ಮಡಿಕೇರಿ, ಜು. 9: ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ವಾಸದ ಮನೆಯನ್ನು ಕಳೆದುಕೊಂಡ ಮೂರ್ನಾಡು ರಸ್ತೆ ನಿವಾಸಿ ಸಂತ್ರಸ್ತ ಲೆಸ್ಲಿ ಸಿಕ್ವೇರಾ ಅವರಿಗೆ ಬೆಳ್ತಂಗಡಿ ವಲಯದ ಕಪ್ಪುಚ್ಚಿನ್ ಸಭೆಯ ಮಡಿಕೇರಿ ಮಲಯಾಳಂ ಚರ್ಚ್ನ ಧರ್ಮ ಗುರುಗಳಾದ ಫಾ.ಶಿಬು ಜೋಸೆಫ್ ಅವರ ಸಹಕಾರದಿಂದ ನೂತನ ಮನೆಯನ್ನು ನಿರ್ಮಿಸಿಕೊಡಲಾಗಿದೆ.
ಭಾನುವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ನಗರದ ಸಂತ ಮೈಕಲರ ಚರ್ಚ್ನ ಧರ್ಮ ಗುರುಗಳಾದ ರೇ.ಫಾ. ಅಲ್ಫ್ರೆಡ್ಜಾನ್ ಮೆಂಡೋನ್ಸ ಮತ್ತು ಧರ್ಮ ಗುರುಗಳಾದ ಶಿಬು ಜೋಸೆಫ್ ಅವರುಗಳು ಅಂದಾಜು ರೂ. 12 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆಯ ಕೀಯನ್ನು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸುವ ಮೂಲಕ ಶುಭ ಕೋರಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಕ್ರೈಸ್ತ ಸಮುದಾಯದ ಮುಖಂಡ ಬೇಬಿ ಮ್ಯಾಥ್ಯು, ಕಳೆದ ಬಾರಿಯ ಪ್ರಾಕೃತಿಕ ವಿಕೋಪದಲ್ಲಿ ಜಿಲ್ಲೆಯ ಹಲವು ಮಂದಿ ಸಂತ್ರಸ್ತರಾಗಿದ್ದು, ಸರಕಾರ ಇಂತಹ ಕುಟುಂಬಗಳಿಗೆ ಮನೆ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಮಳೆಗಾಲ ಪ್ರಾರಂಭವಾದರೂ ಇಂದಿಗೂ ಸಂತ್ರಸ್ತರಿಗೆ ಒಂದು ಮನೆಯನ್ನು ಕೂಡ ಹಸ್ತಾಂತರ ಮಾಡಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ಕಪ್ಪುಚ್ಚಿನ್ ಸಭೆಯ ಮಡಿಕೇರಿ ಮಲಯಾಳಂ ಚರ್ಚ್ನ ಧರ್ಮಗುರುಗಳಾದ ಫಾ.ಶಿಬು ಜೋಸೆಫ್ ಅವರುಗಳು ಧಾನಿಗಳು ಮತ್ತು ಸಂಘದಿಂದ ಸಂಗ್ರಹಿಸಿದ ಹಣದಿಂದ ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ಕೇರಳ ಮಾನಂದವಾಡಿಯಲ್ಲಿ 11 ಮನೆ ಮತ್ತು ಮಡಿಕೇರಿಯಲ್ಲಿ ಒಂದು ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದರು. ಮಾತ್ರವಲ್ಲದೇ, ಮಂಗಳಾದೇವಿ ನಗರದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ 12 ಮನೆಗಳ ದುರಸ್ತಿ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಗರಸಭಾ ಸದಸ್ಯರಾದ ಪೀಟರ್ ಅವರು ಕಡಿಮೆ ಖರ್ಚಿನಲ್ಲಿ ನೂತನ ಮನೆಯನ್ನು ಕೇವಲ 4 ತಿಂಗಳಲ್ಲಿ ನಿರ್ಮಿಸುವ ಮೂಲಕ ನಿರಾಶ್ರಿತ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಪ್ರತಿಯೊಬ್ಬರೂ ಅಸಹಾಯಕರಿಗೆ ಸಹಾಯ ಮಾಡಲು ಮುಂದಾಗ ಬೇಕೆಂಬುದೇ ಇದರ ಉದ್ದೇಶವಾಗಿದೆ ಎಂದು ಬೇಬಿ ಮ್ಯಾಥ್ಯು ಹೇಳಿದರು.
ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಸದಸ್ಯ ಪೀಟರ್, ಕಪ್ಪುಚ್ಚಿನ್ ಸಭೆಯ ಧರ್ಮಗಳು, ಸದಸ್ಯರು ಮತ್ತು ವಿವಿಧ ಚರ್ಚ್ಗಳ ಭಕ್ತರು ಪಾಲ್ಗೊಂಡಿದ್ದರು.