ಮಡಿಕೇರಿ, ಜು. 9: ಸರಿ ಸುಮಾರು ಒಂದು ವರ್ಷ ಮೂರು ತಿಂಗಳ ಹಿಂದೆ; ಅಂದಿನ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಂ ಅವರಿಂದ ಉದ್ಘಾಟನೆಗೊಂಡಿದ್ದ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಮೂಲಕ ಬಸ್ಗಳ ಸಂಚಾರಕ್ಕೆ ಕೊನೆಗೂ ತಾ. 10 (ಇಂದಿನಿಂದ) ಯೋಗ ಕೂಡಿ ಬಂದಿದೆ. ಈ ಸಂಬಂಧ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದೆ. ಆದರೆ ಶೌಚಾಲಯ - ವಿದ್ಯುತ್ - ಆಸನ - ಶುಚಿತ್ವದ ಕೊರತೆ ಕಂಡು ಬಂದಿದ್ದು, ಮಳೆ ನೀರು ಸರಾಗವಾಗಿ ಮೈದಾನ ದಿಂದ ಹರಿದು ಹೋಗದೆ ಅಲ್ಲಿಯೇ ಶೇಖರಣೆಗೊಂಡಿದೆ.2018ರ ಮಾರ್ಚ್ 22 ರಂದು ಅಂದಿನ ಉಸ್ತುವಾರಿ ಸಚಿವರು; ನಗರಸಭೆಯಿಂದ (ಮೊದಲ ಪುಟದಿಂದ) ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಿದ್ದರೂ; ಇದುವರೆಗೆ ಬಸ್ ಸಂಚಾರಕ್ಕೆ ಅಧಿಕೃತ ಮಾರ್ಗಸೂಚಿ ಲಭಿಸಿರಲಿಲ್ಲ. ತಾ. 6 ರಂದು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಪೊಲೀಸ್ ಇಲಾಖೆ, ಸಾರಿಗೆ ಪ್ರಾಧಿಕಾರ, ನಗರಸಭೆ ಹಾಗೂ ಖಾಸಗಿ ಬಸ್ ಮಾಲೀಕರೊಂದಿಗೆ ಚರ್ಚಿಸಿ ಬಸ್ ಮಾರ್ಗಕ್ಕೆ ಖುದ್ದು ಪರಿಶೀಲನೆ ಯೊಂದಿಗೆ ಕ್ರಮ ವಹಿಸಿದ್ದರು. ಆ ಪ್ರಕಾರ ತಾ. 10 (ಇಂದಿನಿಂದ) ಎಲ್ಲ ಖಾಸಗಿ ಬಸ್ಗಳು ನಗರದ ಜನರಲ್ ತಿಮ್ಮಯ್ಯ ವೃತ್ತ, ಮೇ. ಮಂಗೇರಿರ ಮುತ್ತಣ್ಣ ವೃತ್ತಕ್ಕಾಗಿ ಗಾಂಧಿ ಮೈದಾನ; ರಾಜಾಸೀಟ್ ರಸ್ತೆ ಮೂಲಕ ಹೊಸ ಬಡಾವಣೆಗಾಗಿ ನೂತನ ಬಸ್ ನಿಲ್ದಾಣಕ್ಕೆ ಆಗಮಿಸುವಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಅಲ್ಲಿಂದ ಪತ್ರಿಕಾ ಭವನ, ಕೈಗಾರಿಕಾ ಬಡಾವಣೆ ರಸ್ತೆ ಮುಖಾಂತರ ಕೆಎಸ್ಆರ್ಟಿಸಿ ನಿಲ್ದಾಣ, ಹಳೆಯ ಖಾಸಗಿ ಬಸ್ ನಿಲ್ದಾಣ ಮೂಲಕ ಎಂದಿನಂತೆ ಬಸ್ಗಳು ಬೇರೆ ಬೇರೆ ಮಾರ್ಗವಾಗಿ ಸಾಗಲು ನಿರ್ದೇಶಿಸಲಾಗಿದೆ. ಈ ಸಂಬಂಧ ಹೆಚ್ಚಿನ ಪೊಲೀಸರನ್ನು ಅಲ್ಲಲ್ಲಿ ನಿಯೋಜಿಸುವ ಮೂಲಕ ಸಂಚಾರ ಸುಗಮಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಮುಂದಿನ 25 ದಿವಸಗಳ ತನಕ ಈ ಪ್ರಾಯೋಗಿಕ ಸಂಚಾರ ಮುಂದುವರಿಯಲಿದ್ದು, ಆ ಬಳಿಕ ಜನತೆಯ ಅಭಿಪ್ರಾಯ ತೆಗೆದು ಕೊಂಡು ಅವಶ್ಯಕ ಎನಿಸಿದರೆ, ಸೂಕ್ತ ಮಾರ್ಪಾಡು ಕೈಗೊಳ್ಳಲಾಗುವದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೊರತೆಗಳ ಆಗರ : ಜಿಲ್ಲಾಡಳಿತ ಕೊನೆಗೂ ನೂತನ ಬಸ್ ನಿಲ್ದಾಣದಿಂದ ಬಸ್ ಸಂಚಾರಕ್ಕೆ ಕ್ರಮ ವಹಿಸಿ ನಗರಸಭೆಗೆ ನಿರ್ದೇಶನ ನೀಡಿದ್ದರೂ; ನೂತನ ನಿಲ್ದಾಣದಲ್ಲಿ ಸಮಸ್ಯೆಗಳ ಆಗರದೊಂದಿಗೆ ಕನಿಷ್ಟ ಮೂಲಭೂತ ಸೌಕರ್ಯ ಕಲ್ಪಿಸದಿರುವದು ಗೋಚರಿಸಿದೆ. ಈ ಬಗ್ಗೆ ಖಾಸಗಿ ಬಸ್ ಕಾರ್ಮಿಕರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬಸ್ ನಿಲ್ದಾಣದಲ್ಲಿ ಮಳೆ ತೀವ್ರಗೊಂಡರೆ ಅಲ್ಲಿ ಪ್ರಯಾಣಿಕರಿಗೆ ನಿಲುಗಡೆಗೂ ತೊಂದರೆ ಉಂಟಾಗುವ ವಾತಾವರಣ ಗೋಚರಿಸಿದ್ದು, ಬಸ್ ನಿಲ್ದಾಣ ವರ್ಷದ ಹಿಂದೆಯೇ ಉದ್ಘಾಟನೆ ಗೊಂಡಿದ್ದರೂ; ನಗರಸಭೆಯ ನಿರ್ಲಕ್ಷ್ಯ ಎದ್ದು ಕಾಣುವಂತಾಗಿದೆ ಎಂದು ಸಂಘದ ಪದಾಧಿಕಾರಿಗಳು ಟೀಕಿಸಿದ್ದಾರೆ.
ನಿಲ್ದಾಣದ ನಾಲ್ಕು ದಿಕ್ಕಿನಲ್ಲಿ ಗಾಳಿ - ಮಳೆಯಿಂದ ಎರಚಲು ನೀರು ಸಂಗ್ರಹಗೊಳ್ಳುವಂತಾಗಿದೆ; ಇನ್ನು ಪ್ರಯಾಣಿಕರು ಶೌಚಾಲಯ ಬಳಸದಷ್ಟು ಗಲೀಜು ಕಾಣಿಸಿ ಕೊಂಡಿದ್ದು; ಎಲ್ಲಿಂದಲೋ ಬಂದಿರುವ ಹೊರ ರಾಜ್ಯದ ಕಾರ್ಮಿಕನೊಬ್ಬ ಮಹಿಳಾ ಶೌಚಾಲಯ ಕೋಣೆಯೊಂದರಲ್ಲಿ ಉಸ್ತುವಾರಿ ನೋಡಿಕೊಳ್ಳಲು ತಂಗಿದ್ದು ಗೋಚರಿಸಿದೆ.
ನಿನ್ನೆಯಷ್ಟೇ ನಗರಸಭೆಯಿಂದ ನೀರಿನ ಟ್ಯಾಂಕೊಂದು ಅಲ್ಲಿ ನಿಂತಿದ್ದರೂ, ಮೂರು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಇಡೀ ನಿಲ್ದಾಣದಲ್ಲಿ ಬೆಳಕಿನ ಕೊರತೆ ಎದುರಾಗಿದೆ. ಬಸ್ ನಿಲ್ದಾಣದ ಸುತ್ತಲೂ ಮಳೆ ನೀರು ನಿಂತಿದ್ದು, ಓಡಾಡಲು ಕಷ್ಟವಾಗಿದೆ. ಕೊನೆಯ ಘಳಿಗೆಯಲ್ಲಾದರೂ ನಗರಸಭೆ ಸ್ವಚ್ಛತೆಯೊಂದಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮವಹಿಸಬೇಕಿದೆ.