ವೀರಾಜಪೇಟೆ, ಜು. 11: ಸಾಮಾನ್ಯರಿಗೆ ಇಲ್ಲದ ವಿಶೇಷ ಶಕ್ತಿ ವಿಶೇಷಚೇತನರಲ್ಲಿರುತ್ತದೆ. ಸರಿಯಾದ ಸಮಯಕ್ಕೆ ತರಬೇತಿ ನೀಡಿ ಅವರನ್ನು ಇತರರಂತೆ ಸಮಾಜದ ಮುಖ್ಯ ವಾಹಿನಿಗೆ ತರುವ ಜವಾಬ್ದಾರಿ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಮೇಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ ಶ್ರೀಧರ್ ಹೇಳಿದರು.
ಮಡಿಕೇರಿಯ ವಿಶೇಷಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶೇಷಚೇತನರಿಗೆ ತರಬೇತಿ ಹಾಗೂ ಉದ್ಯೋಗ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೈಸೂರಿನ ಆಯುಷ್ ಇಲಾಖೆ ಯಲ್ಲಿ ವಿಶೇಷಚೇತನರಿಗೆ ತರಬೇತಿ ನೀಡುತ್ತಿದ್ದಾರೆ. ಅಲ್ಲಿಗೆ ತೆರಳುವ ಪ್ರಯಾಣ ಹಾಗೂ ಖರ್ಚು ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಇಲ್ಲಿಯೇ ತರಬೇತಿ ಗಳನ್ನು ನೀಡುವದರಿಂದ ಅರ್ಹ ಫಲಾನುಭವಿಗಳಿಗೆ ಉಪಯೋಗವಾಗುತ್ತದೆ. ಪಟ್ಟಣ ಪಂಚಾಯಿತಿಯಿಂದಲೂ ವಿಶೇಷಚೇತನರಿಗೆ ಪೋಷಣಾ ವೆಚ್ಚ, ಹೊಸ ಶೌಚಗೃಹ ನಿರ್ಮಾಣ, ಗಾಲಿಕುರ್ಚಿ, ಮೆಟ್ಟಿಲು ಹತ್ತಲು ಸಾಧ್ಯವಾಗದ ಕಾರಣ ರ್ಯಾಂಪ್ ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಕಾಳಪ್ಪ ಮಾತನಾಡಿ ವಿಶೇಷಚೇತ ನರಿಗೆ ಸರಕಾರದ ಇಂದಿನ ಯೋಜನೆಗಳ ಸೌಲಭ್ಯಗಳನ್ನು ಒದಗಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಎಲ್ಲ್ಲಾ ಸಂಘ ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಸಂಪತ್, ಎ.ಪಿ.ಡಿ ಸಂಸ್ಥೆಯ ಅಧಿಕಾರಿ ಸುಪ್ರಿಯಾ, ಕಿವುಡರ ಸಂಘದ ಅಧ್ಯಕ್ಷ ಜೋಸೇಫ್, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಕೊಡಗು ಶಾಖೆ ಅಧಿಕಾರಿ ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.