ಮಡಿಕೇರಿ, ಜು. 9: ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ತೊಂದರೆಗೆ ತುತ್ತಾದ ಸಂತ್ರಸ್ತ ಸಹಕಾರಿಗಳಿಗೆ ಪರಿಹಾರ ವಿತರಣಾ ಕಾರ್ಯಕ್ರಮ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ನಡೆಯಿತು.
ನಗರದ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ್ರಸ್ತ ಸಹಕಾರಿಗಳಿಗೆ ಚೆಕ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆಟೋಳಿ ಸಿ. ಯತೀಶ್ ಕುಮಾರ್ ಅವರು ಸಹಕಾರ ಬ್ಯಾಂಕುಗಳಲ್ಲಿ ಹೆಚ್ಚಿನ ಸಾಲ ಸೌಲಭ್ಯವನ್ನು ರೈತರಿಗೆ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
ಕೃಷಿಕರ ಆರ್ಥಿಕ ಚಟುವಟಿಕೆ ಉತ್ತಮಪಡಿಸುವ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್‍ಗಳು ರೈತರಿಗೆ ಅಗತ್ಯ ನೆರವು ನೀಡಬೇಕಿದೆ. ಆ ನಿಟ್ಟಿನಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸಬೇಕು. ರಾಜ್ಯದ 21 ಡಿಸಿಸಿ ಬ್ಯಾಂಕ್‍ಗಳಲ್ಲಿ ಕೊಡಗಿನ ಡಿಸಿಸಿ ಬ್ಯಾಂಕ್ ಉತ್ತಮ ಆಗಿದೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಮಾತನಾಡಿ, ಕಳೆದ ಬಾರಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಸಂತ್ರಸ್ತ ಸಹಕಾರಿಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮುಂದಾಗಿದ್ದು, ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳ ಸಂತ್ರಸ್ತ ಸಹಕಾರಿಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ದೇಣಿಗೆ ಸಂಗ್ರಹಿಸಿ ಕೈಲಾದ ಸಹಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆ. ಹರೀಶ್ ಪೂವಯ್ಯ, ನಿರ್ದೇಶಕರಾದ ಬಿ.ಡಿ. ಮಂಜುನಾಥ, ಮನು ಮುತ್ತಪ್ಪ, ಹೊಸೂರು ಸತೀಶ್ ಕುಮಾರ್, ಬಿ.ಕೆ. ಚಿಣ್ಣಪ್ಪ, ಉಷಾ ತೇಜಸ್ವಿ, ಹೆಚ್.ಎಂ. ರಮೇಶ್, ರಘು ನಾಣಯ್ಯ, ಭರತ್ ಕುಮಾರ್, ಕನ್ನಂಡ ಸಂಪತ್, ಜಗದೀಶ್, ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎಲ್. ಬಾಲಚಂದ್ರ, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ರವಿಕುಮಾರ್ ಇತರರು ಇದ್ದರು.
ಈ ಸಂದರ್ಭ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ವತಿಯಿಂದ ರೂ. 3 ಲಕ್ಷಗಳ ಚೆಕ್‍ನ್ನು ಬ್ಯಾಂಕಿನ ಸಿಇಒ ಡಾ. ಕೆಟೋಳಿ ಸಿ. ಯತೀಶ್ ಕುಮಾರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.
ಬ್ಯಾಂಕಿನ ನಟರಾಜು ಸ್ವಾಗತಿಸಿ, ಮಂಜುಳಾ ಪ್ರಾರ್ಥಿಸಿ, ನಿರೂಪಿಸಿದರು. ಮೋಹನ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಬೋಜಮ್ಮ ವಂದಿಸಿದರು.