ಕೂಡಿಗೆ, ಜು. 10 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2019-20 ನೇ ಸಾಲಿನ ಗ್ರಾಮ ಸಭೆಯು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ಹುದುಗೂರು ಗ್ರಾಮದ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಸಭೆಯಲ್ಲಿ ಹಾರಂಗಿ- ಮದಲಾಪುರ ಸಮೀಪವಿರುವ ಹಾರಂಗಿ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ತೀರಾ ಹಳೆಯದಾಗಿದ್ದು, ಬೀಳುವ ಹಂತ ತಲುಪಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ. ಕಲ್ಲುತುಂಬಿದ ಲಾರಿಗಳು ಈ ಮಾರ್ಗದಲ್ಲಿ ಚಲಿಸುವದರಿಂದ ಅನಾಹುತ ಸಂಭವಿಸಬಹುದೆಂದು ಅನೇಕ ಬಾರಿ ಹಾರಂಗಿ ನೀರಾವರಿ ನಿಗಮಕ್ಕೆ ಮನವಿ ಸಲ್ಲಿಸಿದರೂ ಯಾವದೇ ಕ್ರಮಕೈಗೊಳ್ಳದ ಬಗ್ಗೆ ಬ್ಯಾಡಗೊಟ್ಟ ಗ್ರಾಮದ ಅಣ್ಣಯ್ಯ, ಗಣೇಶ್, ಗಿರಿ, ರಾಜು ಮೊದಲಾದವರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.

ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಈ ಸೇತುವೆಯ ಬಗ್ಗೆ ಕ್ರಿಯಾಯೋಜನೆಯಾಗಿದ್ದು, ಸರ್ಕಾರದ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಹುದುಗೂರು ಮತ್ತು ಸೀಗೆಹೊಸೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಡಾನೆಗಳಿಗಾಗಿ ತೋಡಿದ ಕಂದಕವು ಸಮರ್ಪಕವಾಗಿಲ್ಲ. ಕಂದಕ ತೋಡುವ ಸಂದರ್ಭ ಕಲ್ಲುಬಂಡೆಗಳು ಇದ್ದ ಜಾಗದಲ್ಲಿ ಕಂದಕ ತೆಗೆಯದೆ ಹಾಗೆಯೇ ಬಿಟ್ಟಿರುವದರಿಂದ ಕಾಡಾನೆಗಳು ಸಲೀಸಾಗಿ ಬಂಡೆಯ ಮೇಲೆ ಬಂದು ರೈತರ ಜಮೀನಿಗೆ ದಾಳಿ ನಡೆಸಿ ನಷ್ಟಪಡಿಸುತ್ತಿವೆ. ಇದರ ಬಗ್ಗೆ ಗಮನಹರಿಸಬೇಕಾಗಿ ಎಂದು ಗಿರೀಶ್, ತಾಯಮ್ಮ, ನಂದಿ ಒತ್ತಾಯಿಸಿದರು.

ಬ್ಯಾಡಗೊಟ್ಟ ಗ್ರಾಮದಲ್ಲಿ ರಸ್ತೆಯ ಸಮೀಪ ಶುಚಿತ್ವ ಕಾಪಾಡಲು ಮತ್ತು ಬ್ಯಾಡಗೊಟ್ಟ ಗ್ರಾಮದ ಪರಿಶಿಷ್ಟ ಜಾತಿಯ ಕಾಲೋನಿಯನ್ನು ಅಭಿವೃದ್ಧಿ ಪಡಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಭಾರೀ ಚರ್ಚೆಗಳು ನಡೆದವು.

ವಿದ್ಯುತ್ ಇಲಾಖೆಯವರು ಅಳವಡಿಸಿರುವ ಕಂಬಗಳು ಬಾಗುತ್ತಿರುವ ಮತ್ತು ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಳಿಸುತ್ತಿರು ವದರಿಂದ ಈ ಭಾಗದ ರೈತರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರಿಪಡಿಸುವಂತೆ ವಿದ್ಯುತ್ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು.

ಕೂಡಿಗೆ ಸರ್ಕಲ್‍ನ ಸಮೀಪವಿರುವ ಹಾರಂಗಿ ನದಿಗೆ ತೆರಳಲು ಮಾಡಿರುವ ಸೋಪಾನ ಕಟ್ಟೆಯು ಅಶುಚಿತ್ವದಿಂದ ಕೂಡಿದ್ದು, ಇದರ ಪಕ್ಕದಲ್ಲಿನ ಮನೆಗಳಿಗೂ ಭಾರೀ ತೊಂದರೆಯಾಗುತ್ತಿರುವ ವಿಷಯದ ಬಗ್ಗೆ ಹಾಗೂ ಸರ್ಕಲ್‍ನಲ್ಲಿರುವ ಮದ್ಯದಂಗಡಿಯಲ್ಲಿ ಶೌಚಾಲಯವಿಲ್ಲದ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಸ್ಥಳೀಯರಾದ ಪಿಲೋಮಿನಾ, ಕಾಂತರಾಜ್, ರಾಮಚಂದ್ರ, ವಿಶ್ವನಾಥ್ ಅವರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಅಬಕಾರಿ ಇಲಾಖೆಯ ಅಧಿಕಾರಿ ಸಂಬಂಧಪಟ್ಟ ಮದ್ಯದಂಗಡಿಗೆ ತೆರಳಿ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವದಾಗಿ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿಯನ್ನು ನೀಡಿದರು. ಸಭೆಗೆ ಕಳೆದ ವಾರ ನಡೆದ ವಾರ್ಡ್ ಸಭೆಯ ನಡವಳಿಕೆಯನ್ನು ಮಂಡಿಸಲಾಯಿತು. ಉದ್ಯೋಗ ಖಾತರಿ ಮತ್ತು ಇತರ ಯೋಜನೆಯ ಕಾಮಗಾರಿಗಳ ಆಯ್ಕೆ ಪ್ರಕ್ರಿಯೆಯು ಈ ಸಂದರ್ಭ ನಡೆಯಿತು. ನೋಡಲ್ ಅಧಿಕಾರಿಯಾಗಿ ಕುಶಾಲನಗರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಪೂಣಚ್ಚ ಕಾರ್ಯನಿರ್ವಹಿಸಿದರು.

ಜಿಲ್ಲಾ ಪಂಚಾಯಿ ಸದಸ್ಯೆ ಕೆ.ಆರ್.ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯೆ ಸಬಿತ ಚನ್ನಕೇಶವ್ ಸಭೆಯನ್ನುದ್ದೇಶಿಸಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್‍ಕುಮಾರ್ ಸೇರಿದಂತೆ ಸರ್ವ ಸದಸ್ಯರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಕಾರ್ಯದರ್ಶಿ ಶಿಲ್ಪ, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಶಾಲೆಗಳ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.