ಸೋಮವಾರಪೇಟೆ, ಜು. 9: ನೆರೆಯ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂದಿ ಕೊಡಗಿನೊಂದಿಗೆ ನಂಟು ಬೆಳೆಸಲು ಉತ್ಸುಕರಾಗಿದ್ದು, ಈ ಬಗೆಗಿನ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದ್ದರೂ ಈವರೆಗೆ ಯಾವದೇ ಫಲಕಾಣದೇ ಸ್ಥಗಿತಗೊಂಡಿದೆ.
ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ವ್ಯಾಪ್ತಿಗೆ ಒಳಪಡುವ, ಸೋಮವಾರಪೇಟೆ ತಾಲೂಕಿನ ಗಡಿಯೊಂದಿಗೆ ಪ್ರದೇಶ ವನ್ನು ಹೊಂದಿಕೊಂಡಿರುವ ವಣಗೂರು, ಉಚ್ಚಂಗಿ, ಚಂಗಡಹಳ್ಳಿ ಮತ್ತು ಹೊಸೂರು ಗ್ರಾಮ ಪಂಚಾಯಿತಿಯನ್ನು ಸೋಮವಾರ ಪೇಟೆ ತಾಲೂಕಿಗೆ ಒಳಪಡಿಸುವಂತೆ ಆ ಭಾಗದ ಮಂದಿ ನಿರಂತರವಾಗಿ ಒತ್ತಡ ಹೇರುತ್ತಲೇ ಬಂದಿದ್ದಾರೆ.
ಈ ಬಗೆಗಿನ ವಿಸ್ತøತ ವಿವರಗಳನ್ನು ಒಳಗೊಂಡ ಮನವಿಯನ್ನು ಹಿಂದಿನ ರಾಜ್ಯ ಸರ್ಕಾರಕ್ಕೂ ಸಲ್ಲಿಸಲಾಗಿದ್ದು, ಅಲ್ಲಿಂದ ಯಾವದೇ ಸ್ಪಂದನೆ ಬಾರದೇ ಪ್ರಸ್ತಾವನೆಯ ಬೆಳವಣಿಗೆ ಸ್ಥಗಿತ ಗೊಂಡಿದೆ. ಈ 4 ಗ್ರಾಮ ಪಂಚಾಯಿತಿಗಳು ಸೋಮವಾರಪೇಟೆ ತಾಲೂಕು ಕೇಂದ್ರ ಮತ್ತು ಶನಿವಾರ ಸಂತೆಯ ಹೋಬಳಿ ಕೇಂದ್ರಕ್ಕೆ ಹತ್ತಿರ ವಾಗಿರುವ ಹಿನ್ನೆಲೆ, ಕೊಡಗಿನೊಂದಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯ ಕೇಳಿ ಬರುತ್ತಿದೆ.
ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, 15 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಬಹುತೇಕ ಮಂದಿ ದಿನನಿತ್ಯದ ಎಲ್ಲಾ ಕೆಲಸ ಕಾರ್ಯಗಳಿಗೆ ಸೋಮವಾರಪೇಟೆ, ಶನಿವಾರಸಂತೆ ಮತ್ತು ಕೊಡ್ಲಿಪೇಟೆಯನ್ನೇ ಅವಲಂಭಿಸಿದ್ದು, ಶೇ. 60ಕ್ಕೂ ಅಧಿಕ ವಿದ್ಯಾರ್ಥಿಗಳು ಶನಿವಾರಸಂತೆ ಮತ್ತು ಕೊಡ್ಲಿಪೇಟೆಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಕೋಡಿ ಗ್ರಾಮ ಸೋಮವಾರಪೇಟೆ ತಾಲೂಕು ಕೇಂದ್ರಕ್ಕೆ 10 ಕಿ.ಮೀ. ದೂರದಲ್ಲಿದ್ದರೆ, ಸಕಲೇಶಪುರ ತಾಲೂಕು ಕೇಂದ್ರಕ್ಕೆ 80 ಕಿ.ಮೀ. ದೂರವಿದೆ. ಹೋಬಳಿ ಕೇಂದ್ರ ಯಸಳೂರಿಗೆ 25 ಕಿ.ಮೀ. ಇದ್ದರೆ, ಶನಿವಾರಸಂತೆಗೆ ಕೇವಲ 5 ಕಿ.ಮೀ. ದೂರದಲ್ಲಿದೆ.
ಈ ನಾಲ್ಕು ಗ್ರಾಮ ಪಂಚಾಯಿತಿಗಳು ಸೋಮವಾರಪೇಟೆ ತಾಲೂಕಿನ ಗೌಡಳ್ಳಿ, ತೋಳೂರು ಶೆಟ್ಟಳ್ಳಿ, ಕೊಡ್ಲಿಪೇಟೆ ಮತ್ತು ಶನಿವಾರ ಸಂತೆ ಗ್ರಾ.ಪಂ.ಗಳಿಗೆ ಒತ್ತಿಕೊಂಡಂತೆ ಇದೆ. 3 ಭಾಗ ಕೊಡಗು ಜಿಲ್ಲೆಯ ಗಡಿಯನ್ನು ಹೊಂದಿಕೊಂಡಿದ್ದರೆ ಒಂದು ಭಾಗ ಮಾತ್ರ ಹಾಸನ ಜಿಲ್ಲೆಯನ್ನು ಹೊಂದಿಕೊಂಡಿದೆ.
ಇದರೊಂದಿಗೆ ಈ 4 ಗ್ರಾಮ ಪಂಚಾಯಿತಿಗಳೂ ಸಹ ಅಗತ್ಯ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಬಸ್ ಸೌಕರ್ಯವೂ ಸಮರ್ಪಕವಾಗಿಲ್ಲ. ಹೋಬಳಿ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳು ದೂರದಲ್ಲಿದ್ದು, ಸೋಮವಾರಪೇಟೆ ತಾಲೂಕಿಗೆ ಒಳಪಡಿಸಿದರೆ ಅನುಕೂಲ ವಾಗುತ್ತದೆ ಎಂದು ಈ ಭಾಗದ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂದಿ ವ್ಯಾಪಾರ ವಹಿವಾಟು, ಮದುವೆ ಕಾರ್ಯ, ಇನ್ನಿತರ ಸಮಾರಂಭ ಗಳಿಗೂ ಸಹ ಶನಿವಾರಸಂತೆಯನ್ನೇ ಅವಲಂಭಿಸಿದ್ದಾರೆ. ಇದರೊಂದಿಗೆ ಕೊಡಗಿನ ಸಂಸ್ಕøತಿಯನ್ನೇ ಆ ಭಾಗದ ಮಂದಿ ಹೊಂದಿದ್ದು, ಕಾಫಿ, ಕರಿಮೆಣಸು, ಭತ್ತ, ಕಿತ್ತಳೆ, ಶುಂಠಿ, ಬಾಳೆ ಸೇರಿದಂತೆ ಕೊಡಗಿನ ಬೆಳೆಗಳನ್ನೇ ಬೆಳೆಯುತ್ತಿದ್ದಾರೆ. ಎಲ್ಲಾ ವಹಿವಾಟುಗಳಿಗೂ ಕೊಡಗು ಜಿಲ್ಲೆಯನ್ನು ಆಶ್ರಯಿಸಿರುವ ಈ ಭಾಗದ ಮಂದಿ ಸರ್ಕಾರಿ ಕೆಲಸ ಕಾರ್ಯಗಳು, ಕಂದಾಯ ಇಲಾಖೆಗೆ ಸಂಬಂಧಿಸಿದ ವ್ಯವಹಾರಗಳಿಗೆ ಮಾತ್ರ ಹಾಸನ, ಸಕಲೇಶಪುರವನ್ನು ಅವಲಂಭಿಸಿದ್ದಾರೆ.
ಸೋಮವಾರಪೇಟೆ ತಾಲೂಕಿಗೆ ಒಳಪಟ್ಟಿದ್ದ ಕುಶಾಲನಗರವನ್ನು ಇದೀಗ ಪ್ರತ್ಯೇಕ ತಾಲೂಕಾಗಿ ಸರ್ಕಾರ ಘೋಷಣೆ ಮಾಡಿದ್ದು, ಹಲವಷ್ಟು ಗ್ರಾಮ ಪಂಚಾಯಿತಿಗಳು ನೂತನ ತಾಲೂಕಿಗೆ ಸೇರ್ಪಡೆಗೊಳ್ಳುವ ಹಿನ್ನೆಲೆ ಸೋಮವಾರಪೇಟೆ ತಾಲೂಕಿನ ಭೂಪ್ರದೇಶ ಹಾಗೂ ಜನಸಂಖ್ಯೆ ಇಳಿಮುಖಗೊಳ್ಳಲಿದೆ. ಈ ಹಿನ್ನೆಲೆ ಹಾಸನ ಜಿಲ್ಲೆಯ 4 ಗ್ರಾ.ಪಂ.ಗಳನ್ನು ಸೋಮವಾರಪೇಟೆಗೆ ಸೇರ್ಪಡೆ ಗೊಳಿಸಲು ಸರ್ಕಾರ ಮುಂದಾಗಬೇಕೆಂದು ಆ ಭಾಗದ ಮಲೆನಾಡು ಹೋರಾಟ ಸಮಿತಿಯ ಪದಾಧಿಕಾರಿಗಳು ಆಗ್ರಹಿಸುತ್ತಿದ್ದಾರೆ.
ಸೋಮವಾರಪೇಟೆ ತಾಲೂಕಿಗೆ ಸೇರ್ಪಡೆಗೊಳಿಸಿದರೆ ಹೆಚ್ಚಿನ ಅನುಕೂಲವಾಗಲಿದ್ದು ಈ ಬಗ್ಗೆ ಸರ್ಕಾರ ತುರ್ತು ಗಮನ ಹರಿಸಬೇಕು ಎಂದು ಮಲೆನಾಡು ಹೋರಾಟ ಸಮಿತಿಯ ಅಧ್ಯಕ್ಷ ಮಾಗೇರಿ ರಾಜು, ಗೌರವಾಧ್ಯಕ್ಷ ಲಕ್ಷ್ಮಣ್ ಅವರುಗಳು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.
-ವಿಜಯ್ ಹಾನಗಲ್