ಕುಶಾಲನಗರ, ಜು. 9: ಕುಶಾಲನಗರ ಗೌಡ ಯುವಕ ಸಂಘದ ವತಿಯಿಂದ ಸಂಘದ ಕಚೇರಿ ಆವರಣದಲ್ಲಿ 500 ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೊಡಗನ ಹರ್ಷ ತಿಳಿಸಿದ್ದಾರೆ. ಗುಮ್ಮನಕೊಲ್ಲಿಯಲ್ಲಿ ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಸಂಸ್ಥೆಗಳು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜನರಿಗೆ ಪ್ರಕೃತಿಯ ಬಗ್ಗೆ ಅರಿವು ಮೂಡಿಸುವಂತಾಗಬೇಕು ಎಂದರು.
ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿವೈಎಸ್ಪಿ ಪಿ.ಕೆ. ಮುರಳೀಧರ್ ಮರಗಿಡಗಳನ್ನು ಉಳಿಸುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರಲ್ಲದೆ ಕಾವೇರಿ ನದಿ ಸ್ವಚ್ಛತೆ ಮಾದರಿಯಲ್ಲಿ ಹುಣಸೂರಿನ ಲಕ್ಷ್ಮಣತೀರ್ಥ ನದಿಯ ಸ್ವಚ್ಛತೆ ಕೂಡ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ಜಿಪಂ ಸದಸ್ಯೆ ಮಂಜುಳಾ, ಪಂಚಾಯಿತಿ ಸದಸ್ಯ ಎಂ.ಎಸ್. ಶಿವಾನಂದ್, ಪ.ಪಂ. ಮಾಜಿ ಅಧ್ಯಕ್ಷ ಎಂ.ಎಂ. ಚರಣ್, ಗೌಡ ಯುವಕ ಸಂಘದ ಪದಾಧಿಕಾರಿಗಳಾದ ಚಿಲ್ಲನ ಗಣಿಪ್ರಸಾದ್, ಗೌರವಾಧ್ಯಕ್ಷ ಪೊನ್ನಚ್ಚನ ಮೋಹನ್ ಮಾತನಾಡಿದರು. ಮುಳ್ಳುಸೋಗೆ ಗ್ರಾ.ಪಂ. ಸದಸ್ಯರಾದ ಜಯಲಕ್ಷ್ಮಿ, ಗಣೇಶ್, ವಿಶ್ವನಾಥ್, ದೊಡ್ಡಣ್ಣ, ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ಇಲಾಖೆ ಸಿಬ್ಬಂದಿಗಳು ಇದ್ದರು.
ಕಾರ್ಯದರ್ಶಿ ಕುಲ್ಲಚನ ಹೇಮಂತ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಿಲ್ಲನ ಗಣಿಪ್ರಸಾದ್ ವಂದಿಸಿದರು.