ವೀರಾಜಪೇಟೆ, ಜು. 11: ಒಂದು ತಿಂಗಳ ಹಿಂದೆ ತನ್ನ ಅತ್ತೆ ಶಿಲ್ಪೆ ಅಲಿಯಾಸ್ ಗೌರಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮುತ್ತ ಅಲಿಯಾಸ್ ಮನು ಎಂಬಾತನನ್ನು ವೀರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿ ಇಂದು ಇಲ್ಲಿನ ಪ್ರಿನ್ಸಿಫಲ್ ಮುನ್ಸಿಫಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಮೇರೆ ಆತನನ್ನು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ವೀರಾಜಪೇಟೆಗೆ ಸಮೀಪದ ಬೋಯಿಕೇರಿ ಗ್ರಾಮದಲ್ಲಿ ಅತ್ತೆ ಶಿಲ್ಪೆಯೊಂದಿಗೆ ಮುತ್ತ ಕೂಲಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದು ತಾ. 8.6.2019 ರಂದು ರಾತ್ರಿ ಮುತ್ತ ಹಾಗೂ ಅತ್ತೆ ನಡುವೆ ವಿವಾದ ಉಂಟಾಗಿದ್ದು ಕುಡಿದ ಮತ್ತಿನಲ್ಲಿದ್ದ ಮುತ್ತ ದೊಣ್ಣೆಯಿಂದ ಹಲ್ಲೆ ನಡೆಸಿ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದ. ಆರೋಪಿ ನಿನ್ನೆ ದಿನ ಸಂಜೆ ಚೆಯ್ಯಂಡಾಣೆಯ ಬೇಕರಿ ಮುಂದೆ ಅತ್ತಿಂದಿತ್ತ ಸಂಚರಿಸುತ್ತಿದ್ದಾಗ ಗ್ರಾಮಾಂತರ ಪೊಲೀಸರಿಗೆ ದೊರೆತ ಖಚಿತ ಸುಳಿವಿನ ಮೇರೆ ಪೊಲೀಸರು ಬಂಧಿಸಿದರು.

ಪೊಲೀಸರು ಕೊಲೆಗೆ ಬಳಸಿದ ದೊಣ್ಣೆಯನ್ನು ಹಾಗೂ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಮೃತ ಶಿಲ್ಪೆಯ ಮಗಳು ಸಿಂಧೂ ನೀಡಿದ ದೂರಿನ ಮೇರೆ ಪೊಲೀಸರು ಮುತ್ತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.