ಬೆಂಗಳೂರು, ಜು. 11: ಮೈತ್ರಿ ಸರಕಾರದಿಂದ ಹೊರ ಬರಲು ರಾಜೀನಾಮೆ ನೀಡಿದ್ದ ಒಟ್ಟು 16 ಮಂದಿ ಶಾಸಕರುಗಳ ಪೈಕಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ 10 ಅತೃಪ್ತ ಶಾಸಕರ ಪರವಾಗಿ ಇಂದು ಸುಪ್ರೀಂ ಕೋರ್ಟ್ ರಾಜ್ಯ ವಿಧಾನ ಸಭಾಧ್ಯಕ್ಷರಿಗೆ ನಿರ್ದೇಶನವೊಂದನ್ನು ನೀಡಿತ್ತು. ಸಂಜೆ 6 ಗಂಟೆಯೊಳಗೆ ಈ ಶಾಸಕರ ರಾಜೀನಾಮೆಯನ್ನು ಮರು ಸ್ವೀಕರಿಸುವಂತೆ ಸೂಚಿಸಿತ್ತು. ಈ ಬಗ್ಗೆ ಪ್ರತಿವಾದದೊಂದಿಗೆ ಅರ್ಜಿ ಸಲ್ಲಿಸಿದ್ದ ಸಭಾಧ್ಯಕ್ಷರ ಅಹವಾಲನ್ನು ತುರ್ತು ಸ್ವೀಕರಿಸಲು ನಿರಾಕರಿಸಿದ ಕೋರ್ಟ್ ಈ ಕುರಿತು ಶುಕ್ರವಾರ ಸಲ್ಲಿಸುವಂತೆ ಸೂಚಿಸಿತು. ಮತ್ತ್ತೊಬ್ಬ ಶಾಸಕರೂ ಸೇರಿದಂತೆ ಇಂದು ಒಟ್ಟು 11 ಮಂದಿ ಶಾಸಕರುಗಳು ಮರು ರಾಜೀನಾಮೆ ಪತ್ರಗಳನ್ನು ನೀಡಿದರು.ಮುಂಬೈನಲ್ಲಿದ್ದ 10 ಅತೃಪ್ತ ಶಾಸಕರು ತುರ್ತಾಗಿ ಬೆಂಗಳೂರಿಗೆ ಆಗಮಿಸಿ ತಮ್ಮ ರಾಜೀನಾಮೆಗಳನ್ನು ಕ್ರಮಬದ್ಧವಾಗಿ ಸಭಾಧ್ಯಕ್ಷÀ ರಮೇಶ್ ಕುಮಾರ್ ಅವರಿಗೆ ಸಲ್ಲಿಸಿದರು. ರಾಜೀನಾಮೆ ಪತ್ರಗಳ ಸ್ವೀಕಾರದ ಬಳಿಕ ಪತ್ರ್ರಿಕಾಗೋಷ್ಠ್ಠಿ ನಡೆಸಿದ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿದ್ದೇನೆ ಈ ಬಗ್ಗೆ ಅಂಗೀಕಾರ ಮಾಡುವ ಕುರಿತು ಮುಂದಿನ ದಿನಗಳಲ್ಲಿ ಸಂವಿಧಾನಾತ್ಮಕ ಕ್ರಮದಲ್ಲಿ ವಿಚಾರಣೆ ನಡೆಸಿ ನಿರ್ಧಾರ ಕೈಗೊಳ್ಳುವದಾಗಿ ಪ್ರಕಟಿಸಿದರು. ಶುಕ್ರವಾರದಿಂದ ಅಧಿವೇಶನಈ ನಡುವೆ ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೆ ಶುಕ್ರವಾರ ಚಾಲನೆ ಸಿಗಲಿದೆ. ಮೊದಲ ದಿನದ ಅಧಿವೇಶನ ಕುತೂಹಲಕ್ಕೆ ಕಾರಣವಾಗಿದೆ.
ಶಾಸಕರ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರ ಮೇಲ್ನೋಟಕ್ಕೆ ಬಹುಮತ ಕಳೆದುಕೊಂಡಿದೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಶುಕ್ರವಾರ ವಿಶ್ವಾಸ ಮತಯಾಚನೆ ಮಾಡಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ.
ಜುಲೈ 12 ರಿಂದ 21ರ ತನಕ ಮುಂಗಾರು ಅಧಿವೇಶನ ನಡೆಯಲಿದೆ. ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆಯನ್ನು ಹಾಕಲಾಗಿದೆ. ಬುಧವಾರದ ಗಲಾಟೆ ಬಳಿಕ ವಿಧಾನಸೌಧದ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸರ್ಕಾರಕ್ಕೆ ಬಹುಮತವಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಆರೋಪ ಮಾಡುತ್ತಿದೆ. ಶುಕ್ರವಾರದ ಕಲಾಪದ ವೇಳೆ ಬಹುಮತ ಸಾಬೀತು ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿಯವರ ನಡೆ ಏನು? ಎಂಬುದು ಕುತೂಹಲಕಾರಿಯಾಗಿದೆ.
ಮುಂಗಾರು ಅಧಿವೇಶನದ ಮೊದಲ ದಿನ ಬಿಜೆಪಿ ಸದಸ್ಯರು ಸರ್ಕಾರ ವಿಶ್ವಾಸಮತವನ್ನು ಯಾಚಿಸಲಿ ಎಂದು ಒತ್ತಾಯಿಸುವ ನಿರೀಕ್ಷೆ ಇದೆ. ಪ್ರತಿಪಕ್ಷದ ತಂತ್ರಕ್ಕೆ ತಿರುಗೇಟು ನೀಡಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಎಲ್ಲ ಶಾಸಕರುಗಳಿಗೆ ವಿಪ್ ಜಾರಿಗೊಳಿಸಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನ ಎಲ್ಲಾ ಶಾಸಕರಿಗೆ ಶುಕ್ರವಾರ ಸದನಕ್ಕೆ ಹಾಜರಾಗುವಂತೆ ವಿಪ್ ಜಾರಿಗೊಳಿಸಲಾಗಿದ್ದು, ಈ ಪೈಕಿ ರಾಜೀನಾಮೆ ನೀಡಿರುವ 11 ಕಾಂಗ್ರೆಸ್ ಶಾಸಕರು ಹಾಗೂ
(ಮೊದಲ ಪುಟದಿಂದ) 3 ಜೆಡಿಎಸ್ ಶಾಸಕರೂ ಒಳಗೊಂಡಿದ್ದಾರೆ. ವಿಪ್ ಜಾರಿಯಾದರೆ ಶಾಸಕರು ಸದನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಮತ್ತು ಆಯ್ಕೆಯಾದ ಪಕ್ಷದ ಪರವಾಗಿಯೇ ಮತಹಾಕಬೇಕಿದೆ.
ಸರ್ಕಾರ ಪತನವಾಗುವದಿಲ್ಲ
'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುವದಿಲ್ಲ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವದಿಲ್ಲ' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷ ಬಿಜೆಪಿಯು ಸರ್ಕಾರ ರಚನೆ ಮಾಡುವ ಕನಸು ಮತ್ತೊಮ್ಮೆ ಭಗ್ನವಾಗಲಿದೆಯೇ? ಎಂಬುದು ಶುಕ್ರವಾರ ತೀರ್ಮಾನವಾಗಲಿದೆ. ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಶುಕ್ರವಾರ ವಿಚಾರಣೆ ನಡೆಯಲಿದೆ. ಒಂದು ವೇಳೆ ಮೈತ್ರಿ ಸರ್ಕಾರ ಬಹುಮತ ಸಾಬೀತು ಮಾಡಿದರೆ ಇನ್ನು ಆರು ತಿಂಗಳು ಸರ್ಕಾರ ಉಳಿಯಲಿದೆ.
ಕೊನೆ ಸಂಪುಟ ಸಭೆಯಲ್ಲ
'ಇದು ಕೊನೆ ಸಚಿವ ಸಂಪುಟ ಸಭೆಯಲ್ಲ. ಬಹಳಷ್ಟು ಜನರು ಇದೇ ಕೊನೆಯ ಕ್ಯಾಬಿನೆಟ್ ಸಭೆ ಎಂದುಕೊಂಡಿದ್ದೀರಿ ಅಲ್ಲವೇ?' ಎಂದು ನಗುತ್ತಲೇ ಪ್ರಶ್ನೆ ಮಾಡಿದ ಮುಖ್ಯಮಂತ್ರಿ 'ಸರ್ಕಾರ ಸುಭದ್ರವಾಗಿ ಉಳಿಯಲಿದೆ. ಇನ್ನಷ್ಟು ಸಂಪುಟ ಸಭೆಗಳನ್ನು ಮಾಡುತ್ತೇವೆ' ಎಂದು ಹೇಳಿದರು.
ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸರ್ಕಾರ ಅಲ್ಪ ಮತಕ್ಕೆ ಕುಸಿದಿರುವದರಿಂದ ಈ ಸಚಿವ ಸಂಪುಟ ಸಭೆ ಬಹಳ ಕುತೂಹಲಕ್ಕೆ ಕಾರಣವಾಗಿತ್ತು.
ನನಗೆ ಆದೇಶಿಸಲು ಬರುವದಿಲ್ಲ
ಸ್ಪೀಕರ್ ಆಗಿರುವ ನನಗೆ ನೀವು ಆದೇಶಿಸಲು ಬರುವದಿಲ್ಲ, ಅಸೆಂಬ್ಲಿ ನಿಯಾಮಾವಳಿಗಳ ಪ್ರಕಾರ ನಾನು ಕ್ರಮ ತೆಗೆದುಕೊಳ್ಳುತ್ತೇನೆ, ಸ್ಪೀಕರ್ ಆಗಿ ಸಾಂವಿಧಾನಿಕ ನಿಯಮಗಳನ್ನು ಪಾಲಿಸಬೇಕಿದೆ, ವಿಚಾರಣೆಯನ್ನು ಮಧ್ಯರಾತ್ರಿ 12 ಗಂಟೆಯೊಳಗೆ ಮುಗಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂಕೋರ್ಟ್ ಗೆ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಇಂದು 10 ಮಂದಿ ಶಾಸಕರ ರಾಜೀನಾಮೆ ಪತ್ರದ ಕುರಿತು ನಿರ್ಧಾರ ಕೈಗೊಳ್ಳುವ ಬಗ್ಗೆ ನೀಡಿದ ಸೂಚನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ರಾಜೀನಾಮೆ ಸ್ವಯಂ ಪ್ರೇರಿತವೋ ಅಥವಾ ಬಲವಂತವೋ ಎಂಬ ಬಗ್ಗೆ ತನಿಖೆ ನಡೆಸಬೇಕು, ಹೀಗಾಗಿ ಅರ್ಜಿಯ ವಿಚಾರಣೆ ಸಂಬಂಧ ಏಕಾಏಕಿ ನಿರ್ಧಾರ ಕೈಗೊಳ್ಳಲಾಗುವದಿಲ್ಲ ಎಂದು ವಿವರಿಸಿದ್ದಾರೆ. ಇಂದು 11 ಮಂದಿಯ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ ಬಳಿಕ ನಡೆಸಿದ ಪತ್ರ್ರಿಕಾಗೋಷ್ಠಿಯಲ್ಲಿಯೂ ಅವರು ಈ ಕುರಿತು ಭಾವನಾತ್ಮಕವಾಗಿ ಮಾತನಾಡಿದರು. ಜನರ ಅಹವಾಲುಗಳು, ಸಂವಿಧಾನಾತ್ಮಕ ಅಂಶಗಳು, ಈ ಹಿಂದೆ ಲೋಕಸಭೆಯಲ್ಲಿ ಪಕ್ಷಾಂತರ ವಿರೋಧಿ ಮಸೂದೆಗಳ ಬಗ್ಗೆ ನಡೆದ ಚರ್ಚೆಗಳನ್ನು ಪರಿಶೀಲಿಸಿ ಬಳಿಕ ತನ್ನ ನಿರ್ಧಾರ ಪ್ರಕಟಿಸುವದಾಗಿ ತಿಳಿಸಿದರು. ಈ ಹಿಂದೆ ಕ್ರಮ ಬದ್ಧವಾಗಿ ರಾಜೀನಾಮೆ ನೀಡಿದ 5 ಮಂದಿ ಶಾಸಕರುಗಳ ಕುರಿತಾದ ವಿಚಾರಣೆಯನ್ನು ಈಗಾಗಲೇ ನಿಗದಿಗೊಳಿಸಿರುವ ದಿನಾಂಕಗಳಂದು ನಡೆಸುವದಾಗಿಯೂ ಮಾಹಿತಿಯಿತ್ತರು.
ನಿಯಮಗಳನ್ನು ಪಾಲಿಸದೇ ಶಾಸಕರ ರಾಜೀನಾಮೆ ಅಂಗೀಕರಿಸುವದಿಲ್ಲ ಎಂದು ಹೇಳುವ ಮೂಲಕ ಅತೃಪ್ತರ ರಾಜೀನಾಮೆ ಅಂಗೀಕಾರ ಸದ್ಯಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
“ನಾನು ಯಾವದೇ ಕಾರಣಕ್ಕೂ ವಿಳಂಬ ಮಾಡಿಲ್ಲ. ನಿಯಮಗಳನ್ನು ಪಾಲಿಸಬೇಕಿತ್ತು, ಕ್ರಮಬದ್ಧವಾಗಿಲ್ಲದ 8 ಅತೃಪ್ತ ಶಾಸಕರ ರಾಜೀನಾಮೆಯನ್ನು ಕ್ರಮಬದ್ಧ ರೀತಿಯಲ್ಲಿ ಸಲ್ಲಿಸುವಂತೆ ತಿಳಿಸಲಾಗಿತ್ತು” ಎಂದರು.
ಸಂವಿಧಾನ ಹಾಗೂ ಜನರ ಹಂಗಿನಲ್ಲಿ ನಾನು ಬದುಕುತ್ತಿದ್ದು, ಯಾವದೇ ಶಕ್ತಿಗೂ ಬಗ್ಗುವದಿಲ್ಲ, ಯಾವದೇ ಒತ್ತಡಕ್ಕೂ ಮಣಿಯುವದಿಲ್ಲ .ಶಾಸಕರ ರಾಜೀನಾಮೆ ಸಂಬಂಧ ನಿರ್ಧಾರ ತಿಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಕಲಾಪದ ಇಡೀ ಪ್ರಕ್ರಿಯೆಯನ್ನು ಚಿತ್ರೀಕರಣ ಹಾಗೂ ದಾಖಲೆಗಳನ್ನು ಸುಪ್ರೀಂಕೋರ್ಟಿಗೆ ಕಳುಹಿಸಲಾಗುವದು ಎಂದು ತಿಳಿಸಿದರು.
ಜೀವ ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವದಾಗಿ ಕೆಲ ಶಾಸಕರು ಹೇಳಿದ್ದಾರೆ. ನಮ್ಮ ಬಳಿ ಕೇಳಿಕೊಂಡರೆ ರಕ್ಷಣೆ ನೀಡುವದಾಗಿ ಅವರಿಗೆ ಹೇಳಿದ್ದೇನೆ. ರಾಜೀನಾಮೆ ವಿಚಾರದಲ್ಲಿ ಕೇವಲ 3 ದಿನ ವಿಳಂಬವಾಗಿದೆ. ಅಷ್ಟಕ್ಕೇ ಭೂಕಂಪವಾದ ರೀತಿಯಲ್ಲಿ ಅವರು ವರ್ತಿಸುತ್ತಿದ್ದಾರೆ ಎಂದು ರಮೇಶ್ ಕುಮಾರ್ ಕಿಡಿಕಾರಿದರು.
ಅತೃಪ್ತ ಶಾಸಕರು ಇಂದು ಸಲ್ಲಿಸಿರುವ ರಾಜೀನಾಮೆ ಪತ್ರಗಳನ್ನು ರಾತ್ರಿಯಲ್ಲೇ ಪರಿಶೀಲಿಸಲಾಗುವದು, ವಿಚಾರಣೆ ನಡೆಸಿದ ಬಳಿಕ ತಮ್ಮ ನಿರ್ಧಾರವನ್ನು ತಿಳಿಸಲಾಗುವದು ಎಂದು ರಮೇಶ್ ಕುಮಾರ್ ಹೇಳಿದರು.
ಅತೃಪ್ತ ಶಾಸಕರು ಸ್ಪೀಕರ್ ಅವರನ್ನು ಗುರುವಾರ ಸಂಜೆ 6 ಗಂಟೆಯೊಳಗೆ ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿತ್ತು. ಅಲ್ಲದೆ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆ ಕುರಿತು ಗುರುವಾರವೇ ನಿರ್ಧಾರ ಕೈಗೊಳ್ಳಬೇಕು. ಆ ನಿರ್ಧಾರವನ್ನು ಶುಕ್ರವಾರ ತನಗೆ ತಿಳಿಸಬೇಕೆಂದೂ ಸುಪ್ರೀಂ ಕೋರ್ಟ್ ಸೂಚಿಸಿತ್ತು. ತಾವು ಕೊಟ್ಟಿರುವ ರಾಜೀನಾಮೆಗಳನ್ನು ಅಂಗೀಕರಿಸುವ ಕುರಿತು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಗುರುವಾರ ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಅಲ್ಲದೆ, ಸ್ಪೀಕರ್ ಎದುರು ಹಾಜರಾಗಲು ಬೆಂಗಳೂರಿಗೆ ಬರುವ ಅತೃಪ್ತ ಶಾಸಕರಿಗೆ ಅಗತ್ಯ ಭದ್ರತೆ ಒದಗಿಸುವಂತೆ ಕರ್ನಾಟಕ ಪೊಲೀಸ್ ಡಿಜಿಪಿ ಅವರಿಗೂ ನ್ಯಾಯಪೀಠ ಸೂಚನೆ ನೀಡಿತು. ಸ್ಪೀಕರ್ ವಿರುದ್ಧ ಅತೃಪ್ತ ಶಾಸಕರು ಕೊಟ್ಟಿರುವ ದೂರುಗಳ ಕುರಿತು ಶುಕ್ರವಾರ ವಿಚಾರಣೆ ನಡೆಸುವದಾಗಿ ನ್ಯಾಯಪೀಠ ಹೇಳಿದೆ.
ಓಡುತ್ತ ಬಂದರು
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ವಿಧಾನಸಭಾ ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಲು ಅತೃಪ್ತ ಶಾಸಕರು ಮುಂಬಯಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರು ಎಚ್ಎಎಲ್ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅಲ್ಲಿಂದ ನೇರವಾಗಿ ‘ಸಿಗ್ನಲ್ಫ್ರೀ’ ಸಾರಿಗೆ ವ್ಯವಸ್ಥೆಯಡಿ ವಿಧಾನಸೌಧಕ್ಕೆ ಆಗಮಿಸಿದರು. ಆರು ಗಂಟೆ ಮೂರು ನಿಮಿಷಕ್ಕೆ ಆಗಮಿಸಿದರು. ಬಸ್ನಿಂದ ಇಳಿದು ಶಾಸಕರು ಓಡೋಡಿ ಸ್ಪೀಕರ್ ಕಚೇರಿಗೆ ತಲುಪಿದರು.
ಭೈರತಿ ಬಸವರಾಜ್, ರಮೇಶ್ಜಾರಕಿಹೊಳಿ, ಶಿವರಾಮ್ಹೆಬ್ಬಾರ್, ಬಿಸಿ ಪಾಟೀಲ್, ಗೋಪಾಲಯ್ಯ, ನಾರಾಯಣ ಗೌಡ, ವಿಶ್ವನಾಥ್, ಮಹೇಶ್ಕುಮಟಳ್ಳಿ, ಮುನಿರತ್ನ,ಎಸ್.ಟಿ. ಸೋಮಶೇಖರ್, ಪ್ರತಾಪಗೌಡ ಪಾಟೀಲ್ ಸ್ಪೀಕರ್ ಕಚೇರಿಗೆ ತಲುಪಿದರು. ಅತೃಪ್ತ ಶಾಸಕರೆಲ್ಲರೂ ಕೈ ಬರಹದಲ್ಲೇ ರಾಜೀನಾಮೆ ಪತ್ರ ಬರೆದು ಮತ್ತೊಮ್ಮೆ ಸಲ್ಲಿಸಿದರು. ಪ್ರತಾಪ್ ಗೌಡ ಅವರು ಈ ಹಿಂದೆ ಕ್ರಮಬದ್ಧವಾಗಿಯೇ ರಾಜೀನಾಮೆ ಪತ್ರ ಸಲ್ಲಿಸಿದ್ದರೂ ಮತ್ತೊಮ್ಮೆ ಇಂದು ರಾಜೀನಾಮೆ ನೀಡಿ ಇಂದು 10 ಮಂದಿಯೊಂದಿಗೆ 11 ನೇ ಶಾಸಕರಾಗಿ ಮರು ರಾಜೀನಾಮೆ ಸಲ್ಲಿಸಿದವರಾದರು.
ವಿಧಾನಸೌಧದಲ್ಲಿ ಅಭೂತಪೂರ್ವ ಭದ್ರತೆ ನೀಡಲಾಯಿತು. ಇಡೀ ಶಕ್ತಿಸೌಧ ಖಾಕಿಸೌಧವಾಗಿ ಹೊರಹೊಮ್ಮಿತು. ಶಕ್ತಿಸೌಧಕ್ಕೆ ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ವಿಧಾನಸಭಾ ಸ್ಪೀಕರ್ ಕೊಠಡಿ ಹಾಗೂ ಆಪ್ತ ಕಾರ್ಯದರ್ಶಿ ಕೊಠಡಿ ಹೊರತುಪಡಿಸಿ ಉಳಿದ ಎಲ್ಲ ಕೊಠಡಿಗಳನ್ನು ಪೊಲೀಸರು ಬಾಗಿಲು ಬಂದ್ ಮಾಡಿಸಿದ್ದರು. ಇಡೀ ಘಟನಾವಳಿಗಳನ್ನು ವೀಡಿಯೋ ರೆಕಾರ್ಡಿಂಗ್ ಸಹ ಮಾಡಲಾಗಿದೆ.
ಅನರ್ಹತೆ ಅಸ್ತ್ರ ಪ್ರಯೋಗ
ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಜೆಡಿಎಸ್ನ ಮೂವರು ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆಯನ್ವಯ ಅನರ್ಹತೆ ಅಸ್ತ್ರ ಪ್ರಯೋಗಿಸಲು ಜೆಡಿಎಸ್ ನಾಯಕರು ನಿರ್ಧರಿಸಿದ್ದು, ಈ ಸಂಬಂಧ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಜೆಡಿಎಸ್ನ ಮಾಜಿ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಗೋಪಾಲಯ್ಯ ಮತ್ತು ನಾರಾಯಣ ಗೌಡ ಕಾಂಗ್ರೆಸ್ನ ಅತೃಪ್ತ ಶಾಸಕರ ಜತೆಯಲ್ಲಿ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದರು. ಜೆಡಿಎಸ್ ಮುಖಂಡರು ಅವರನ್ನು ಮನವೊಲಿಸಲು ನಡೆಸಿದ ಪ್ರಯತ್ನ ಸಫಲವಾಗಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಗುರುವಾರ ಸಂಜೆ ಸ್ಪೀಕರ್ಗೆ ದೂರು ನೀಡಿದ್ದಾರೆ.