ವೀರಾಜಪೇಟೆ, ಜು. 11: ವೀರಾಜಪೇಟೆ ಸಮೀಪದ ಬಿಟ್ಟಂಗಾಲ ಬಳಿ ಹುಣಸೂರು-ತಲಕಾವೇರಿ ರಾಜ್ಯ ಹೆದ್ದಾರಿಯ ಮಧ್ಯ ಭಾಗದಲ್ಲಿ ಬೃಹತ್ ಹೊಂಡವೊಂದು ನಿರ್ಮಾಣಗೊಂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ವಾಹನಗಳು ಸಂಚರಿಸಬೇಕಾಗಿದೆ

ಬಿಟ್ಟಂಗಾಲದಿಂದ ಬಾಳುಗೋಡುವಿಗೆ ತೆರಳುವ ಜಂಕ್ಷನ್ ಬಳಿಯ ರಸ್ತೆಯ ತಿರುವಿನಲ್ಲಿ ದೊಡ್ಡ ಹೊಂಡವೊಂದು ನಿರ್ಮಾಣಗೊಂಡಿದೆ. ಈ ರಸ್ತೆಯ ಕಾಮಗಾರಿ ಕೆಲವೇ ದಿನಗಳ ಹಿಂದೆ ಪೂರ್ಣಗೊಂಡಿದ್ದು, ಕಾಮಗಾರಿ ನಡೆದಲ್ಲಿಯೇ ಹೊಂಡ ಬಿದ್ದಿರುವದು ದುರಂತ ಹಾಗೂ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಟೀಕಿಸಿದ್ದಾರೆ.

ರಸ್ತೆಯಲ್ಲಿ ಉಂಟಾಗಿರುವ ಹೊಂಡದ ಕುರಿತು ಗ್ರಾಮಸ್ಥರು ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲಾಗಿದ್ದರೂ ಇಲಾಖೆ ಅದನ್ನು ಸರಿಪಡಿಸುವ ಪ್ರಯತ್ನ ಮಾಡಿಲ್ಲ ಈಗ ಹೊಂಡ ದೊಡ್ಡದಾಗಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಮಳೆಗಾಲವಾದುದರಿಂದ ರಸ್ತೆಯ ಮೇಲ್ಬಾಗದಲ್ಲಿ ನೀರು ಹರಿಯುತ್ತಿರುವದರಿಂದ ಹೊಂಡ ವಾಹನ ಚಾಲಕರಿಗೆ ಕಾಣುವದಿಲ್ಲ. ದುರಂತ ಸಂಭವಿಸುವ ಮುನ್ನ ಸಂಬಂಧಿಸಿದ ಇಲಾಖೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಾದ ಪಿ. ಚಂಗಪ್ಪ ಹಾಗೂ ಬೆಳ್ಯಪ್ಪ ಒತ್ತಾಯಿಸಿದ್ದಾರೆ.