ಮಡಿಕೇರಿ, ಜು. 9: ದಕ್ಷಿಣ ಕೊಡಗಿನ ಕೆಲವು ಕಾಫಿ ತೋಟಗಳಲ್ಲಿ ಕಂಬಳಿ ಹುಳುವಿನ ಬಾದೆ ಕಂಡು ಬಂದಿದ್ದು, ಕಾಫಿ ಎಲೆಗಳನ್ನು ನಾಶಪಡಿಸುತ್ತಿವೆ. ಕಾಫಿ ಬೆಳೆಯ ಉತ್ಪಾದನೆಯಲ್ಲಿ ಯಾವದೇ ರೀತಿಯ ನಷ್ಟ ಉಂಟು ಮಾಡದಿದ್ದರೂ ಸಹ ಕಾಫಿ, ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುವ ಕಾರ್ಮಿಕರಿಗೆ ಪ್ರತಿದಿನ ಕಾರ್ಯ ನಿರ್ವಹಿಸಲು ತೊಂದರೆ ಮಾಡುತ್ತಿವೆ.
ಕಾಫಿ ಬೆಳೆಗಾರರು ಸಕಾಲದಲ್ಲಿ ಹತೋಟಿ ಕ್ರಮಗಳನ್ನು ಕೈಗೊಳ್ಳುವದು ಅತೀ ಮುಖ್ಯವಾಗಿ ರುತ್ತದೆ. ಕೀಟ ನಾಶಕ ಸಿಂಪರಣೆಯು ಲಾಭದಾಯಕವಾಗಿಲ್ಲದಿರುವದರಿಂದ ಕಂಬಳಿ ಹುಳುಗಳು ಕಂಡ ತಕ್ಷಣವೇ ಅವುಗಳನ್ನು ಹಿಡಿದು ನಾಶಪಡಿಸುವದು. ಮತ್ತೊಂದು ವಿಧಾನವೆಂದರೆ ಸೀಮೆಎಣ್ಣೆ ಬೆರೆಸಿದ ನೀರನ್ನು ಬೆಳಕಿನಾಕರ್ಷಕ ಬಲೆಗಳಲ್ಲಿ (ಲೈಟ್ ಟ್ರಾಪ್ಸ್) ತುಂಬಿ ಸೂರ್ಯಾಸ್ತದ ನಂತರ ತೋಟ ಗಳಲ್ಲಿ ಅಳವಡಿಸುವದರ ಮುಖಾಂತರ ಪ್ರೌಢ ಕೀಟಗಳನ್ನು (ಚಿಟ್ಟೆಗಳು) ನಾಶಪಡಿಸಬಹುದಾಗಿದೆ ಎಂದು ವೀರಾಜಪೇಟೆ ಕಾಫಿ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.