ನಾಪೆÇೀಕ್ಲು, ಜು. 11: ಸಂಜೆ ಅಂಗಡಿಯಿಂದ ಮನೆಗೆ ವಾಪಸಾಗುವ ಸಂದರ್ಭ ಒಂಟಿ ಸಲಗದ ಧಾಳಿಯಿಂದ ವ್ಯಕ್ತಿಯೋರ್ವರು ಪಾರಾದ ಘಟನೆ ಸಮೀಪದ ಪೇರೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಆನೆಡ ರಾಜಪ್ಪ ಆನೆ ದಾಳಿಯಿಂದ ಪಾರಾದ ವ್ಯಕ್ತಿ ಸಂಜೆ 7.15 ಗಂಟೆ ಸುಮಾರಿಗೆ ಮನೆಗೆ ತೆರಳುತ್ತಿರುವಾಗ ಪಾಲೆಯಡ ಸಬಿತಾ ಚಿಣ್ಣಪ್ಪ ಅವರ ಕಾಫಿ ತೋಟದಲ್ಲಿ ಹಲಸಿನ ಹಣ್ಣು ತಿನ್ನುತ್ತಿದ್ದ ಒಂಟಿ ಸಲಗ ಏಕಾಏಕಿ ಇವರನ್ನು ಅಟ್ಟಿಸಿಕೊಂಡು ಬಂದಿದೆ. ಮಳೆಗೆ ಕೊಡೆ ಹಿಡಿದುಕೊಂಡು ಹೋಗುತ್ತಿದ್ದ ಅವರು ಹೆದರಿ ಓಡಲು ಆರಂಭಿಸಿದ್ದಾರೆ. ನಂತರ ರಸ್ತೆ ಪಕ್ಕದಲ್ಲಿದ್ದ ಟೆನಿಫೆÇೀನ್ ಕಂಬ ಹಿಡಿದು ಪಕ್ಕದ ತೋಟಕ್ಕೆ ಬೇಲಿ ಜಿಗಿಯಲು ಯತ್ನಿಸಿದ ಅವರು ಜಾರಿ ಕಂಬದ ಬುಡಕ್ಕೆ ಬಿದ್ದಿದ್ದು, ರಭಸದಿಂದ ಓಡಿ ಬರುತ್ತಿದ್ದ ಆನೆ ಘೀಳಿಡುತ್ತಾ ಇಳಿ ಜಾರಿನಲ್ಲಿ ಇವರನ್ನು ದಾಟಿ ಮುಂದಕ್ಕೆ ಓಡಿ ಹೋಗಿದೆ. ಇವರು ಎದ್ದು ಹಿಂತಿರುಗಿ ಓಡಿದ ಕಾರಣ ಪ್ರಾಣಾಪಾಯದಿಂದ ಪಾರಾಗಿರುವದಾಗಿ ‘ಶಕ್ತಿ’ಗೆ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು, ಹಲವಾರು ತೋಟಗಳು ನಾಶಗೊಂಡಿವೆ. ಕಾಡಾನೆಗಳನ್ನು ಕಾಡಿಗಟ್ಟುವ ಬದಲು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಪಾಲೆಯಡ ಸಬಿತಾ ಚಿಣ್ಣಪ್ಪ, ಆನೆಡ ಗಪ್ಪು, ಚಿಮ್ಮಣ್ಣ, ಮತ್ತಿತರರು ಆಗ್ರಹಿಸಿದ್ದಾರೆ.

-ಪಿ.ವಿ.ಪ್ರಭಾಕರ್