ಸುಂಟಿಕೊಪ್ಪ, ಜು. 11: ಸರಕಾರ ಕೃಷಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜೇನು ತಯಾರಿಕಾ ಕೇಂದ್ರ ಕಾಡುಪಾಲಾ ಗಿದ್ದು, ಅತ್ತ ಸರಕಾರಕ್ಕೂ ಲಾಭವಿಲ್ಲದೆ ಕೃಷಿಕರನ್ನು ಅಣಕಿಸುವಂತೆ ಅನಾಥ ವಾಗಿದೆ. ಮಾದಾಪುರ ಗರ್ವಾಲೆ ರಸ್ತೆಯ ಸರಕಾರಿ ಆಸ್ಪತ್ರೆ ಸಮೀಪದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ 1.5 ಎಕ್ರೆ ಜಾಗದಲ್ಲಿ ಜೇನು ತಯಾರಿಕಾ (ಮಧುವನ ಕೇಂದ್ರ) ಕೇಂದ್ರವನ್ನು 1964 ಸ್ಥಾಪಿಸಲಾಗಿತ್ತು ಉತ್ತಮ ರೀತಿಯಲ್ಲಿ ಕೃಷಿಕರಿಗೆ ಜೇನು ತಯಾರಿಸಲು ಇಲ್ಲಿ ತರಬೇತಿ ನೀಡುತ್ತಿದ್ದು ಜೇನು ಪೆಟ್ಟಿಗೆಯನ್ನು ಇಲಾಖೆಯಿಂದ ಕೃಷಿಕರಿಗೆ ನೀಡಲಾಗುತಿತ್ತು. ಮಾದಾಪುರ, ಜಂಬೂರು, ಶಿರಂಗಳ್ಳಿ, ಮೂವ ತ್ತೋಕ್ಕು, ಗರ್ವಾಲೆ, ಸೂರ್ಲಬ್ಬಿ, ಕಿರುದಾಳೆ ಗ್ರಾಮದ ರೈತಾಪಿ ವರ್ಗ ದವರು ಜೇನು ತಯಾರಿಸಿ ಆರ್ಥಿಕ ವಾಗಿ ಮುಂದುವರೆದಿದ್ದರು. ಆದರೆ ಬರಬರುತ್ತಾ ತೋಟಗಾರಿಕೆ ಇಲಾಖೆಗೆ ಸೇರಿದ ಈ ಜೇನು ತಯಾರಿಕಾ ಕೇಂದ್ರ ನಿರ್ವಹಣೆ ಇಲ್ಲದೆ ಕಾಡು ಪಾಲಾಗಿದೆ. ಈ ಜಾಗದಲ್ಲಿ ಬೃಹದಾಕಾರದ ತೇಗ, ಹೊನ್ನೆ ನಂದಿ ಮರಗಳು ಕಳ್ಳರ ಪಾಲಾಗಿದೆ ಜೇನು ಕೃಷಿ ಕೇಂದ್ರ ಗೇಟಿಗೆ ಜಡಿದ ಬೀಗ ತುಕ್ಕು ಹಿಡಿದಿದೆ. ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ ಇಲ್ಲಿ ಜೇನು ತಯಾರಿಕಾ ಮಧುವನ ಕೇಂದ್ರ ಇರುವದು ಮರೆತು ಹೋಗಿದೆ. ಕೊಡಗಿನಲ್ಲಿ ಜೇನು ಕೃಷಿ ಅವನತಿಯತ್ತ ಸಾಗಲು ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರ ಆರೋಪ ವಾಗಿದೆ. ಮಾದಾಪುರ ಜೇನು ತಯಾರಿಕಾ ಮಧುವನ ಕೇಂದ್ರದಿಂದ ಈ ಹಿಂದೆ ಜೇನು ಕೃಷಿಕರಿಗೆ ಪ್ರಯೋಜನ ವಾಗುತಿತ್ತು.

ಈಗ ಅದು ಇಲಾಖೆಯ ನಿರ್ವಹಣೆ ಇಲ್ಲದೆ ರೈತರಿಗೆ ತೊಂದರೆಯಾಗಿರುವದು ವಿಷಾದನೀಯವಾದುದು ಎಂದು ಗ್ರಾಮಸ್ಥ ತಾತಪಂಡ ಮಧು ಪ್ರತಿಕ್ರಿಯಿಸಿದ್ದು, ಸಂಬಂಧಪಟ್ಟವರು ಗಮನಹರಿಸುವಂತೆ ಆಗ್ರಹಿಸಿದ್ದಾರೆ.

- ಬಿ.ಡಿ. ರಾಜು ರೈ