*ಗೋಣಿಕೊಪ್ಪಲು, ಜು. 11: ಗ್ರಾ.ಪಂ. 21 ಸದಸ್ಯರುಗಳು ಒಗ್ಗಟ್ಟಿನ ಬಲ, ಬೆಂಬಲವಿಲ್ಲದೆ ಗ್ರಾಮ ಸಭೆಗಳನ್ನು ನಡೆಸುವದರಲ್ಲಿ ಅರ್ಥವಿಲ್ಲ. ಗ್ರಾಮ ಸಭೆಯನ್ನು ರದ್ದು ಗೊಳಿಸಿ ಎಂದು ಗೋಣಿಕೊಪ್ಪಲು ಗ್ರಾಮಸ್ಥರು ವಿಶೇಷ ಗ್ರಾಮಸಭೆಯನ್ನು ಬಹಿಷ್ಕರಿಸಿ ಸಭೆಯಿಂದ ಹೊರ ನಡೆದ ಘಟನೆ ನಡೆಯಿತು. ಗೋಣಿಕೊಪ್ಪಲು ಗ್ರಾ.ಪಂ.ನ ಹಳೆ ಕಚೇರಿ ಕಟ್ಟಡದ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮ ಸಭೆಯನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿತ್ತು. ಗ್ರಾಮಸಭೆಗೆ ಗ್ರಾ.ಪಂ.ನ ಕೆಲವು ಸದಸ್ಯರುಗಳು ಗೈರು ಹಾಜರಾಗಿದ್ದರು. ಅಲ್ಲದೇ ಗ್ರಾಮಸ್ಥರು ಅತಿ ವಿರಳವಾಗಿ ಹಾಜರಿದ್ದರು.
ಸಭೆ ಪ್ರಾರಂಭದಲ್ಲೇ ಪಟ್ಟಣದ ಕಸ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಸ್ವಚ್ಛ ಮೇವ ಜಯತೆ ಮತ್ತು ಜಲಾಮೃತ ಬ್ಯಾನರ್ ಅಡಿಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ವಿಶೇಷ ಗ್ರಾಮಸಭೆಯಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಪಟ್ಟಣವೇ ಕಸದಿಂದ ತುಂಬಿ ದುರ್ವಾಸನೆ
(ಮೊದಲ ಪುಟದಿಂದ) ಬೀರುತ್ತಿರುವಾಗ ಸ್ವಚ್ಛತೆಯ ಬಗ್ಗೆ ಪ್ರಮಾಣ ವಚನ ಸ್ವೀಕರಿಸುವದು ಯಾವ ಅರ್ಥ ನೀಡುತ್ತದೆ ಎಂದು ಗ್ರಾಮಸ್ಥ ಜಗದೀಶ್ ಪ್ರಶ್ನಿಸಿದರು. ಕಸದ ಸಮಸ್ಯೆ ಬಗೆಹರಿಸದೆ ಸ್ವಚ್ಛತೆಯ ಬಗ್ಗೆ ಮಾತನಾಡುವದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. ಈ ಸಂದರ್ಭ ಬಹಳಷ್ಟು ಸದಸ್ಯರುಗಳು ಗ್ರಾಮಸ್ಥರೊಡನೆ ಕುಳಿತುಕೊಂಡಿದ್ದರು. ಎಂಟು ವಾರ್ಡಿನ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ದೂರು ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚಿಸಬೇಕಾದ ಸದಸ್ಯರುಗಳೇ ವೇದಿಕೆಯಲ್ಲಿ ಉಪಸ್ಥಿತರಿಲ್ಲದೆ ಇರುವದು ಗ್ರಾಮಸ್ಥರನ್ನು ಕೆರಳಿಸಿತು. ಪಂಚಾಯಿತಿ ಸದಸ್ಯರಲ್ಲೇ ಒಗ್ಗಟ್ಟು ಇಲ್ಲದ ಮೇಲೆ ಪಟ್ಟಣದ ಅಭಿವೃದ್ಧಿ ಸಾಧ್ಯವಾಗುವದು ಹೇಗೆ ಎಂದು ಪ್ರಶ್ನಿಸಿ ಈ ಸಭೆಗೆ ಅರ್ಥವಿರುವದಿಲ್ಲ, ಗ್ರಾಮಸ್ಥರನ್ನು ವಂಚಿಸುವ ಸಭೆ ಇದಾಗಿದೆ. ಇದಕ್ಕೊಂದು ಸ್ಪಷ್ಟತೆ ಇಲ್ಲ. ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಒಂದು ನಿರ್ಧಾರಕ್ಕೆ ಬಂದು ಗ್ರಾಮ ಸಭೆಯನ್ನು ನಡೆಸಬೇಕು ಎಂದು ಮತ್ತು ಅರ್ಥವಿಲ್ಲದ ಈ ಸಭೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
ವೇದಿಕೆಯಲ್ಲಿ ಅಧ್ಯಕ್ಷರೊಂದಿಗೆ ಸದಸ್ಯರುಗಳಾದ ರತಿ ಅಚ್ಚಪ್ಪ, ಮುರುಘ, ಕೆ.ಪಿ. ಬೋಪಣ್ಣ ಮತ್ತು ಪಂಚಾಯಿತಿ ಕಾರ್ಯದರ್ಶಿ ಪ್ರಕಾಶ್ ವೇದಿಕೆ ಹಂಚಿಕೊಂಡಿದ್ದರು. ಉಳಿದ ಸದಸ್ಯರುಗಳಾದ ಕುಲ್ಲಚಂಡ ಪ್ರಮೋದ್ ಗಣಪತಿ, ಜೆ.ಕೆ. ಸೋಮಣ್ಣ, ಯಾಸ್ಮಿನ್, ಮಂಜುಳ, ದ್ಯಾನ್ ಸುಬ್ಬಯ್ಯ, ಧನಲಕ್ಷ್ಮಿ, ಸುಲೈಖ, ರಾಜಶೇಖರ್, ಮಮಿತಾ ಮನೋಜ್, ಶಾಹಿನಾ ಇವರುಗಳು ಸಾರ್ವಜನಿಕರೊಂದಿಗೆ ಕುಳಿತುಕೊಂಡಿದ್ದರು. ಇದನ್ನು ಪ್ರಶ್ನಿಸಿ ಗ್ರಾಮಸ್ಥರು ಸದಸ್ಯರುಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ವ್ಯವಸ್ಥೆ ಹದಗೆಟ್ಟಿರುವದೇ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿದೆ. ಬೈಪಾಸ್ ರಸ್ತೆಯಲ್ಲಿ ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಕಸಗಳನ್ನು ರಸ್ತೆ ಬದಿಯಲ್ಲಿ ಹಾಕುತ್ತಿರುವದರಿಂದ ಕಸ ಸಂಗ್ರಹ ಹೆಚ್ಚಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರುಗಳಾದ ಕೆ.ಪಿ. ಬೋಪಣ್ಣ ಮತ್ತು ಮುರುಘ ಕಸ ವಿಂಗಡಿಸಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹುಣಸೂರಿನ ಸಂಸ್ಥೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದೆ. ಶೀಘ್ರದಲ್ಲೇ ಪಟ್ಟಣದ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.