಿದೆ.

ಜನರ ನೂಕುನುಗ್ಗಲು: ಸುಂಟಿಕೊಪ್ಪ ನಾಡ ಕಚೇರಿಗೆ ಆದಾಯ ದೃಢೀಕರಣ ಪತ್ರ, ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಕಾರ್ಡ್, ಪಿಂಚಣಿ ಕಾರ್ಡ್‍ಗೆ ಸರತಿ ಸಾಲಿನಲ್ಲಿ ನಿಂತು ಫಲಾನುಭವಿಗಳು ಕಾಯುತ್ತಿದ್ದುದು ಕಂಡು ಬಂದಿದೆ. ವಿದ್ಯುತ್ ಇಲ್ಲದೆ ಗಣಕಯಂತ್ರ ಆಪರೇಟರ್ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೆ ನಿಸ್ಸಾಯಕರಾಗಿದ್ದಾರೆ. ಇತ್ತ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೊಂದವರು ಆಗ್ರಹಿಸಿದ್ದಾರೆ.

ಉಪ ತಹಶೀಲ್ದಾರ್ ಅನಿಸಿಕೆ: ಸುಂಟಿಕೊಪ್ಪ ನಾಡ ಕಚೇರಿಯ ಉಪ ತಹಶೀಲ್ದಾರ್ ಶಿವಪ್ಪ ಅವರನ್ನು ನಾಡು ಕಚೇರಿಯಲ್ಲಿ ವಿದ್ಯುತ್ ಇಲ್ಲದಿದ್ದಾಗ ಗಣಕ ಯಂತ್ರ ಕೆಲಸ ನಿರ್ವಹಿಸದೆ ಯುಪಿಎಸ್ ಇದ್ದರೂ ಪ್ರಯೋಜನಕ್ಕೆ ಬಾರದೆ ಇರುವದರಿಂದ ಹಲವು ದಿನಗಳಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪ್ರಶ್ನಿಸಿದಾಗ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಮಸ್ಯೆ ಸರಿಪಡಿಸಲು ಕೋರಿಕೊಳ್ಳಲಾಗಿದೆ. ಹೊಸ ಯುಪಿಎಸ್ ಶೀಘ್ರದಲ್ಲೇ ಬರಲಿದೆ. ಅಲ್ಲದೆ ಸೇವಾ ಸಿಂಧು ಕೇಂದ್ರÀದಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವದು ಗಮನಕ್ಕೆ ಬಂದಿಲ್ಲ ದೂರು ಬಂದರೆ ಕ್ರಮ ಕೈಗೊಳ್ಳಲಾಗುವದೆಂದು ಪ್ರತಿಕ್ರಿಯಿಸಿದ್ದಾರೆ.