ಬೆಂಗಳೂರು, ಜು. 9: ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದು ಮುಂಬೈನಲ್ಲಿರುವ 10 ಶಾಸಕರ ಪೈಕಿ 8 ಮಂದಿ ಅತೃಪ್ತ ಶಾಸಕರ ರಾಜೀನಾಮೆ ಪತ್ರ ಕ್ರಮ ಬದ್ಧವಾಗಿಲ್ಲ ಎಂದು ವಿಧಾನಸಭಾಧ್ಯಕ್ಷ ಕೆ. ಆರ್. ರಮೇಶ್ ಕುಮಾರ್ ತಿಳಿಸಿದ್ದಾರೆವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್, ರಾಮಲಿಂಗಾರೆಡ್ಡಿ, ಕೆ. ಸಿ. ನಾರಾಯಣಗೌಡ, ಪ್ರತಾಪ್ ಗೌಡ ಮತ್ತು ಕೆ. ಗೋಪಾಲಯ್ಯ ಸಲ್ಲಿಸಿರುವ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿದ್ದು, ಜುಲೈ 12 ರಂದು ವೈಯಕ್ತಿಕ ವಿಚಾರಣೆಗೆ ಹಾಜರಾಗುವಂತೆ ಆನಂದ್ ಸಿಂಗ್, ಕೆ. ಗೋಪಾಲಯ್ಯ, ಮತ್ತು ಕೆಸಿ ನಾರಾಯಣಗೌಡ ಅವರಿಗೆ ಸೂಚಿಸಲಾಗಿದೆ ಎಂದರು.

ಜುಲೈ 15 ರಂದು ರಾಮಲಿಂಗಾರೆಡ್ಡಿ ಹಾಗೂ ಪ್ರತಾಪ್ ಗೌಡ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಉಳಿದ 8 ಜನರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ಕ್ರಮಬದ್ಧ ರೀತಿಯಲ್ಲಿ ಮತ್ತೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ ಎಂದು ರಮೇಶ್ ಕುಮಾರ್ ತಿಳಿಸಿದರು.

ರೋಷÀನ್ ಬೇಗ್ ಅವರ ರಾಜೀನಾಮೆ ಪತ್ರವನ್ನು ಸಚಿವಾಲಯದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಪಕ್ಷ ಕೇಳಿದ್ದು, ಅವರ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಜುಲೈ 6 ರಂದು ಮಧ್ಯಾಹ್ನ ದವರೆಗೂ ಕಚೇರಿಯಲ್ಲಿಯೇ ಇದ್ದೆ. ಆನಂತರ ಬಂದು 13 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ತಮ್ಮನ್ನು ಯಾರೂ ಕೂಡಾ ಭೇಟಿಯಾಗಿಲ್ಲ್ಲ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಸಂವಿಧಾನದ ಆಶಯ ಎತ್ತಿಹಿಡಿಯುವದು ನನ್ನ ಕೆಲಸ ಎಂದು ರಾಜ್ಯಪಾಲರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ರಾಜ್ಯಪಾಲರು ಕೂಡಾ ನನಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ರಮೇಶ್ ಕುಮಾರ್ ಹೇಳಿದರು.

ರಾಜೀನಾಮೆ ನೀಡಿರುವ ಅತೃಪ್ತ ಶಾಸಕರುಗಳಾದ ಎಸ್.ಟಿ ಸೋಮಶೇಖರ್,

(ಮೊದಲ ಪುಟದಿಂದ) ಬೈರತಿ ಬಸವರಾಜ್, ಮುನಿರತ್ನ, ಹೆಚ್. ವಿಶ್ವನಾಥ್, ರಮೇಶ್ ಜಾರಕಿಹೊಳಿ,ಮಹೇಶ್ ಕುಮಟಹಳ್ಳಿ, ಶಿವರಾಮ್ ಹೆಬ್ಬಾರ್,ಬಿ.ಸಿ. ಪಾಟೀಲ್-ಈ 8 ಮಂದಿ ಶಾಸಕರುಗಳ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ಇವರುಗಳು ಮತ್ತೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಬೇಕಾಗಿದೆ ಎಂದು ಸಭಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಈ ಶಾಸಕರುಗಳು ಬುಧವಾರ ಬೆಂಗಳೂರಿಗೆ ಆಗಮಿಸಿ ಹೊಸದಾಗಿ ಕ್ರಮಬದ್ಧತೆಯೊಂದಿಗೆ ರಾಜೀನಾಮೆ ಪತ್ರ ಸಲ್ಲಿಸಲು ತೀರ್ಮಾನಿಸಿರುವದಾಗಿ ತಿಳಿದು ಬಂದಿದೆ.

ರೋಷನ್ ಬೇಗ್ ರಾಜೀನಾಮೆ

ಈ ನಡುವೆ ಇಂದು ಕಾಂಗ್ರೆಸ್ ಶಾಸಕ ರೋಷನ್ ಬೇಗ್ ತಮ್ಮ ಸ್ತಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ಪತ್ರವನ್ನು ಅವರು ಇಂದು ವಿಧಾನಸಭಾದ್ಯಕ್ಷ ರಮೇಶ್ ಕುಮಾರ್ ಅವರಿಗೆ ನೀಡಿದರು.

ಪಕ್ಷ ವಿರೋಧಿ ಹೇಳಿಕೆ ಆರೋಪದಲ್ಲಿ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಅಮಾನತು ಮಾಡಿತ್ತು.

“ನಾನು ನನ್ನ ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸ್ಪೀಕರ್ ಅವರಿಗೆ ನನ್ನ ರಾಜೀನಾಮೆ ಪತ್ರ ನೀಡಿದ್ದೇನೆ...”ಎಂದು ರೋಷನ್ ಬೇಗ್ ತಿಳಿಸಿದರು. ಕಾಂಗ್ರೆಸ್ ನಾಯಕರಾದ ಜಾರ್ಜ್, ಕೃಷ್ಣಭೈರೇಗೌಡ ಸ್ಪೀಕರ್ ಕಚೇರಿಯಲ್ಲಿದ್ದಾಗಲೇ ಶಾಸಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದರು.

ಇದರಿಂದಾಗಿ ಕಾಂಗ್ರೆಸ್ ಪಕ್ಷದ 11 ಮಂದಿ ಶಾಸಕರು ರಾಜೀನಾಮೆ ನೀಡಿದಂತಾಗಿದೆ. 79 ಮಂದಿಯ ಕಾಂಗ್ರೆಸ್ ಶಾಸಕಾಂಗದ ಬಲ ಇದೀಗ 68 ಕ್ಕೆ ಇಳಿದಿದೆ. ಜೆಡಿಎಸ್ ನ 38 ಶಾಸಕರ ಪೈಕಿ ಮೂವರ ರಾಜೀನಾಮೆಯಿಂದ ಆ ಪಕ್ಷದ ಶಾಸಕಾಂಗ ಸಂಖ್ಯೆ 35 ಕ್ಕೆ ಕುಸಿದಿದೆ. ಇದರಿಂದಾಗಿ ಒಟ್ಟಾರೆ ಮೈತ್ರಿ ಕೂಟದ ಬಲ ಒಟ್ಟು 14 ಶಾಸಕರ ರಾಜೀನಾಮೆಯಿಂದಾಗಿ 103 ಕ್ಕೆ ಇಳಿದು ಅಲ್ಪ ಮತಕ್ಕೆ ಕುಸಿದಿದೆ.

8 ಶಾಸಕರ ಅನರ್ಹತೆಗೆ ದೂರು

ಈ ನಡುವೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 11 ಕಾಂಗ್ರೆಸ್ ಶಾಸಕರ ಪೈಕಿ 8 ಮಂದಿಯ ವಿರುದ್ಧ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದರು. ಪ್ರಜಾಪ್ರತಿನಿಧಿ ಕಾಯ್ದೆ 164-1ಬಿ ಅನ್ವಯ 8 ಮಂದಿ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಲಾಯಿತು. ಆದರೆ, ಕಾಂಗ್ರೆಸ್‍ನ ಮೂವರು ಶಾಸಕರುಗಳಾದ ರಾಮಲಿಂಗಾರೆಡ್ಡಿ, ಆನಂದ್ ಸಿಂಗ್ ಹಾಗೂ ರೋಷನ್ ಬೇಗ್ ವಿರುದ್ಧ ಕಾಂಗ್ರೆಸ್ ದೂರು ನೀಡಿಲ್ಲ.

ಬೆದರಿಕೆಗೆ ಜಗ್ಗುವದಿಲ್ಲ

ಕಾಂಗ್ರೆಸ್ ವರಿಷ್ಠರ ಈ ನಡೆಗೆ ಪ್ರತಿಕಿಯಿಸಿದ ಮುಂಬೈನಲ್ಲಿರುವ ಶಾಸಕರುಗಳಾದ ಬಿ.ಸಿ. ಪಾಟೀಲ್, ಬೈರತಿ ಬಸವರಾಜು ಹಾಗೂ ಎಸ್.ಟಿ.ಸೋಮಶೇಖರ್ ಇವರುಗಳು ವರಿಷ್ಠರ ಬೆದರಿಕೆಗಳಿಗೆ ಜಗ್ಗುವದಿಲ್ಲ ಎಂದು ಸಂದೇಶ ರವಾನಿಸಿದ್ದಾರೆ. “ ನಮಗೂ ಕಾನೂನಿನ ಅರಿವಿದೆ. ಯಾವ ಕ್ರಮವನ್ನು ಎದುರಿಸಲೂ ಸಿದ್ಧರಿದ್ದೇವೆ. ನಾವು ಅಧಿಕಾರ ಬಯಸಿದವರಲ್ಲ್ಲ. ನಮ್ಮ ಕ್ಷೇತ್ರದಲ್ಲಿ ಯಾವದೇ ಕೆಲಸಗಳಾಗುತ್ತಿಲ್ಲ. ಸಮ್ಮಿಶ್ರ ಸರಕಾರದ ಆಡಳಿತದಲ್ಲಿ ಪ್ರತಿಸ್ಪಂದನ ಸಿಗುತ್ತಿಲ್ಲ ಎನ್ನುವ ಕಾರಣಕ್ಕಾಗಿ ರಾಜೀನಾಮೆ ಸಲ್ಲಿಸಿದ್ದು ಯಾವದೇ ಸಂದಿಗ್ಧ ಪರಿಸ್ಥಿತಿ ಎದುರಿಸಲು ಸಿದ್ಧರಿರುವದಾಗಿ ಸವಾಲೆಸೆದಿದ್ದಾರೆ.

ಷಡ್ಯಂತ್ರಗಳಿಗೆ ಜಗ್ಗುವದಿಲ್ಲ

ಈ ನಡುವೆ ಹೆಚ್.ವಿಶ್ವನಾಥ್ ಅವರ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಕೆಲವರು ಅಶ್ಲೀಲ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಪ್ರತ್ರಿಕ್ರಿಯಿಸಿರುವ ವಿಶ್ವನಾಥ್ ಅವರು ತಮ್ಮ ವಿರುದ್ಧದ ಅಶ್ಲೀಲ ಆಡಿಯೋ ಬಿಡುಗಡೆ ಮಾಡಿರುವದು ಎದುರಾಳಿಗಳ ಷಡ್ಯಂತ್ರ. ಇದರಲ್ಲಿ ಯಾವದೇ ಹುರುಳಿಲ್ಲ. ನನ್ನ ಜೀವನ ಏನು ಎಂಬುದು ನನ್ನ ಕ್ಷೇತ್ರದ ಜನರಿಗೆ ತಿಳಿದಿದೆ .

ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನನ್ನನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದ ಈ ರೀತಿಯ ಕೀಳು ರಾಜಕೀಯ ಮಾಡಲಾಗಿದೆ. ಹುಣಸೂರು ಕ್ಷೇತ್ರದಲ್ಲಿ ನನ್ನ ಎದುರಾಳಿಗಳು ನನ್ನ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಇಂತಹ ಬೆದರಿಕೆಗೆ ಬಗ್ಗುವ ಜಾಯಮಾನ ನಂದಲ್ಲ ಎಂದು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಪ್ರತಿಧ್ವನಿ

ಕರ್ನಾಟಕದ ರಾಜಕೀಯ ದೊಂಬರಾಟ ಇಂದು ಲೋಕಸಬೆಯಲ್ಲಿ ಎರಡನೇ ಬಾರಿಗೆ ಪ್ರತಿಧ್ವನಿಸಿತು. ಬಿಜೆಪಿ ಕುದುರೆ ವ್ಯಾಪಾರ ರಾಜಕಾರಣಕ್ಕೆ ಮುಂದಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು. ಕಾಂಗ್ರೆಸ್ ಆರೋಪವನ್ನು ನಿರಾಕರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಿಮ್ಮ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ಹೇಳಿದರು.

ಪ್ರಶ್ನೋತ್ತರ ವೇಳೆ ಬಳಿಕ ಕಾಂಗ್ರೆಸ್ ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಿದರು. ಆದರೆ, ಈ ವಿಚಾರವನ್ನು ನಿನ್ನೆಯೇ ಪ್ರಸ್ತಾಪಿಸಲಾಗಿದ್ದು, ಲೋಕಸಭೆಯನ್ನು ಪಾಲಿಕೆಯಂತೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಸ್ಪಷ್ಟವಾಗಿ ಹೇಳಿದರು.

ಅಜ್ಞಾತ ಸ್ಥಳಕ್ಕೆ ರಾಮಲಿಂಗಾರೆಡ್ಡಿ

ಮಾಜಿ ಸಚಿವ, ಬಿ.ಟಿ.ಎಂ.ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಮನವೊಲಿಸಲು ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಯಾವ ನಾಯಕರನ್ನೂ ಭೇಟಿ ಮಾಡಲು ಇಚ್ಚಿಸದ ಅವರು ಇಂದು ಸಂಜೆ ಅಜ್ಞಾತ ಸ್ಥಳಕ್ಕೆ ತೆರಳಿದರು.

ಮೈತ್ರಿಕೂಟದ ಈ ಬಿಕ್ಕಟ್ಟು ಪರಿಹಾರಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನಿರ್ದೇಶನದ ಮೇರೆಗೆ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಗುಲಾಂ ನಬೀ ಆಜಾದ್ ಇಂದು ಬೆಂಗಳೂರಿಗೆ ಆಗಮಿಸಿದ್ದು ಸ್ಥಳೀಯ ಮೈತ್ರಿ ಕೂಟದ ಮುಖಂಡರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ.

ಜುಲೈ 12ರಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಇಷ್ಟೆಲ್ಲ ಗೊಂದಲದ ಮಧ್ಯೆಯೂ ಅಧಿವೇಶನ ನಡೆÀಸಲು ಮೈತ್ರಿ ಸರಕಾರ ಮಂದಾಗಿರುವದು ಆಶ್ಚರ್ಯಕರ ಬೆಳವಣಿಗೆಯಾಗಿದೆ.

ವಿಶ್ವನಾಥ್‍ಗೆ ಕೇರಳ ಗವರ್ನರ್ ಗಿರಿ?

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಮಲ ಪಾಳಯಕ್ಕೆ ನುಗ್ಗಲು ಕಾಯುತ್ತಿರುವ ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿರುವದಾಗಿಯೂ ಮೂಲವೊಂದರಿಂದ ತಿಳಿದುಬಂದಿದೆ.