ಮಡಿಕೇರಿ, ಜು. 9: ನಗರಸಭೆ ಆಸ್ತಿ ತೆರಿಗೆ ಲೆಕ್ಕಾಚಾರ ಮಾಡುತ್ತಿರುವ ಬಗ್ಗೆ ಹಿಂದಿನ ಸಾಲಿನ ಎಸ್ಎಎಸ್ ಲೆಕ್ಕಾಚಾರ ಚಾಲ್ತಿ ಸಾಲಿನ ಲೆಕ್ಕಾಚಾರಕ್ಕೂ ವ್ಯತ್ಯಾಸ ಇರುವದಾಗಿ ಕೆಲವು ಸಾರ್ವಜನಿಕರಲ್ಲಿ ಇರುವ ಗೊಂದಲವನ್ನು ಸರಿಪಡಿಸಲು ಮ್ಯಾನ್ಯುವಲ್ ಸಿಸ್ಟಮ್ನಲ್ಲಿ ಮತ್ತು ಆನ್ಲೈನ್ ಸಿಸ್ಟಮ್ನಲ್ಲಿ ತೆರಿಗೆ ಲೆಕ್ಕಾಚಾರದಲ್ಲಿ ಆಗುತ್ತಿರುವ ವ್ಯತ್ಯಾಸದ ಬಗ್ಗೆ ಸಾರ್ವಜನಿಕರಿಗೆ ವಿವರಣೆ ನೀಡಲಾಗಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಆನ್ಲೈನ್ ಮೂಲಕ ಲೆಕ್ಕಾಚಾರಕ್ಕೆ ವ್ಯವಸ್ಥೆ ಮಾಡಿರುವಂತೆ ನಗರಸಭೆಯಲ್ಲಿ ಆನ್ಲೈನ್ ಲೆಕ್ಕಾಚಾರ ಮೂಲಕ ಮಾತ್ರ ತೆರಿಗೆ ಪಾವತಿಗೆ ಅವಕಾಶ ಇದೆ. ಸ್ವತ್ತಿನ ತೆರಿಗೆ ಲೆಕ್ಕಾಚಾರ ಮಾಡುವಾಗ ಸ್ಟಾಂಪ್ ಡ್ಯೂಟಿ ಆಕ್ಟ್ ಪ್ರಕಾರ ಚಾಲ್ತಿಯಲ್ಲಿರುವ ನಿವೇಶನ ಮಾರುಕಟ್ಟೆ ದರ, ಕಟ್ಟಡ ನಿರ್ಮಾಣಗೊಂಡ ವರ್ಷ, ಕಟ್ಟಡ ನಿರ್ಮಾಣ ಸ್ವರೂಪ, ಕಟ್ಟಡ ಆವರಿಸಿದ ಭೂಮಿಯ ಮೌಲ್ಯ, ಕಟ್ಟಡ ನಿರ್ಮಿಸಿದ ಪ್ರದೇಶದ ಮಾಹಿತಿ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದೆ. ಆನ್ಲೈನ್ನಲ್ಲಿ ತೆರಿಗೆ ಲೆಕ್ಕಾಚಾರವಾಗುತ್ತದೆ. ನಂತರ ಸರ್ಕಾರ ನಿಗಧಿಗೊಳಿಸಿದ ಪ್ರಕಾರ ಶೇ. 26 ಸೆಸ್ಸ್ ಮತ್ತು ಘನತ್ಯಾಜ್ಯ ಉಪಕರ ಸೇರುತ್ತದೆ. ಇದರೊಂದಿಗೆ ಏಪ್ರಿಲ್ ಮಾಹೆಯಲ್ಲಿ ಚಾಲ್ತಿ ಸಾಲಿನ ತೆರಿಗೆ ಪಾವತಿಸಿದಲ್ಲಿ ಶೇ. 5 ಕಡಿತ ಇದೆ. ಮೇ ಮಾಹೆಯಲ್ಲಿ ತೆರಿಗೆ ಪಾವತಿಸಿದಲ್ಲಿ ರಿಬೇಟ್ ಇಲ್ಲ, ದಂಡವು ಇಲ್ಲ. ಜೂನ್ ಮಾಹೆಯಿಂದ ಪ್ರತಿ ಮಾಹೆ ಶೇ. 2 ದಂಡ ತೆರಿಗೆಯೊಂದಿಗೆ ಲೆಕ್ಕಾಚಾರವಾಗುತ್ತದೆ. ಈ ರೀತಿ ಆನ್ಲೈನ್ನಲ್ಲಿ ತೆರಿಗೆ ಲೆಕ್ಕಾಚಾರ ವ್ಯವಸ್ಥೆ ಇದ್ದು, ನಗರಸಭೆ ತೆರಿಗೆ ಲೆಕ್ಕಾಚಾರ ಮಾಡುವಾಗ ಸ್ವತ್ತಿನ ಮಾಹಿತಿಯನ್ನು ಮಾತ್ರ ಗಣಕಯಂತ್ರದಲ್ಲಿ ಫೀಡ್ ಮಾಡಲು ಅವಕಾಶ ಇದೆ. ತೆರಿಗೆ ಮೊತ್ತ ಸಾಫ್ಟ್ವೇರ್ನಲ್ಲಿ ಲೆಕ್ಕಾಚಾರವಾಗಿ ಬರುತ್ತದೆ.
ಸಾರ್ವಜನಿಕರಲ್ಲಿ ನಗರಸಭೆ ದುಪ್ಪಟ್ಟು ತೆರಿಗೆ ವಿಧಿಸುತ್ತಿದೆ ಎಂದು ತಪ್ಪು ಕಲ್ಪನೆ ಇದ್ದು, ಯಾವದೇ ಕಾರಣಕ್ಕೂ ಆನ್ಲೈನ್ನಲ್ಲಿ ತೆರಿಗೆ ಲೆಕ್ಕಾಚಾರ ತಪ್ಪಾಗಲು ಸಾಧ್ಯವಿಲ್ಲ. ಸಾಫ್ಟ್ವೇರ್ನಲ್ಲಿ ಗೈಡ್ಲೈನ್ ವ್ಯಾಲಿವ್ಯೂ, ರೇಟ್ ಆಫ್ ಟ್ಯಾಕ್ಸ್ ಸೇರಿದಂತೆ ಎಲ್ಲವೂ ಈಗಾಗಲೇ ಫೀಡ್ ಆಗಿರುವಂತೆ ಲೆಕ್ಕಾಚಾರವಾಗುತ್ತದೆ.
ನಗರ ಯೋಜನೆ ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳಿಗೆ ತೆರಿಗೆಯ ಎರಡರಷ್ಟಕ್ಕೆ ಸಮನಾದ ದಂಡ ವಸೂಲು ಮಾಡಲು ಕಾಯಿದೆಯಲ್ಲಿ ನಮೂದಿಸಲಾಗಿದೆ. ಮ್ಯಾನ್ಯೂವೆಲ್ನಲ್ಲಿ ಎಸ್ಎಎಸ್ ಲೆಕ್ಕಾಚಾರ ಮಾಡುವಾಗ ಪ್ರತಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಆಗುವ ಮಾರುಕಟ್ಟೆ ದರ ತೆಗೆದುಕೊಳ್ಳದೇ 2007-2008ನೇ ಸಾಲಿನ ಮಾರುಕಟ್ಟೆ ದರ ತೆಗೆದುಕೊಳ್ಳಲಾಗುತ್ತಿತ್ತು. ಆದರಿಂದ ಮ್ಯಾನ್ಯುವೇಲ್ ಲೆಕ್ಕಾಚಾರಕ್ಕೂ ಆನ್ಲೈನ್ ಲೆಕ್ಕಾಚಾರಕ್ಕೂ ವ್ಯತ್ಯಾಸ ಬರಲು ಕಾರಣವಾಗಿದೆ. ಇನ್ನೂ ಕೂಡ ಆನ್ಲೈನ್ ತೆರಿಗೆ ಲೆಕ್ಕಾಚಾರದಲ್ಲಿ ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ತಿಳಿಸಿದ್ದಾರೆ.