ಸುಂಟಿಕೊಪ್ಪ, ಜು. 10: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಮಳೆಗಾಲದಲೂ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಮಾದಾಪುರ ವಿಭಾಗದಲ್ಲಿ ಭಾರೀ ಮಳೆಯಾಗದಿದ್ದರೂ ಸಾಧಾರಣ ಮಳೆ ಸುರಿಯುತ್ತಿದ್ದು ಕೃಷಿಕರ ಮೊಗದಲ್ಲಿ ಮಂದಹಾಸ ಬೀರಿದೆ. ಉಳುಮೆ ಕಾರ್ಯದಲ್ಲಿ ತೊಡಗಿದ್ದ ರೈತರು ಗದ್ದೆ ಹದಮಾಡಿ ಭತ್ತದ ಬೀಜ ಹಾಕಲು ತಯಾರಿ ನಡೆಸುತ್ತಿದ್ದಾರೆ. ಇತ್ತ ಸೆಸ್ಕ್ ಇಲಾಖೆಯ ದೂರದೃಷ್ಟಿಯಿಲ್ಲದ ಕಾರ್ಯವೈಖಯಿಂದ ಕಳೆದ 1 ವಾರದಿಂದ ಸರಿಯಾಗಿ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಈ ವಿಭಾಗದ ತಾ.ಪಂ. ಸದಸ್ಯರಾಗಿದ್ದು, ಅವರಿಗೂ ಗ್ರಾ.ಪಂ.ಗೂ ಗ್ರಾಮಸ್ಥರು ಕುಡಿಯುವ ನೀರಿಗಾದ ವ್ಯತ್ಯಯದ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಸೆಸ್ಕ್ ಕುಶಾಲನಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್‍ಗೂ ಗ್ರಾ.ಪಂ. ಅಧ್ಯಕ್ಷ ನಾಪಂಡ ಉತ್ತಪ್ಪ ಮತ್ತಿತರ ಸದಸ್ಯರು ವಿದ್ಯುತ್ ಇಲ್ಲದೆ ಜನರಿಗೆ ಕುಡಿಯುವ ನೀರಿಗಾಗಿ ತೊಂದರೆಯಾಗಿರುವದನ್ನು ಗಮನಕ್ಕೆ ತಂದರೂ ಸಮಸ್ಯೆಗೆ ಇನ್ನೂ ಪರಿಹಾರ ಸಿಗಲಿಲ್ಲ ಮಳೆಗಾದಲ್ಲೂ ಗ್ರಾಮ ಪಂಚಾಯಿತಿಯವರಿಗೆ ಕುಡಿಯುವ ನೀರು ಕಲ್ಪಿಸಲು ಸಾಧ್ಯವಾಗುತ್ತಿಲ್ಲವೆಂದು ಸಾರ್ವಜನಿಕರು ಪಂಚಾಯಿತಿ ಆಡಳಿತ ಮಂಡಳಿ ವಿರುದ್ಧ ಶಾಪ ಹಾಕುತ್ತಿದ್ದಾರೆ.