ಮಡಿಕೇರಿ, ಜು. 9: ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನ ಮಾಡುತ್ತಿದ್ದು, ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದೆ.

ನಗರದ ಗಾಂಧಿ ಮೈದಾನದ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಬಿಜೆಪಿ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ ಮಾತ ನಾಡಿ, ರಾಜ್ಯದಲ್ಲಿ ಅಧಿಕಾರಕ್ಕೇರ ಬೇಕೆಂಬ ದುರುದ್ದೇಶ ದಿಂದ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬರಲು ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿ ಹಾಗೂ ಬಿ.ಜೆ.ಪಿ. ರಾಜ್ಯಾಧ್ಯಕ್ಷರು ನಿರ್ದೇಶನ ನೀಡಿದ್ದಾರೆ. ಸತತ 7 ಬಾರಿ ಮೈತ್ರಿ ಪಕ್ಷವನ್ನು ಕೆಳಗಿಳಿಸಲು ಬಿಜೆಪಿ ಮಾಡಿರುವ ಪ್ರಯತ್ನ ವಿಫಲಗೊಂಡಿದ್ದು, ಈ ಬಾರಿಯೂ ವಿಫಲ ಪ್ರಯತ್ನ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಭದ್ರವಾಗಿದೆ. ಅಸ್ತಿರಗೊಳಿಸಲು ಮಾಡುತ್ತಿರುವ ಷಡ್ಯಂತ್ರಕ್ಕೆ ನಾವು ಜಗ್ಗಲ್ಲ. ಬಿಜೆಪಿಗೆ ಸಂಸ್ಕಾರ ಇದ್ದರೆ ಈ ರೀತಿಯ ಆಲೋಚನೆಯನ್ನು ಬಿಡಬೇಕು ಎಂದು ಕಿಡಿಕಾರಿದರು.

ಈ ಸಂದರ್ಭ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ನಗರಾಧ್ಯಕ್ಷ ಅಬ್ದುಲ್ ರಜಾಕ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಪ್ರಮುಖರಾದ ವಿ.ಪಿ. ಶಶಿಧರ್, ಅಪ್ರು ರವೀಂದ್ರ, ನಂದಕುಮಾರ್, ಮಡಿಕೇರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ ಸೇರಿದಂತೆ ಕಾಂಗ್ರೆಸ್‍ನ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.