ಕೂಡಿಗೆ, ಜು. 9: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆಗೆ ಪ್ರಥಮ ಬಾರಿಗೆ ನೂತನವಾಗಿ ಕೇಂದ್ರ ಜಲ ಮಂಡಳಿಯ ವತಿಯಿಂದ ಆಟೋಮೆಟಿಕ್ ವಾಟರ್ ಗೇಜ್ ಅನ್ನು ಅಳವಡಿಸಲಾಗಿದೆ.
ಇದುವರೆಗೆ ಈ ಅಣೆಕಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಲಿಖಿತವಾಗಿ ನೀರಿನ ಮಟ್ಟ, ಒಳ ಹರಿವು, ಹೊರ ಹರಿವು, ನೀರು ಬಿಡುವಿಕೆಯ ಅಂಕಿ ಅಂಶಗಳನ್ನು ಕೇಂದ್ರ ಜಲಮಂಡಳಿಗೆ ವರದಿಯನ್ನು ಒಪ್ಪಿಸುತ್ತಿದ್ದರು.
ಇದೀಗ ನೂತನವಾಗಿ ಆಟೋಮೆಟಿಕ್ ವಾಟರ್ ಗೇಜ್ ಅಳವಡಿಸಿರುವದರಿಂದ ಏಕಕಾಲದಲ್ಲಿ ಪ್ರತಿ ನಿಮಿಷಗಳ ವರದಿಯನ್ನು ತಿಳಿಯುವಂತ ವ್ಯವಸ್ಥೆ ಇದಾಗಿದೆ. ಇಲ್ಲಿ ಅಳವಡಿಸಿರುವ ಮಾಪಕ ಯಂತ್ರದ ಕ್ಷಣ ಕ್ಷಣದ ವರದಿಯು ಬೆಂಗಳೂರು ಮತ್ತು ದೆಹಲಿ ಮಟ್ಟದ ಜಲಮಂಡಳಿಗೆ ಸಿಗುವ ವ್ಯವಸ್ಥೆ ಇದೆ.
ರಾಜ್ಯದ 22 ಅಣೆಕಟ್ಟೆಗಳಿಗೂ ಈ ಆಟೋಮೆಟಿಕ್ ವಾಟರ್ ಗೇಜ್ ಅಳವಡಿಸಲಾಗಿದೆ. ಇದರ ಉದ್ದೇಶವು ಮಳೆಯ ಪ್ರಮಾಣ, ಹವಾಮಾನ ವರದಿ, ನೀರಿನ ಪ್ರಮಾಣ, ಒಳಹರಿವು, ಹೊರಹರಿವು, ನಾಲೆಯ ಹರಿವು ಅಲ್ಲದೆ ಎಚ್ಚರಿಕೆಯ ಸೂಚನೆಯನ್ನು ನೀಡುತ್ತದೆ.
ಇದಲ್ಲದೆ ಮಳೆ ಎಷ್ಟು ಬೀಳಬಹುದು ಎಂಬ ಮುನ್ಸೂಚನೆಯನ್ನೂ ನೀಡುತ್ತದೆ. ಇದರಿಂದಾಗಿ ಯಾರ ಒತ್ತಡಕ್ಕೆ ಮಣಿದು ನೀರನ್ನು ಹರಿಸಿದರೂ ಇದರ ಮೂಲಕ ಕ್ಷಣಾರ್ಧದಲ್ಲಿ ತಿಳಿದು ಬರುವ ವ್ಯವಸ್ಥೆ ನೂತನ ಆಟೋಮೆಟಿಕ್ ವಾಟರ್ ಗೇಜ್ ಅಳವಡಿಕೆಯಿಂದ ತಿಳಿದುಬರುತ್ತದೆ.
ಆದರೆ, ಈ ವಾಟರ್ ಗೇಜ್ ಬೆಂಗಳೂರು ಮಟ್ಟದಲ್ಲಿ ತಾಂತ್ರಿಕ ವ್ಯವಸ್ಥೆಯೊಂದಿಗೆ ಮಾಹಿತಿ ಒದಗಿ ಸುತ್ತಿಯೇ ಹೊರತು ಹಾರಂಗಿಯಲ್ಲಿ ಇದರ ಮಾಹಿತಿ ದೊರಕವದಿಲ್ಲ. ಈಗಿರುವಂತೆಯೇ ‘ಮ್ಯಾನ್ಯುವಲ್’ ವ್ಯವಸ್ಥೆಯಲ್ಲಿಯೇ ಅಳತೆ ಮಾಡಬೇಕಾಗುತ್ತದೆ ಎಂದು ತಿಳಿದು ಬಂದಿದೆ.
ಹಾರಂಗಿ ಇಂದು ಬರಡು...!
ಅಂದು 4.16 ಟಿಎಂಸಿ ನೀರು, ಇಂದು ಕೇವಲ 1.259 ಟಿಎಂಸಿ ಸಂಗ್ರಹ ಇದು ಹಾರಂಗಿಯ ಇಂದಿನ ಸ್ಥಿತಿ! ಕಳೆದ ವರ್ಷ ಜುಲೈ ಮೊದಲ ವಾರದಲ್ಲಿ ಅಂತ್ಯದಲ್ಲಿ ಹಾರಂಗಿ ಅಣೆಕಟ್ಟೆಯು ತುಂಬಿ ತುಳುಕುತಿತ್ತು.
ಅಣೆಕಟ್ಟೆಯಲ್ಲಿ 5.10 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ, ಈ ಸಾಲಿನಲ್ಲಿ ಮಳೆಯೂ ನಿಗದಿತ ಸಮಯದಲ್ಲಿ ಬೀಳದೆ, ಹಾರಂಗಿ ಜಲಾನಯನದ ಪ್ರದೇಶಗಳಲ್ಲಿಯೂ ಮಳೆಯ ಪ್ರಮಾಣ ಕ್ಷೀಣಿಸಿರುವ ಪರಿಣಾಮ ಹಾರಂಗಿ ಅಣೆಕಟ್ಟೆಯು ನೀರಿಲ್ಲದೆ ಬರಡಾಗಿದೆ.
ಹಾರಂಗಿ ಅಣೆಕಟ್ಟೆಯ ಭದ್ರತಾ ನೀರಿನ ಸಾಮಾಥ್ರ್ಯಕ್ಕಿಂತಲೂ ಕೆಳಮಟ್ಟದಲ್ಲಿ ಕೆರೆಯಂತೆ ನೀರು ಸಂಗ್ರಹವಾಗಿದ್ದು, 2807.33 ಸಾಮಥ್ರ್ಯದ ಜಲಾಶಯದಲ್ಲಿ ಕೇವಲ 1.259 ಟಿಎಂಸಿ ನೀರು ಮಾತ್ರ ಇದೆ.
ಕಳೆದೆರಡು ದಿನಗಳಿಗಿಂತ ಒಳಹರಿವಿನ ಪ್ರಮಾಣವು ಕಡಿಮೆಯಾಗಿರುವದು ಕಂಡುಬಂದಿದೆ.
ಇದೇ ರೀತಿ ಮುಂದುವರೆದರೆ ಮುಂದಿನ ಬೇಸಾಯಕ್ಕೂ ನೀರಿಲ್ಲದೆ ಪರದಾಡಬೇಕಾಗುತ್ತದೆ ಎಂಬದು ರೈತರ ಆತಂಕವಾಗಿದೆ. ಜುಲೈ ತಿಂಗಳಲ್ಲೂ ಕುಶಾಲನಗರ ಹೋಬಳಿ ವ್ಯಾಪ್ತಿಯ ರೈತರು ಜಮೀನುಗಳಲ್ಲಿ ಅಳವಡಿಸಿ ಕೊಂಡಿರುವ ಕೊಳವೆ ಬಾವಿಗಳ ಮೂಲಕ ನೀರನ್ನು ಹಾಯಿಸಿಕೊಳ್ಳುತ್ತಿರುವದು ಕಂಡು ಬರುತ್ತಿದೆ.
ಕೊಳವೆ ಬಾವಿಯಲ್ಲಿಯೂ ನೀರಿನ ಸಾಮಥ್ರ್ಯವೂ ಕಡಿಮೆಯಾಗಿ, ಕಡಿಮೆ ಪ್ರಮಾಣದ ನೀರು ಬರುತ್ತಿರುವ ಪರಿಣಾಮ ಕೊಳವೆಬಾವಿ ಹೊಂದಿರುವ ಕೆಲವು ರೈತರು ಅಳಿದುಳಿದ ಬೆಳೆಗೆ ನೀರು ಸಿಂಪಡಿಸಲು ಸಾಧ್ಯವಾಗುತ್ತಿಲ್ಲ. ಹಾಗೂ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಪರಿಣಾಮ ದನ-ಕರುಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ.
ಅಲ್ಲದೆ, ಅಣೆಕಟ್ಟೆಯ ಮುಂಭಾಗ ನದಿಯಲ್ಲಿನ ಬೃಹತ್ ಬಂಡೆಗಳು ಬೇಸಿಗೆಯಲ್ಲಿ ಒಣಗಿದ ಮಾದರಿಯಲಿ ಹಾಗೂ ನಿಂತ ನೀರಾಗಿರುವದರಿಂದ ಅಣೆಕಟ್ಟೆಯ ಮುಂಭಾಗದಲ್ಲಿ ನೀರಿನ ದುರ್ವಾಸನೆ ರಾಚುತ್ತಿದೆ.
ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ 1.259ಟಿಎಂಸಿ, ಕಳೆದ ವರ್ಷ ಇದೇ ಅವಧಿಗೆ 2839.98 ಅಡಿ ಇತ್ತು. ಜಲಾಶಯಕ್ಕೆ ಇಂದು 566 ಒಳ ಹರಿವು ಇದ್ದು, ಕಳೆದ ವರ್ಷ ಇದೇ ಅವರಿಗೆ 8000 ಕ್ಯೂಸೆಕ್ ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ. ಕಳೆದ ವರ್ಷ ಜುಲೈ 9 ರಂದೇ ಹಾರಂಗಿ ದ್ವಾರಗಳನ್ನು ತೆರೆದು ನೀರನ್ನು ನದಿಗೆ ಹರಿಯಬಿಡಲಾಗಿತ್ತು.
ಈ ವರ್ಷದ ಸ್ಥಿತಿ ಕುರಿತು ಹಾರಂಗಿ ಜಲಾನಯನ ಜೂನಿಯರ್ ಇಂಜಿನಿಯರ್ ನಾಗರಾಜ್ ಅವರನ್ನು ಪ್ರಶ್ನಿಸಿದಾಗ ಕಳೆದ 4 ವರ್ಷಗಳ ಹಿಂದೆ ಇದೇ ಸ್ಥಿತಿ ಉದ್ಭವವಾಗಿತ್ತು. ಇದೀಗ ಮತ್ತೆ ಅದೇ ಪರಿಸ್ಥಿತಿ ಮರುಕಳಿಸಿದೆ.
ಆದರೆ 4 ವರ್ಷಗಳ ಹಿಂದೆ ಜುಲೈ ಅಂತ್ಯದ ವೇಳೆ ಹಾರಂಗಿಯಲ್ಲಿ ನೀರು ತುಂಬಿ ಬಳಿಕ ನದಿಗೆ ಬಿಡಲಾಯಿತು. ಈ ವರ್ಷವೂ ಅದೇ ರೀತಿ ಆಗಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದರು. ನೀರು ಭರ್ತಿಯಾಗಲು 3-4 ಅಡಿ ಬಾಕಿಯಾಗಿದ್ದಾಗಲೇ ದ್ವಾರಗಳನ್ನು ತೆರೆಯಲಾಗುತ್ತದೆ ಎಂದು ಮಾಹಿತಿಯಿತ್ತರು.