ಕೂಡಿಗೆ, ಜು. 9: ಹೆಬ್ಬಾಲೆ ಗ್ರಾಮದ ಫಲಾನುಭವಿಯೊಬ್ಬರು ಕೊಟ್ಟಿಗೆ ನಿರ್ಮಿಸಿಕೊಳ್ಳಲು ಗ್ರಾಮ ಪಂಚಾಯಿತಿಯಿಂದ ಸಹಾಯ ಧನವನ್ನು ಪಡೆದು ಕೊಟ್ಟಿಗೆ ನಿರ್ಮಿಸಿ ಕೊಂಡಿದ್ದರು. 3 ತಿಂಗಳಲ್ಲಿ ಕೊಟ್ಟಿಗೆ ಯನ್ನು ಮನೆಯನ್ನಾಗಿಸಿ ಕೊಂಡಿರುವದು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಯಿಂದ ಪಡೆದ ಹಣವನ್ನು ವಾಪಸ್ ನೀಡುವಂತೆ ಆದೇಶ ಮಾಡಿರುವದು ತಿಳಿದುಬಂದಿದೆ. ಹೆಬ್ಬಾಲೆಯಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿ ಅವರು ಈ ರೀತಿಯ ಆದೇಶ ನೀಡಿದ್ದಾರೆ. ಈ ವಿಷಯದ ಬಗ್ಗೆ ಮಾಹಿತಿ ತಿಳಿದು ಸ್ಥಳ ಪರಿಶೀಲಿಸಿ ಫಲಾನುಭವಿಯಿಂದ ಹಣವನ್ನು ಮರು ಪಾವತಿಸುವಂತೆ ಅವರಿಗೆ ಪತ್ರ ನೀಡುವಂತೆ ಸೂಚಿಸಿದ್ದಾರೆ. ನಂತರ ಗ್ರಾಮ ಸಭೆಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು.ಈ ವ್ಯಾಪ್ತಿಯ 654 ಮಂದಿ ಸರಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದು, ಇನ್ನೂ ಉಳಿದವರು ತಮ್ಮ ಅರ್ಜಿಗಳ ಸಲ್ಲಿಕೆ, ಆಧಾರ್ ಕಾರ್ಡ್ ನಂಬರ್ ಸೇರ್ಪಡೆ ಮಾಡುವ ಕಾರ್ಯ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಲತಾ ವಹಿಸಿದ್ದರು. ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಮಾತನಾಡುತ್ತಾ, ಕೊಟ್ಟಿಗೆ ಕಟ್ಟಲು ಅನುಮತಿ ನೀಡಿದ ಸಂದರ್ಭದಲ್ಲಿ ಫಲಾನುಭವಿ ಕೊಟ್ಟಿಗೆಯಲ್ಲಿ ದನಗಳನ್ನು ಕಟ್ಟುತ್ತಿದ್ದರು. ಗ್ರಾಮ ಪಂಚಾಯಿತಿ ಸಹಾಯ ಧನವನ್ನು ಪೂರ್ತಿ ಪಡೆದ ನಂತರ ಮನೆಯಾಗಿ ಪರಿವರ್ತನೆ ಮಾಡಿ ಕೊಂಡಿರುವದು ಕಂಡು ಬಂದಿದೆ. ಈ ಹಣವನ್ನು ಮರು ಪಾವತಿಸಲು ಸೂಚಿಸಲಾಗುವದು. ಅಲ್ಲದೆ ಉದ್ಯೋಗ ಖಾತ್ರಿಗೆ ಗ್ರಾಮಸ್ಥರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಲು ಮನವಿ ಮಾಡಿದರು. ನೋಡಲ್ ಅಧಿಕಾರಿಯಾಗಿ ಪ್ರೀತಂ ಪೆÇನ್ನಪ್ಪ ಆಗಮಿಸಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.