ಗೋಣಿಕೊಪ್ಪಲು, ಜು. 11: ದಕ್ಷಿಣ ಕೊಡಗಿನ ಪೊನ್ನಂಪೇಟೆ, ಹುದಿಕೇರಿ, ಬಾಳೆಲೆ ಹಾಗೂ ಶ್ರೀಮಂಗಲ ಹೋಬಳಿಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಚೆಸ್ಕಾಂ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸಿಬ್ಬಂದಿಗಳ ಸಹಕಾರ ಪಡೆದು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ವಿದ್ಯುತ್ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಇತ್ತೀಚೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರೈತರ, ಬೆಳೆಗಾರರ ಅನುಭವಿಸುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ಜಿಲ್ಲಾ ಮಟ್ಟದ ಚೆಸ್ಕಾಂ ಅಧಿಕಾರಿಗಳು, ಕಿರಿಯ ಅಧಿಕಾರಿಗಳು ಸಭೆ ನಡೆಸಿ ನಾಲ್ಕು ಹೋಬಳಿಗಳ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದರು.

ಪ್ರಮುಖವಾಗಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗೋಣಿಕೊಪ್ಪದಿಂದ ತಿತಿಮತಿಗೆ ಎಕ್ಸ್‍ಪ್ರೆಸ್ ಲೈನ್‍ನ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಈ ಭಾಗಕ್ಕೆ ವಿದ್ಯುತ್ ಸಂಪರ್ಕ ಲಭ್ಯವಾಗಲಿದೆ.

ಹುದಿಕೇರಿ ಹೋಬಳಿಯಲ್ಲಿ ಹೊಸ ಸ್ಟೇಷನ್ ಸ್ಥಾಪನೆ ಬಗ್ಗೆ ಅಲ್ಲಿನ ರೈತರು ಪಂಚಾಯ್ತಿ ಸದಸ್ಯರು ಸ್ಥಳ ನೀಡಿದ್ದು ಎಇಇ ಅಂಕಯ್ಯ ಸ್ಥಳ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ಹೊಸ ಸ್ಟೇಷನ್ ಮಂಜೂರು ಮಾಡುವಂತೆ ಪತ್ರ ವ್ಯವಹಾರ ನಡೆಸಿದ್ದಾರೆ.

ನಲ್ಲೂರು ಗ್ರಾಮದ ಮುಖ್ಯ ರಸ್ತೆಯ ನೂತನ ಸೇತುವೆ ಬಳಿ ನಿರ್ಮಿಸಿದ್ದ ಟ್ರಾನ್ಸ್‍ಫಾರಂ ಬೇರೆಡೆಗೆ ಸ್ಥಳಾಂತರಿಸಲು ಪಿಡಬ್ಲ್ಯೂಡಿ ಇಲಾಖೆ ಹಾಗೂ ಚೆಸ್ಕಾಂ ಇಲಾಖೆಯ ನಡುವೆ ಹೊಂದಾಣಿಕೆ ಇಲ್ಲದೆ ಹಲವಾರು ವರ್ಷಗಳಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈ ಸಮಸ್ಯೆಯನ್ನು ಮನಗಂಡ ರೈತ ಮುಖಂಡರು ಎರಡು ಇಲಾಖೆಯ ಹಿರಿಯ ಅಧಿಕಾರಿಗಳ ಮನವೊಲಿಸಿ ಇಲಾಖೆಗಳ ಮಧ್ಯೆ ಇದ್ದಂತಹ ಗೊಂದಲ ನಿವಾರಿಸುವ ಮೂಲಕ ಕಳೆದ ಹಲವಾರು ವರ್ಷಗಳ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಯಶಸ್ಸು ಸಾಧಿಸಿದರು. ಇದೀಗ ರಸ್ತೆ ಮಧ್ಯೆ ಭಾಗದಲ್ಲಿ ಅಳವಡಿಸಿದ್ದ ಟ್ರಾನ್ಸ್‍ಫಾರಂನ ಸ್ಥಳ ಬದಲಾಯಿಸಿದ್ದು ವಾಹನ ಸಂಚಾರ ಸೇರಿದಂತೆ ಈ ಭಾಗದ ಸಾರ್ವಜನಿ ಕರಿಗೆ ಇದರಿಂದ ಅನುಕೂಲವಾಗಿದೆ.

ಗೋಣಿಕೊಪ್ಪಲುವಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಂಕಯ್ಯ, ತಮ್ಮ ಕಿರಿಯ ಇಂಜಿನಿಯರ್‍ಗಳ ಸಹಕಾರದೊಂದಿಗೆ ಚೆಸ್ಕಾಂ ಸಿಬ್ಬಂದಿಗಳೊಂದಿಗೆ ವಿದ್ಯುತ್ ಸಮಸ್ಯೆ ನಿವಾರಣೆ ಬಗ್ಗೆ ಶ್ರಮ ವಹಿಸಿರುವದನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

- ಹೆಚ್.ಕೆ. ಜಗದೀಶ್