ಮಡಿಕೇರಿ, ಜು. 9: ಕಾಸರಗೋಡು ಜಿಲ್ಲಾಧಿಕಾರಿಗಳ ಕೋರಿಕೆ ಮೇರೆಗೆ ಪಾಣತ್ತೂರುವಿನಿಂದ ಕರಿಕೆ ಮೂಲಕ ಸರಕಾರದ ಕಾರ್ಯ ನಿಮಿತ್ತ ಗೇರು ಮರದ ನಾಟಾಗಳನ್ನು ಸಾಗಾಟ ಮಾಡಲು ನೀಡಿದ್ದ ಆದೇಶವನ್ನು ಕೊಡಗು ಜಿಲ್ಲಾಧಿಕಾರಿಗಳು ರದ್ದು ಪಡಿಸಿದ್ದಾರೆ.ಜಿಲ್ಲಾದ್ಯಂತ ಭಾರೀ ವಾಹನಗಳ ಸಂಚಾರ ಹಾಗೂ ಮರ, ಮರಳು ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ ಅವರು ಆದೇಶ ಹೊರಡಿಸಿದ್ದಾರೆ. ಆದರೆ, ಸರಕಾರಿ ಬಳಕೆಗೆ ಸಾಗಾಟಕ್ಕೆ ಅನುಮತಿ ಮೇರೆ ಅವಕಾಶ ನೀಡಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ನೆರೆಯ ಕಾಸರಗೋಡು ಜಿಲ್ಲಾಧಿಕಾರಿಗಳ ಕೋರಿಕೆ ಮೇರೆಗೆ ಕರಿಕೆ ವ್ಯಾಪ್ತಿಯಲ್ಲಿ ಎರಡು ಕಿ.ಮೀ. ನಷ್ಟು ಮಾರ್ಗದಲ್ಲಿ ಸಂಚರಿಸಲು ಅನುಮತಿ ನೀಡಿದ್ದರು. ಆದರೆ, ಮರಗಳನ್ನು ತುಂಬಿದ ಲಾರಿಗಳು ನಿಯಮ ಮೀರಿ ಗ್ರಾಮದ ರಸ್ತೆಯಲ್ಲಿ ರಾಜಾರೋಷವಾಗಿ ಸಂಚರಿಸುತ್ತಿರುವ ಬಗ್ಗೆ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ‘ಶಕ್ತಿ’ ಈ ಬಗ್ಗೆ ಬೆಳಕು ಚೆಲ್ಲಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ನೀಡಿರುವ ಅನುಮತಿಯನ್ನು ರದ್ದು ಪಡಿಸುವದಾಗಿ ತಿಳಿಸಿದ್ದಾರೆ. ಅಲ್ಲದೆ, ಅಗತ್ಯವಿದ್ದಲ್ಲಿ ಕಾಸರಗೋಡು ಜಿಲ್ಲಾಧಿಕಾರಿಗಳು ಅನುಮತಿ ಕೋರಿ ಲಿಖಿತವಾಗಿ ನಿರ್ದಿಷ್ಟ ಮಾರ್ಗದ ದೂರದ ಬಗ್ಗೆ ನೀಡಿದಲ್ಲಿ ಪರಿಶೀಲಿಸಿ, ಪರಿಗಣಿಸುವದಾಗಿ ತಿಳಿಸಿದ್ದಾರೆ.