ಕೂಡಿಗೆ, ಜು. 11: ಸಮೀಪದ ತೊರೆನೂರು ಗ್ರಾಮದಲ್ಲಿ ಕಳೆದ 10 ದಿನಗಳಿಂದ 30ಕ್ಕೂ ಹೆಚ್ಚು ಕುಟುಂಬಗಳ ಮನೆ ಮಂದಿಗೆ ಜ್ವರ ಕಾಣಿಸಿಕೊಂಡಿದ್ದು, ಕೂಡಿಗೆ, ಕುಶಾಲನಗರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಜ್ವರ ವಾಸಿಯಾಗದೇ ದಿನ ದಿನ ಬಿಟ್ಟು ಜ್ವರ ಹೆಚ್ಚಾಗುತ್ತಿದೆ. ಕುಶಾಲನಗರದ ಖಾಸಗಿ ಪರೀಕ್ಷಾ ತಪಾಸಣಾ ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡ ನಂತರ ಚಿಕುಂಗುನ್ಯ ಜ್ವರ ಇರಬಹುದೆಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ಅಂದಾಜು 80ಕ್ಕೂ ಹೆಚ್ಚು ಮಂದಿಗೆ ಚಿಕುಂಗುನ್ಯ ಜ್ವರ ಇರಬಹುದೆಂಬ ಶಂಕೆ ಇದೆ. ಇದನ್ನರಿತ ಆರೋಗ್ಯ ಇಲಾಖೆಯವರು ಗ್ರಾಮಕ್ಕೆ ತೆರಳಿ ತಪಾಸಣೆ ನಡೆಸಿ ಔಷದೋಪಚಾರ ನಡೆಸಲು ಮುಂದಾಗಿದ್ದಾರೆ. ತೊರೆನೂರು ಗ್ರಾಮದಲ್ಲಿ ಆಸ್ಪತ್ರೆಯಿದ್ದರೂ ವೈದ್ಯರಿಲ್ಲದೆ, ಬೇರೆ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವ ಪರಿಸ್ಥಿತಿಯುಂಟಾಗಿದೆ.
ಮಳೆ ಬಿಟ್ಟು ಬಿಟ್ಟು ಬರುತ್ತಿರುವದರಿಂದ ಗ್ರಾಮದ ಮನೆಗಳ ಸುತ್ತ, ರಸ್ತೆ ಬದಿಗಳಲ್ಲಿ ಗಿಡಗಂಟಿಗಳು ಬೆಳೆದು ಸೊಳ್ಳೆಗಳು ಹೆಚ್ಚಾಗಿದ್ದು, ಸೊಳ್ಳೆಗಳಿಂದ ರೋಗಗಳು ಹೆಚ್ಚಾಗುತ್ತಿವೆ. ಶುಚಿತ್ವ ಕಾಪಾಡದೆ ಕಳೆದ ವರ್ಷವು ಇದೇ ರೀತಿಯಲ್ಲಿ ಚಿಕುಂಗುನ್ಯ ಜ್ವರ ಕಾಣಿಸಿಕೊಂಡಿತ್ತು. ಈ ವರ್ಷವೂ ಸಹ ಗ್ರಾಮ ಪಂಚಾಯಿತಿಯು ಶುಚಿತ್ವಕ್ಕೆ ಹೆಚ್ಚಿನ ಆಧ್ಯತೆ ಕೊಡದ ಹಿನ್ನೆಲೆ ಗ್ರಾಮ ವ್ಯಾಪ್ತಿಯ ಎಲ್ಲಾ ಚರಂಡಿಗಳು ಗಬ್ಬೆದ್ದು ನಾರುವದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇದರಿಂದ ಸುಮಾರು 30 ಕುಟುಂಬಗಳ ಮಂದಿಗೆ ಜ್ವರ ಕಾಣಿಸಿಕೊಂಡಿರುವದು ಕಂಡು ಬರುತ್ತಿದೆ.
(ಮೊದಲ ಪುಟದಿಂದ) ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಶುಚಿತ್ವಕ್ಕೆ ಆದ್ಯತೆ ನೀಡಿಲ್ಲ, ಇದರತ್ತ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿ ತುರ್ತು ಕ್ರಮ ವಹಿಸಿ, ಗ್ರಾಮವನ್ನು ಸ್ವಚ್ಛಗೊಳಿಸಿ, ಶುಚಿತ್ವ ಕಾಪಾಡಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವೈದ್ಯರ ನೇಮಕಕ್ಕೆ ಆಗ್ರಹ : ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ಹೆಬ್ಬಾಲೆ, ಶಿರಂಗಾಲ ಆಸ್ಪತ್ರೆಗಳಿಗೆ ಆಡಳಿತಾತ್ಮಕ ವೈದ್ಯಾಧಿಕಾರಿಯಾಗಿ ಒಬ್ಬ ವೈದ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಈ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಆರೋಗ್ಯ ಕೇಂದ್ರಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ವೈದ್ಯರು ಬೇರೆಡೆಗೆ ತೆರಳಿರುವದು ಕಂಡು ಬಂದಿದೆ. ಸಂಬಂಧಪಟ್ಟ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳನ್ನು ಆಯಾಯಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರ ಪ್ರಮುಖ ಆಗ್ರಹವಾಗಿದೆ.
-ಕೆ.ಕೆ.ನಾಗರಾಜಶೆಟ್ಟಿ.