ಚೆಟ್ಟಳ್ಳಿ, ಜು. 9: ರಾಷ್ಟ್ರೀಯ ಉದ್ಯಾನದ ಪಟ್ಟಿಯಲ್ಲಿ ಸೇರಲ್ಪಟ್ಟಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀಕ್ಷಣೆಗೆ ಅದಷ್ಟೋ ಪ್ರವಾಸಿಗರು ಬರುತ್ತಿದ್ದು ಮಳೆಗಾಲ ಪ್ರಾರಂಭವಾಗಿ ಅಲ್ಪಸ್ವಲ್ಪ ಮಳೆಯಾಗುತ್ತಿರುವ ಹಿನ್ನೆಲೆ ಬಸ್ಸಿನಲ್ಲಿ ಅರಣ್ಯದೊಳಗಿನ ಸಫಾರಿ ತೆರಳುವಲ್ಲಿ ವ್ಯತ್ಯಯವಾಗುತ್ತಿದೆ.
ನಾಗರಹೊಳೆ ಉದ್ಯಾನವನದ ಮುಖ್ಯದ್ವಾರವಾದ ನಾಣಚ್ಚಿ, ವೀರನಹೊಸಳ್ಳಿ, ಹಾಗೂ ಅಂತರ್ ಸಂತೆಗಳಲ್ಲಿ ಇಲಾಖೆಯ ಬಸ್ಸಿನಲ್ಲಿ ಪ್ರವಾಸಿಗರಿಗೆ ಸಫಾರಿ ನಡೆಯುತ್ತಿದೆ. ಪ್ರವಾಸಿಗರು ಕೌಂಟರ್‍ನಿಂದ ಟಿಕೆಟ್ ಪಡೆದು ಬೆಳಿಗ್ಗೆ ಹಾಗೂ ಮಧ್ಯಾಹ್ನ 2ಗಂಟೆಯ ಸಮಯದಲ್ಲಿ ಅರಣ್ಯದೊಳಗೆ ಸಫಾರಿ ತೆರಳಿ ಪ್ರಾಣಿ ಪಕ್ಷಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಹಲವು ವರ್ಷಗಳಿಗಿಂತ ಈ ವರ್ಷ ಹುಲಿಗಳ ವೀಕ್ಷಣೆಯಾಗುತಿರುವ ಹಿನ್ನೆಲೆ ಪ್ರವಾಸಿಗರು ದಿನೇ ದಿನೇ ಹೆಚ್ಚುತ್ತಿದ್ದಾರೆ.
ಪ್ರತಿವರ್ಷ ಮೇ-ಜೂನ್‍ನಲ್ಲಿ ಮಳೆ ಪ್ರಾರಂಭವಾದಾಗ ನಾಗರಹೊಳೆ ರಾಷ್ಟ್ರೀಯ ಉದ್ಯಾನದೊಳಗೆ ಬಸ್ ತೆರಳಲಾಗದೆ ಸಫಾರಿಯನ್ನು ನಿಲ್ಲಿಸಲಾಗುತ್ತÀದೆ. ಈ ವರ್ಷ ಮಳೆ ತಡವಾಗುತ್ತಿದ್ದರೂ ಜೂನ್‍ನಿಂದ ಅಲ್ಪಸ್ವಲ್ಪ ಮಳೆ ಬರುತಿರುವ ಹಿನ್ನೆಲೆ ಹಾಗೂ ಇಲಾಖೆಯ ಬಸ್ಸಿನಲ್ಲಿ ಫೋರ್‍ವೀಲ್ ವ್ಯವಸ್ಥೆ ಇಲ್ಲದ ಪರಿಣಾಮ ಪ್ರವಾಸಿಗರಿಗೆ ಸಫಾರಿ ವ್ಯತ್ಯಾಸವಾಗುತ್ತಿದೆ. ಆದರೆ ಪ್ರವಾಸೋದÀ್ಯಮ ಇಲಾಖೆಯ ಸಣ್ಣಪುಟ್ಟ ವಾಹನಗಳು ಎಂದಿನಂತೆ ನಿತ್ಯವೂ ಪ್ರವಾಸಿಗರನ್ನು ಅರಣ್ಯದೊಳಗೆ ಹೊತ್ತುಸಾಗುತ್ತಿರುವದು ಕಂಡುಬರುತ್ತಿದೆ.
ಈಗಾಗಲೇ ಪ್ರವಾಸಿಗರಿಗೆ ಮಾಹಿತಿ ಲಭ್ಯವಾಗಿದ್ದರೂ ಕೆಲವು ಸಫಾರಿ ತೆರಳುವ ಪ್ರವಾಸಿಗರಿಗೆ ಗೇಟಿನಲ್ಲೇ ಇಲಾಖಾ ಸಿಬ್ಬಂದಿಗಳು ಮಾಹಿತಿ ನೀಡುತ್ತಿದ್ದು, ಪ್ರವಾಸಿಗರು ಬೇಸರದಿಂದ ಹಿಂತಿರುಗುತ್ತಿದ್ದಾರೆ. ನಾಗರಹೊಳೆಯ ನಾಣಚ್ಚಿಯಲ್ಲಿ ಸಫಾರಿಯಲ್ಲಿ ವ್ಯತ್ಯಯವಾಗುತ್ತಿದ್ದರೂ ಇತರೆಡೆ ಸಫಾರಿ ನಡೆಯುತ್ತಿದೆ ಎಂದು ನಾಗರಹೊಳೆ ಮೀಸಲು ಅರಣ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಾರಾಯಣಸ್ವಾಮಿ ಹೇಳುತ್ತಾರೆ. ಮುಂಬರುವ ದಿನಗಳಲ್ಲಿ ಮಳೆ ಹೆಚ್ಚಾದರೆ ಮೇಲಧಿಕಾರಿಗಳ ಆದೇಶದೊಂದಿಗೆ ಪ್ರತಿ ವರ್ಷದಂತೆ ಸಫಾರಿಯನ್ನು ಮಳೆಗಾಲ ಮುಗಿಯುವವರೆಗೆ ರದ್ದು ಮಾಡಲಾಗುವದೆಂದು ವಲಯ ಅರಣ್ಯಾಧಿಕಾರಿ ಅಮಿತ್ ಹೇಳುತ್ತಾರೆ.
-ಕರುಣ್ ಕಾಳಯ್ಯ