ಸೋಮವಾರಪೇಟೆ, ಜು. 9: ಕದ್ದು ಮುಚ್ಚಿ ನಡೆಯುತ್ತಿರುವ ಗಾಂಜಾ ವ್ಯವಹಾರದ ಬೆನ್ನತ್ತಿರುವ ಸೋಮವಾರಪೇಟೆ ಪೊಲೀಸರು ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಕೂಡಿಗೆಯ ವಿದ್ಯಾರ್ಥಿಯೋರ್ವ ಬಂಧಿಸಲ್ಪಟ್ಟಿದ್ದಾನೆ.ಸೋಮವಾರಪೇಟೆ ಪಟ್ಟಣದ ಜೂನಿಯರ್ ಕಾಲೇಜು ಸಮೀಪ ಕಾಲೇಜು ವಿದ್ಯಾರ್ಥಿಗಳು ಮತ್ತು ಗಾಂಜಾ ವ್ಯಸನಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಠಾಣಾಧಿಕಾರಿ ಶಿವಶಂಕರ್ ನೇತೃತ್ವದ ತಂಡ ಧಾಳಿ ನಡೆಸಿ, ಸುಮಾರು 170 ಗ್ರಾಂ ಗಾಂಜಾ ಸಹಿತ ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ.ಕುಶಾಲನಗರದಲ್ಲಿ ಪ್ರಥಮ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ, ಅಪ್ರಾಪ್ತ ಯುವಕನೇ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲೆತ್ನಿಸಿ ಪೊಲೀಸರ ಅತಿಥಿಯಾದವನು.ಇಂದು ಅಪರಾಹ್ನ 4 ಗಂಟೆ ಸುಮಾರಿಗೆ ಕೂಡಿಗೆಯಿಂದ ಪಲ್ಸರ್ ಬೈಕ್‍ನಲ್ಲಿ ಪಟ್ಟಣಕ್ಕೆ ಆಗಮಿಸಿ, ಜೂನಿಯರ್ ಕಾಲೇಜು ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ದೊರೆತ ಸುಳಿವಿನ ಮೇರೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ಸಮಕ್ಷಮ ವಿದ್ಯಾರ್ಥಿ ದೇಹ ಪರಿಶೀಲಿಸಿದಾಗ ಗಾಂಜಾ ಕಂಡುಬಂದಿದೆ.
ಮೈಸೂರಿನಿಂದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದುದಾಗಿ ಬಂಧಿತ ವಿದ್ಯಾರ್ಥಿ ಪೊಲೀಸ್ ವಿಚಾರಣೆ (ಮೊದಲ ಪುಟದಿಂದ) ವೇಳೆ ಬಾಯ್ಬಿಟ್ಟಿದ್ದು, ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.
ಪಲ್ಸರ್ ಬೈಕ್, 200 ರೂ. ನಗದು ಸೇರಿದಂತೆ 170 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿವೈಎಸ್‍ಪಿ ಮುರಳೀಧರ್, ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಎಸ್.ಐ. ಮೋಹನ್‍ರಾಜ್, ಸಿಬ್ಬಂದಿಗಳಾದ ಪ್ರವೀಣ್, ಜಗದೀಶ್, ಶಿವಕುಮಾರ್, ನವೀನ್ ಅವರುಗಳು ಭಾಗವಹಿಸಿದ್ದರು.
ಇಬ್ಬರ ಬಂಧನ
ಸಿದ್ದಾಪುರ : ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಸೇದುತ್ತಿದ್ದ ಈರ್ವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ ಚೆನ್ನಯ್ಯನಕೋಟೆ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಹಾಗೂ ಸೇದುತ್ತಿದ್ದ ಬಗ್ಗೆ ಖಚಿತ ಸುಳಿವಿನ ಮೇರೆಗೆ ಸಿದ್ದಾಪುರ ಠಾಣಾಧಿಕಾರಿ ದಯಾನಂದ ನೇತೃತ್ವದಲ್ಲಿ ದಾಳಿ ನಡೆಸಿ ಚೆನ್ನಯ್ಯನಕೋಟೆ ಗ್ರಾಮದ ಕೋಟೆ ಪೈಸಾರಿ ನಿವಾಸಿ ಪ್ರವೀಣ ಹಾಗೂ ಹೊಲಮಾಳ ನಿವಾಸಿ ಮಂಜು ಎಂಬಿಬ್ಬರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮುಖ್ಯಪೇದೆ ಬೆಳ್ಯಪ್ಪ, ಸಿಬ್ಬಂದಿಗಳಾದ ಲವಕುಮಾರ್, ವಸಂತ್ ಕುಮಾರ್,ಭರತ್ ಪಾಲ್ಗೊಂಡಿದ್ದರು. ಆರೋಪಿಗಳ ಮೇಲೆ ಮೊಕದ್ದಮೆ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇತ್ತೀಚಿಗೆ ಸಿದ್ದಾಪುರ, ಗುಹ್ಯ,ನೆಲ್ಯಹುದಿಕೇರಿ ಗ್ರಾಮಗಳಲ್ಲಿ ಗಾಂಜಾ ವ್ಯಸನಿಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ.ಗಾಂಜಾ ಮಾರಾಟ ಮಾಡುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಸೆರೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ.