ಮಡಿಕೇರಿ, ಜು. 9: ಕರ್ನಾಟಕ ರಾಜ್ಯ ಸರಕಾರದ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ತಾರತಮ್ಯದೊಂದಿಗೆ, ಅನ್ಯಾಯ ಎಸಗಿದೆ ಎಂದು ಆರೋಪಿಸಿ ಇಂದು ರಾಜ್ಯದೆಲ್ಲೆಡೆ ಶಿಕ್ಷಕರು ಸರಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಕೊಡಗು ಜಿಲ್ಲೆಯ 345 ಶಾಲೆಗಳು ಕೂಡ ಬಂದ್ ಆಗಿದ್ದವು.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕರೆಗೆ ಓಗೊಟ್ಟು ಸರಕಾರಿ ಶಾಲೆಗಳ ಶಿಕ್ಷಕರು ಮಡಿಕೇರಿಗೆ ಆಗಮಿಸುವದರೊಂದಿಗೆ ಗಾಂಧಿ ಮೈದಾನದಲ್ಲಿ ಧರಣಿ ನಡೆಸಿದರು. ಅಲ್ಲದೆ ಶಾಲೆಗಳನ್ನು ಮುಚ್ಚಿ ಸಾಂದರ್ಭಿಕ ರಜೆ ಹಾಕುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಎಂದಿನಂತೆ ನಡೆಯಿತು.ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕರ ಹುದ್ದೆಯ ತನಕವೂ ಬಡ್ತಿ ನೀಡಬೇಕು ಎನ್ನುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಗಾಂಧಿ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಗೆ ಶಾಲೆಗಳನ್ನು ಬಂದ್ ಮಾಡಿ ಜಿಲ್ಲೆಯ ಹೆಚ್ಚಿನ ಶಿಕ್ಷಕರು ಬಂದಿದ್ದರು.ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಚೇತನ್, ಶಿಕ್ಷಕರ ಬೇಡಿಕೆಗಳಿಗೆ ಧ್ವನಿಯಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಸರ್ಕಾರ ಮತ್ತು ಇಲಾಖೆಯ ಗಮನ ಸೆಳೆಯುವ ಮೂಲಕ ಈಗಾಗಲೇ ಹಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ 25,800-51,400 ಪ್ರತ್ಯೇಕ ವೇತನ ಶ್ರೇಣಿ, ಮೂಲ ವೇತನದಲ್ಲಿ 450 ರೂ. ವಿಶೇಷ ವೇತನ ಸೇರ್ಪಡೆ, ವರ್ಗಾವಣೆ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ಮಾಡಿಸುವಲ್ಲಿ ಸಂಘ ಶ್ರಮಿಸಿದೆ ಎಂದು ನೆನಪಿಸಿದರು.
ಇನ್ನೂ ಸಾಕಷ್ಟು ಬೇಡಿಕೆಗಳು ಶಿಕ್ಷಕರ ಕಡೆಯಿಂದ ಇದ್ದು, 2018ರ ನವೆಂಬರ್ 16ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಹಕ್ಕೊತ್ತಾಯ ಮಾಡಲಾಗಿತ್ತು. ಮುಖ್ಯಮಂತ್ರಿ ಅಂದು ಸ್ಪಂದಿಸುವ ಭರವಸೆಯನ್ನೂ ನೀಡಿದ್ದರು. ನಿರಂತರ ವರ್ಗಾವಣೆ ಮತ್ತು ಪದವೀಧರ ಶಿಕ್ಷಕರ ಸಮಸ್ಯೆ ಬಗೆಹರಿಸುವ ಆಶ್ವಾಸನೆಯನ್ನೂ ಕೊಟ್ಟಿದ್ದರು.
(ಮೊದಲ ಪುಟದಿಂದ) ನಂತರದ ದಿನಗಳಲ್ಲಿ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಳಂಬ ಮಾಡುವ ಮೂಲಕ ಶಿಕ್ಷಕ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಹಾಗಾಗಿ ಶಿಕ್ಷಕರು ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿದು ಬೀದಿಗೆ ಇಳಿಯಬೇಕಾಗಿದೆ ಎಂದರು.
ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಕಾರ್ಯದರ್ಶಿ ಟಿ.ಕೆ. ಬಸವರಾಜ್, ಮಡಿಕೇರಿ ತಾಲೂಕು ಅಧ್ಯಕ್ಷ ಮೋಹನ್ ಪೆರಾಜೆ, ಕಾರ್ಯದರ್ಶಿ ಕುಮಾರ್ ಹೆಚ್.ಕೆ., ವಿರಾಜಪೇಟೆ ತಾಲೂಕು ಅಧ್ಯಕ್ಷ ಸುರೇಂದ್ರ, ಕಾರ್ಯದರ್ಶಿ ರೇವತಿ, ಪರಿಶಿಷ್ಟ ಜಾತಿ ಮತ್ತು ಪಂಗಡ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಸಿ. ರಾಜು ಮತ್ತಿತರರು ವೇದಿಕೆಯಲ್ಲಿದ್ದರು.
ಸಭಾ ಕಾರ್ಯಕ್ರಮದ ನಂತರ ಮೆರವಣಿಗೆಯಲ್ಲಿ ತೆರಳಿದ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿದರು. ಈಗಲೂ ಸರ್ಕಾರ ಸ್ಪಂದಿಸದಿದ್ದರೆ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ವಿಧಾನಸೌಧ ಚಲೋ ನಡೆಸುವದಾಗಿ ಶಿಕ್ಷಕರು ಎಚ್ಚರಿಕೆ ನೀಡಿದರು.
ಸೋಮವಾರಪೇಟೆ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ರಾಜ್ಯಾದ್ಯಂತ ಕರೆ ನೀಡಿದ್ದ ಬಂದ್‍ಗೆ ಸೋಮವಾರಪೇಟೆಯಲ್ಲೂ ಬೆಂಬಲ ವ್ಯಕ್ತವಾಗಿದ್ದು, ಎಲ್ಲಾ ಪ್ರಾಥಮಿಕ ಶಾಲೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು.
ಶಿಕ್ಷಕರುಗಳು ಶಾಲೆಗೆ ಆಗಮಿಸದ ಹಿನ್ನೆಲೆ ತರಗತಿಗಳು ನಡೆಯಲಿಲ್ಲ. ಖಾಸಗಿ ಶಾಲೆಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಿದವು. ತಾಲೂಕಿನಾ ದ್ಯಂತ ಇರುವ 141 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪಾಠಪ್ರವಚನಗಳು ನಡೆಯಲಿಲ್ಲ.
ಶಿಕ್ಷಕರ ಪ್ರತಿಭಟನೆ ಹಿನ್ನೆಲೆ ನಿನ್ನೆಯೇ ಶಿಕ್ಷಕರುಗಳು ವಿದ್ಯಾರ್ಥಿ ಗಳಿಗೆ ತಿಳಿಸಿದ್ದರಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ರಜೆ ಹಾಕಿ ಮನೆಯಲ್ಲೇ ಉಳಿದರು.
ನೂತನ ಎನ್‍ಪಿಎಸ್ ಯೋಜನೆ ಯನ್ನು ರದ್ದುಗೊಳಿಸಬೇಕು. ವರ್ಗಾವಣೆಯ ನಿಯಂತ್ರಣ ಕಾಯ್ದೆ ರದ್ದು ಮಾಡಿ ಮುಕ್ತ ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಉದ್ಬವಿಸಿರುವ ಕಾನೂನು ತೊಡಕುಗಳನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವದಾಗಿ ಶಿಕ್ಷಕರುಗಳು ಮಾಹಿತಿಯಿತ್ತರು.
ಪ್ರತಿಭಟನೆಯ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಎಲ್ಲಾ ಪ್ರಾಥಮಿಕ ಶಾಲೆಗಳಲ್ಲೂ ಆಂಗ್ಲಮಾಧ್ಯಮದಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ಶಿಕ್ಷಣ ನೀಡುವಂತಾಗಬೇಕು. 1 ರಿಂದ 5ರವರೆಗೆ ಪಾಠ ಮಾಡುವ ಶಿಕ್ಷಕರುಗಳ ಹಿಂಬಡ್ತಿ ಆದೇಶವನ್ನು ಹಿಂಪಡೆಯಬೇಕು. 6 ರಿಂದ 8ನೇ ತರಗತಿಗಳಿಗೆ ಪಾಠ ಮಾಡುವ ಶಿಕ್ಷಕರುಗಳಿಗೆ ಎದುರಾಗಿರುವ ಜಿಪಿಟಿ ಮತ್ತು ಪಿಎಸ್‍ಟಿ ನಿಯಮಾವಳಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವದಾಗಿ ತಿಳಿಸಿದರು.
ಇದರೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರುಗಳಿಗೆ ಬಡ್ತಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿದ್ದು, ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವದು ಎಂದು ಎಚ್ಚರಿಸಿದರು.
*ಗೋಣಿಕೊಪ್ಪಲು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವೀರಾಜಪೇಟೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರು ಮಡಿಕೇರಿ ಗಾಂಧಿ ಮೈಧಾನದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕಿನ 124 ಪ್ರಾಥಮಿಕ ಶಾಲೆಗಳ 400 ಶಿಕ್ಷಕರು ಪ್ರತಿಭಟನೆಯಲ್ಲಿ ನಿರತರಾದರು. ಶಿಕ್ಷಕರ ಪ್ರತಿಭಟನೆಯ ಮುಷ್ಕರದಿಂದ ತಾಲ್ಲೂಕಿನ 124 ಶಾಲೆಗಳನ್ನು ಮುಚ್ಚಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಟನೆಯ ಹಿಂದಿನ ದಿನವೇ ಶಾಲೆಗೆ ರಜೆ ಇರುವ ಬಗ್ಗೆ ಮಾಹಿತಿ ನೀಡಿದರ ಪರಿಣಾಮ ಶಿಕ್ಷಕರ ಪ್ರತಿಭಟನೆಯ ಬಿಸಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿಲ್ಲ. ಹಿಂದಿನ ದಿನವೇ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡಲಾಗಿತ್ತು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ ಮಾಹಿತಿ ನೀಡಿದರು.
ಶಿಕ್ಷಕರ ಪ್ರತಿಭಟನೆ ಹಿನ್ನೆಲೆ ಗೋಣಿಕೊಪ್ಪಲು ಸೇರಿದಂತೆ ತಿತಿಮತಿ, ನೆಲ್ಲಿಕಾಡು, ಹೆಬ್ಬಾಲೆ, ದೇವರಪುರ, ಬಾಳೆಲೆ, ಹಾತೂರು, ಪಾಲಿಬೆಟ್ಟ, ಪೆÇನ್ನಂಪೇಟೆ, ಪೆÇನ್ನಪ್ಪಸಂತೆ, ಮಾಯಮುಡಿ ಸೇರಿದಂತೆ 124 ಶಾಲೆಗಳನ್ನು ಸ್ವಯಂ ಘೋಷಿತವಾಗಿ ಮುಚ್ಚಲಾಗಿತ್ತು.
ಕೂಡಿಗೆ: ಕುಶಾಲನಗರ ಹೋಬಳಿ ವ್ಯಾಪ್ತಿಯ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗ ಳೂರು, ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಶಾಲೆಗಳು ಬಂದ್ ಆಗಿದ್ದವು.
ಪ್ರಾಥಮಿಕ ಶಾಲಾ ಶಿಕ್ಷಕರು ನೇಮಕಗೊಳ್ಳುವ ಸಂದರ್ಭ 1 ರಿಂದ 7ನೇ ತರಗತಿವರೆಗೆ ಪಾಠ ಮಾಡಲು ಆದೇಶವಿದ್ದರೂ, ಸರಕಾರ ಹೊರಡಿಸಿರುವ ಹೊಸ ಆದೇಶಕ್ಕೆ ಶಿಕ್ಷಕರು ಶಾಲೆಗಳಿಗೆ ತೆರಳದೆ ಬಂದ್ ಮಾಡಿ ಹೋರಾಟ ನಡೆಸಿದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಟ ಆಡುವದರಲ್ಲಿ ನಿರತರಾಗಿದ್ದರು.
ಉಪನಿರ್ದೇಶಕರ ಪ್ರತಿಕ್ರಿಯೆ
ರಾಜ್ಯಮಟ್ಟದ ಪ್ರತಿಭಟನೆಯಲ್ಲಿ ಜಿಲ್ಲೆಯ ಪ್ರಾಥಮಿಕ ಶಾಲೆಗಳ ಶಿಕ್ಷಕರು ಸಾಂದರ್ಭಿಕ ರಜೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿರುವ ಮಾಹಿತಿ ಲಭಿಸಿದೆ. ಉಳಿದಂತೆ ಖಾಸಗಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಚ್ಚಾಡೋ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.