ಸಿದ್ದಾಪುರ, ಜು. 10: ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖಾ ಸಿಬ್ಬಂದಿ ಅರಣ್ಯಕ್ಕೆ ಅಟ್ಟಿಸಿದರು. ವೀರಾಜಪೇಟೆ ವಲಯದ ವ್ಯಾಪ್ತಿಗೆ ಒಳಪಡುವ ಕಾವಾಡಿ ಹಾಗೂ ಇಂಜಿಲಗೆರೆ ಪುಲಿಯೇರಿ ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ 10ಕ್ಕೂ ಅಧಿಕ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಬುಧವಾರ ದಂದು ಅರಣ್ಯಕ್ಕೆ ಅಟ್ಟಲಾಯಿತು.

ಅರಣ್ಯ ಇಲಾಖಾ ಸಿಬ್ಬಂದಿ ಹಾಗೂ ಆರ್.ಆರ್.ಟಿ. ತಂಡದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ತೋಟಗಳಿಂದ ಕದಲಲು ಹಿಂದೇಟು ಹಾಕುತ್ತಿದ್ದವು ಎನ್ನಲಾಗಿದೆ. ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಕಾಡಾನೆಗಳ ಹಿಂಡಿನ ಪೈಕಿ ಒಂಟಿ ಸಲಗ ಹಾಗೂ ಮರಿಯಾನೆಗಳು ಕಂಡುಬಂದಿತ್ತೆಂದು ಅರಣ್ಯ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ. ಸಿದ್ದಾಪುರ ಸುತ್ತಮುತ್ತ ಗ್ರಾಮಗಳ ಕಾಫಿ ತೋಟಗಳಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಬೆಳೆಗಾರರು ಹಾಗೂ ಕಾರ್ಮಿಕರಿಗೆ ನೆಮ್ಮದಿ ಇಲ್ಲದಂತಾಗಿದೆ. ಇದಲ್ಲದೆ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆಯನ್ನು ನಡೆಸುತ್ತಿದ್ದು, ಕೃಷಿ ಫಸಲುಗಳನ್ನು ನಾಶಪಡಿಸುತ್ತಿವೆ. ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಗೋಪಾಲ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಸೇರಿದಂತೆ 10ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮಳೆಯ ನಡುವೆಯೂ ಕಾಫಿ ತೋಟದಿಂದ ಆನೆಗಳನ್ನು ಅರಣ್ಯಕ್ಕೆ ಅಟ್ಟಲಾಯಿತು.

-ವಾಸು.