ಮಡಿಕೇರಿ, ಜು. 11: ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹತ್ತು ಹಲವು ಯೋಜನೆಗಳನ್ನು ಘೋಷಿಸಿದ್ದರೂ ಕೂಡ; ಯಾವದೂ ಪರಿಣಾಮಕಾರಿ ಯಾಗಿ ಜಾರಿಗೊಳ್ಳದೆ; ಭ್ರಷ್ಟ ವ್ಯವಸ್ಥೆಯಡಿ ಸೋರಿ ಹೋಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಜಿ.ಪಂ. ಅಧ್ಯಕ್ಷ ಬಿ.ಎ ಹರೀಶ್ ಹಾಗೂ ಸದಸ್ಯರು ಕುಟ್ಟದಲ್ಲಿರುವ ಪರಿಶಿಷ್ಟ ಪಂಗಡದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಹೆಣ್ಣು ಮಕ್ಕಳು ಹತ್ತಾರು ದಿನಗಳಿಂದ ರಾತ್ರಿ ವೇಳೆ ಕತ್ತಲೆಯಲ್ಲಿರುವದು ಬಹಿರಂಗ ಗೊಂಡಿತು.ಗಿರಿಜನ ಸಮಗ್ರ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಬರುವ ವೀರಾಜಪೇಟೆ ತಾಲೂಕಿನ ಕುಟ್ಟದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶಿಸುತ್ತಿದ್ದಂತೆಯೇ; ಒಂದೊಂದೇ ಸಮಸ್ಯೆಗಳು ಗರಿಗೆದರಿಕೊಂಡು; ಅನೇಕ ಸಮಯದಿಂದ ಈ ನಿಲಯದಲ್ಲಿ ತಂಗುತ್ತಿರುವರೆನ್ನಲಾದ ಮೂವತ್ತು ಬಾಲಕಿಯರು ವಿದ್ಯುತ್ ಬೆಳಕಿಲ್ಲದೆ ಕತ್ತಲೆಯಲ್ಲಿ ರಾತ್ರಿ ಕಳೆಯುತ್ತಿರುವದು ಗೋಚರಿಸಿತು.ಹಾಸ್ಟೆಲ್‍ನಲ್ಲಿ (ವಸತಿನಿಲಯ) ವಾರ್ಡನ್ ಕೂಡ ಖಾಯಂ ಇಲ್ಲದೆ; ದಿನಗೂಲಿ ವ್ಯವಸ್ಥೆಯಡಿ ಓರ್ವ ಮಹಿಳೆಯನ್ನು ನಿಯೋಜಿಸಿ ಕೊಂಡಿರುವದು ಸಂಬಂಧಿಸಿದ ಅಧಿಕಾರಿ ನೀಡಿದ
(ಮೊದಲ ಪುಟದಿಂದ) ಸುಳಿವಿನಿಂದ ಖಾತರಿಯಾಯಿತು. ದಿನಗೂಲಿ ಮಹಿಳೆ ಕೂಡ ಸುಳ್ಳಿಗೊಂದು ಸುಳ್ಳು ಸೇರಿಸಿ ಸಮಸ್ಯೆಗಳನ್ನು ಮರೆಮಾಚುವ ಯತ್ನದಲ್ಲಿ ಕೊನೆಗೂ ತಪ್ಪಿಸಿಕೊಳ್ಳಲಾರದೆ ಎಲ್ಲವೂ ಬಹಿರಂಗಗೊಳ್ಳುವಂತಾಯಿತು.
ಈ ವಸತಿ ನಿಲಯವು ವೀರಾಜಪೇಟೆ ತಾಲೂಕು ಬೋರ್ಡ್‍ನಿಂದ 1977ರಲ್ಲಿ ಸ್ಥಾಪನೆಗೊಂಡಿದ್ದು, ಓಬಿರಾಯನ ಕಾಲದ ಬೃಹತ್ ಕಟ್ಟಡವಾಗಿದೆ. 4 ದಶಕಗಳ ಹಿಂದಿನ ಈ ಕಟ್ಟಡದಲ್ಲಿ ಸೌರ ವಿದ್ಯುತ್, ಜನರೇಟರ್, ಶುದ್ಧ ಕುಡಿಯುವ ನೀರಿನ ಘಟಕ ಇತ್ಯಾದಿ ಕಲ್ಪಿಸಿದ್ದರೂ; ಸಿಬ್ಬಂದಿಯ ಕೊರತೆಯೊಂದಿಗೆ ಯಾವದೂ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿರುವದು ಕಂಡು ಬಂತು.
ಮಾತ್ರವಲ್ಲದೆ ಜನಪ್ರತಿನಿಧಿಗಳ ಭೇಟಿಯ ಸುಳಿವಿನ ಮೇರೆಗೆ; ವಸತಿ ನಿಲಯಕ್ಕೆ ಖುದ್ದು ಧಾವಿಸಿ ಬಂದ ಅಧಿಕಾರಿ ಚಂದ್ರಶೇಖರ್, ಸಮಸ್ಯೆಗಳನ್ನು ಸರಿಪಡಿಸುವ ಯತ್ನದೊಂದಿಗೆ ಯಾವದೂ ಕೈಗೂಡದಿದ್ದಾಗ ಅಸಹಾಯಕತೆಯ ಮಾತುಗಳನ್ನು ಹೊರಗೆಡವಿದರು.
ವೀರಾಜಪೇಟೆ ತಾಲೂಕಿನಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯಡಿಯಲ್ಲಿ 6 ವಸತಿ ನಿಲಯಗಳು ಹಾಗೂ 6 ವಸತಿ ಶಾಲೆಗಳಿದ್ದು; ಒಟ್ಟು ಶಿಕ್ಷಕರ ಸಹಿತ 36 ಮಂದಿ ಕಾರ್ಯನಿರ್ವಹಿಸುವಲ್ಲಿ ಕೇವಲ 4 ಜನ ಮಾತ್ರ ಕರ್ತವ್ಯದಲ್ಲಿ ಇದ್ದಾರೆ ಎಂದು ಬೊಟ್ಟು ಮಾಡಿದರು. ಸಿಬ್ಬಂದಿಯ ಕೊರತೆ ನಡುವೆ ವಸತಿ ನಿಲಯದ ಮಕ್ಕಳನ್ನು ಸರಿಯಾಗಿ ಗಮನಿಸಲು ಸಾಧ್ಯವಿಲ್ಲವೆಂದು ಬೇಸರದ ನುಡಿಯಾಡಿದರು.
ಸ್ನಾನವಿಲ್ಲ : ಕಳೆದ ಹತ್ತಾರು ದಿನಗಳಿಂದ ವಿದ್ಯುತ್ ಇಲ್ಲದೆ ಮಕ್ಕಳು ಕತ್ತಲೆಯಲ್ಲಿ ಕಳೆಯುವದರೊಂದಿಗೆ; ಈ ಹೆಣ್ಣು ಮಕ್ಕಳಿಗೆ ನಿತ್ಯದ ಆಹಾರ, ಸ್ನಾನ ಇತ್ಯಾದಿ ವಂಚಿತರಾಗಿರುವದು ಖಾತರಿಯಾಯಿತು. ಮಕ್ಕಳು ವಾರಕ್ಕೊಮ್ಮೆ ತಮ್ಮ ಮನೆಗಳಿಗೆ ತೆರಳಿ ಸ್ನಾನ ಮಾಡಿಕೊಂಡು ಬರುತ್ತಿದ್ದು, ಬಿಸಿನೀರಿನ ಕೊರತೆ ಗೋಚರಿಸಿತು.
ಅಲ್ಲಿನ ತಾತ್ಕಾಲಿಕ ಮೇಲ್ವಿಚಾರಕಿಯೇ ಹೇಳುವಂತೆ 2 ತೆಂಗಿನ ಕಾಯಿಯಲ್ಲಿ ಹೊತ್ತಿನ ಸಾಂಬಾರು ತಯಾರಿಸಿಕೊಡುತ್ತಿದ್ದು; ಬೆಳಿಗ್ಗೆ ಉಪಹಾರಕ್ಕೆ 1/2 ಲೀ. ಎಣ್ಣೆಯಲ್ಲಿ 30 ಮಕ್ಕಳಿಗೆ ಉದ್ದಿನ ವಡೆ ತಯಾರಿಸಿ ಇಡ್ಲಿಯೊಂದಿಗೆ ಕೊಟ್ಟಿದ್ದಾಗಿ ಸುಳ್ಳು ಹೇಳಿ ಜನಪ್ರತಿನಿಧಿಗಳಿಂದ ತರಾಟೆಗೆ ಒಳಗಾಗಬೇಕಾಯಿತು.
ವಸತಿ ನಿಲಯದಲ್ಲಿ ಶೌಚಾಲಯದ ನಿರ್ವಹಣೆ ಕೊರತೆ, ಸ್ನಾನಗೃಹ, ಸೌದೆ ಇತ್ಯಾದಿ ಇಲ್ಲದೆ ಅಮಾಯಕ ಹೆಣ್ಣು ಮಕ್ಕಳು ಅಧಿಕಾರಿಗಳು ಹೇಳಿಕೊಟ್ಟಿದ್ದ ಸುಳ್ಳನ್ನು ಜನಪ್ರತಿನಿಧಿಗಳ ಎದುರು ಒಪ್ಪಿಕೊಳ್ಳಲಾರದೆ ಪರಿತಪಿಸುತ್ತಿದ್ದ ಸನ್ನಿವೇಶ ಮರುಕ ಹುಟ್ಟಿಸುವಂತಾಯಿತು.
ತಕ್ಷಣದಿಂದ ಸಮಸ್ಯೆಯತ್ತ ಗಮನ ಹರಿಸಿ ಮುಗ್ಧ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜಿ.ಪಂ. ಅಧ್ಯಕ್ಷರು ತಾಕೀತು ಮಾಡಿದರು. ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಹಾಗೂ ಸದಸ್ಯ ಬಿ.ಎನ್. ಪ್ರಥ್ಯು ಅವರುಗಳು ಅಧಿಕಾರಿ ಮತ್ತು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಮೇಲಧಿಕಾರಿಗಳಿಗೆ ದೂರು ಸಲ್ಲಿಸುವದಾಗಿ ಆಕ್ರೋಶ ವ್ಯಕ್ತಪಡಿಸಿದರು.