ಸುಂಟಿಕೊಪ್ಪ, ಜು. 11: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಯಲಯದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ತರಬೇತುದಾರರಾಗಿ ಪುತ್ತೂರು ತಾಲೂಕು ಸವಣೂರು ಕಾಲೇಜಿನ ಉಪನ್ಯಾಸಕ ಸೂರ್ಯ ನಾರಾಯಣ ರಾವ್ ಅವರು ಆಗಮಿಸಿ 9ನೇ ತರಗತಿಯಿಂದ 11ನೇ ತರಗತಿವರೆಗೆ ಸುಮಾರು 250 ವಿದ್ಯಾರ್ಥಿಗಳಿಗೆ ತೇರ್ಗಡೆಯಾದ ನಂತರ ಅವರ ಅರ್ಹತೆಗೆ ತಕ್ಕಂತೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಮತ್ತು ವಿದ್ಯಾಭ್ಯಾಸ ಮುಗಿಸಿದ ನಂತರ ವಿದ್ಯಾರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ಸೂಕ್ತ ಹುದ್ದೆಯನ್ನು ಪಡೆಯಲು ಬೇಕಾದ ಅರ್ಹತೆ ಮತ್ತು ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಕೋರನ ಸಿ. ವಿಶ್ವನಾಥ್ ಪ್ರಾಸ್ತಾವಿಕ ಭಾಷಣ ಮಾಡಿ ತರಬೇತಿ ನಡೆಸುವ ಉದ್ದೇಶವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಐಸಾಕ್ ಮಾತನಾಡಿ, ಇಂತಹ ತರಬೇತಿಯಿಂದ ವಿದ್ಯಾರ್ಥಿಗಳು ಮಹತ್ವದ ಮಾಹಿತಿ ಪಡೆದು ಜೀವನದಲ್ಲಿ ಮುಂದೆ ಬರಲು ಫಲಕಾರಿಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಗೌಡ ನಿವೃತ್ತ ನೌಕರರ ಸಂಘದ ಉಪಾದ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ, ಖಜಾಂಚಿ ಪೊನ್ನಚ್ಚನ ಸೋಮಣ್ಣ, ನಿರ್ದೆಶಕರುಗಳಾದ ಪಾಣತ್ತಲೆ ಬಿದ್ದಪ್ಪ, ಪಟ್ಟಡ ದೇವಯ್ಯ, ಕರ್ಣಯ್ಯನ ನಾಗೇಶ ಮತ್ತು ಸದಸ್ಯ ಯಾಲದಾಳು ಕೇಶವಾನಂದ, ಮಾಜಿ ಶಾಲಾ ನಿರ್ದೇಶಕ ಬೆಪ್ಪುರನ ಬೋಪಯ್ಯ, ಕಾಲೇಜಿನ ಉಪನ್ಯಾಸಕರು ಮತ್ತು ಬೋಧಕ ವರ್ಗದವರು ಹಾಜರಿದ್ದರು.