*ಸಿದ್ದಾಪುರ, ಜು. 11: ಜಿಲ್ಲೆಯಲ್ಲಿರುವ ಕೆಲ ಸರ್ಕಾರಿ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿದೆ.

ರಾಜ್ಯ ಸರ್ಕಾರ ಆರಂಭಿಕ ಹಂತದಲ್ಲಿ ಕೊಡಗು ಜಿಲ್ಲೆಯ 8 ಸರ್ಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಲು ಆದೇಶಿಸಿದೆ. ನೆಲ್ಲಿಹುದಿಕೇರಿ, ಪೊನ್ನಂಪೇಟೆ, ವೀರಾಜಪೇಟೆ, ಗೋಣಿಕೊಪ್ಪಲು, ಕುಶಾಲನಗರ, ಹೊದವಾಡ, ಮೂರ್ನಾಡು ಮತ್ತು ನಾಪೋಕ್ಲುವಿನ ಸರ್ಕಾರಿ ಶಾಲೆಗಳು ಕಾನ್ವೆಂಟ್ ಶಾಲೆಗಳಂತೆ ರೂಪುಗೊಂಡಿದೆ.

ಇಷ್ಟು ವರ್ಷ ಬಡವರು, ಬಡತನ ರೇಖೆಗಿಂತ ಕೆಳಗಿರುವವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದರು. ಕೆಲವರು ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಸಾಲ ಮಾಡಿ ಸಂಕಷ್ಟದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ, ಕೆಲ ಪ್ರತಿಷ್ಠಿತ ಶಾಲೆಗಳಿಗೆ ಸೇರಿಸುತ್ತಿದ್ದರು.

ಇದೀಗ ಸರ್ಕಾರಿ ಶಾಲೆಯಲ್ಲಿಯೇ ಇಂಗ್ಲಿಷ್ ಕಲಿಕೆ ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲ ಪೋಷಕರಲ್ಲಿಯೂ ಸಂತಸ ಅರಳಿದೆ. ಪ್ರಸಕ್ತ ವರ್ಷ ಎಲ್‍ಕೆಜಿ, ಯುಕೆಜಿ ಮತ್ತು ಒಂದನೇ ತರಗತಿ ಪ್ರಾರಂಭಗೊಂಡಿದೆ. ಇದು ಹಂತಹಂತವಾಗಿ ಇತರೆ ತರಗತಿಗಳಿಗೂ ವಿಸ್ತರಿಸಿದರೆ ತಮ್ಮ ಮಕ್ಕಳು ಇತರ ಮಕ್ಕಳಂತೆ ಆತ್ಮವಿಶ್ವಾಸದ ಹೆಜ್ಜೆ ಇಡುತ್ತಾರೆ ಎಂಬದು ಅನೇಕ ಪೋಷಕರ ಸದಾಶಯ.