ಮಡಿಕೇರಿ, ಜು. 9: ಕರ್ನಾಟಕ ದಲ್ಲಿ ಬಹುಮತ ಕಳೆದುಕೊಂಡಿರುವ ಮೈತ್ರಿ ಪಕ್ಷದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ತಿಮ್ಮಯ್ಯ ವೃತ್ತದಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮುಖ್ಯಮಂತ್ರಿ ರಾಜೀನಾಮೆ ಸಲ್ಲಿಕೆಗೆ ಒತ್ತಾಯಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಮಾತನಾಡಿ, ಸಂಖ್ಯಾಬಲ ಕೊರತೆ ನಡುವೆ ಅಪವಿತ್ರ ಮೈತ್ರಿ ಸರ್ಕಾರ ರಾಜ್ಯದಲ್ಲಿದೆ. ಜನರ ಟೀಕೆಗೆ ಸರ್ಕಾರ ಒಳಗಾಗಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಹಿತ ಪಕ್ಷದ ಸಚಿವರು ರಾಜೀನಾಮೆ ಸಲ್ಲಿಸಬೇಕಾಗಿತ್ತು. ಆದರೆ ಅಧಿಕಾರದ ದುರಾಸೆಗೆ ಮೈತ್ರಿ ಶಾಸಕರು ಒಳಗಾಗಿದ್ದಾರೆ. ಪರಸ್ಪರ ಸಮನ್ವಯತೆ ಇಲ್ಲದೆ ಅತಂತ್ರವಾಗಿರುವ ಸರ್ಕಾರ ಪತನದ ಅಂಚಿನಲ್ಲಿದೆ. ತಮ್ಮ ಶಾಸಕರ ಹಿಡಿತದಲ್ಲಿಡಲಾಗದ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ರಾಜಕೀಯ ಈ ನಡೆಯಿಂದ ರಾಜ್ಯದ ಮರ್ಯಾದೆಯನ್ನು ಮೈತ್ರಿ ಪಕ್ಷ ಹರಾಜು ಮಾಡಿದೆ. ರಾಜೀನಾಮೆ ಸಲ್ಲಿಸದಿದ್ದರೆ ರಾಜ್ಯ ವ್ಯಾಪಿ ನಿರಂತರ ಪ್ರತಿಭಟನೆ ನಡೆಸಲಾಗುವದು ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆ ವೇಳೆ ಜಿ.ಪಂ ಅಧ್ಯಕ್ಷ ಬಿ.ಎ ಹರೀಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವಿ ಕುಶಾಲಪ್ಪ, ರಾಬಿನ್ ದೇವಯ್ಯ, ನಗರಾಧ್ಯಕ್ಷ ಮಹೇಶ್ ಜೈನಿ ಪ್ರಮುಖರಾದ ಡೀನ್ ಬೋಪಣ್ಣ, ಸುಬ್ರಮಣ್ಯ ಉಪಾಧ್ಯಾಯ ಸೇರಿದಂತೆ ಇತರ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ವೀರಾಜಪೇಟೆ: ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಎದ್ದು ಕಾಣುತ್ತಿದ್ದು ಮುಖ್ಯಮಂತ್ರಿ ಕುಮಾರ ಸ್ವಾಮಿ ಸರ್ಕಾರ ನಡೆಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಘಟಕದಿಂದ ಪಟ್ಟಣದ ಗಡಿಯಾರ ಕಂಬದ ಬಳಿ ತಾಲೂಕು ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಇದೇ ಸಂಧರ್ಭ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲಾ ಶಾಸಕರಗೂ ಹಾಗೂ ಮಂತ್ರಿಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ವಿಫಲರಾಗಿದ್ದಾರೆ. ಕಳೆದ 14 ತಿಂಗಳಿಂದ ಯಾವದೇ ಅಭಿವೃದ್ಧಿ ಮಾಡದೆ ಕಾಲಹರಣ ಮಾಡಿ ಕುಟುಂಬ ರಾಜಕಾರಣ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ಜಿಲ್ಲಾ ಉಪಾಧ್ಯಕ್ಷ ರಘುನಾಣಯ್ಯ, ಜಿಲ್ಲಾ ಕಾರ್ಯದರ್ಶಿ ಕಾಂತಿ ಸತೀಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಮಹಿಳಾ ಅಧ್ಯಕ್ಷೆ ಯಮುನಾ ಚಂಗಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿ.ಪಂ. ಸದಸ್ಯರುಗಳಾದ ಮುಕೊಂಡ ಶಶಿಸುಬ್ರಮಣಿ, ಅಚ್ಚಪಂಡ ಮಹೇಶ್, ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಪ.ಪಂ. ಬಿಜೆಪಿ ಸದಸ್ಯರುಗಳು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.