ಮಡಿಕೇರಿ, ಜು. 10: ಇಲ್ಲಿನ ಹಳೇ ಸಿದ್ದಾಪುರ ರಸ್ತೆಯಲ್ಲಿರುವ ಕೊಡಗು ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿದ್ದ ಬೃಹತ್ ಸಿಲ್ವರ್ ಮರವೊಂದು ಉರುಳಿ ಬಿದ್ದಿದ್ದು, ವಿದ್ಯುತ್ ಕಂಬ - ತಂತಿ ಸಹಿತ ನೆಲಕ್ಕುರುಳಿದ್ದು, ಅದೃಷ್ಟವಶಾತ್ ಸಂಭವಿಸಲಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಇಂದು ಮಧ್ಯಾಹ್ನ ವೇಳೆ ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿದ್ದ ಭಾರೀ ಗಾತ್ರದ ಸಿಲ್ವರ್ ಮರವೊಂದು ಬುಡ ಮೇಲಾಗಿ ಹಳೆ ಸಿದ್ದಾಪುರ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ. ಮರಬಿದ್ದ ರಭಸಕ್ಕೆ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು, ತಂತಿಗಳು ದಾರಿಯುದ್ದಕ್ಕೂ ಬಿದ್ದಿವೆ. ಅಲ್ಲದೆ, ಮರದ ರೆಂಬೆಗಳು ರಸ್ತೆ ಬದಿಯಲ್ಲೇ ನಿಲ್ಲಿಸಿದ್ದ ಮಾರುತಿ ಕಾರೊಂದರ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಮರ ಬೀಳುವ ಸಂದರ್ಭದಲ್ಲಿ ರಸ್ತೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವದೇ ಅನಾಹುತವಾಗಿಲ್ಲ. ಘಟನೆ ದೇವಿಗ್ಯಾಸ್ ಏಜೆನ್ಸಿ ಕಚೇರಿ ಬಳಿ ಸಂಭವಿಸಿದ್ದು, ಒಂದು ವೇಳೆ ಬೆಳಗ್ಗಿನ ವೇಳೆಯಲ್ಲಾಗಿದ್ದರೆ ಗ್ಯಾಸ್ ಕೊಳ್ಳಲೆಂದು ಬರುವವರು ರಸ್ತೆಯಲ್ಲಿ ಓಡಾಡಿಕೊಂಡಿರುತ್ತಿದ್ದರಲ್ಲದೆ, ಸರತಿ ಸಾಲಿನಲ್ಲೂ ನಿಂತಿರುತ್ತಿದ್ದರು. ನಿನ್ನೆ ಮೊನ್ನೆ ಆಗಿದ್ದರೆ ಮಾರುದ್ದ ಸರತಿ ಸಾಲಿದ್ದು, ಪ್ರಾಣಾಪಾಯ ಸಂಭವಿಸುತ್ತಿತ್ತೆಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.
ನಿರ್ಲಕ್ಷ್ಯವೇ ಕಾರಣ
ನಿವಾಸದ ಆವರಣದಲ್ಲಿರುವ ಬೇರೆ ಮರಗಳ ರೆಂಬೆಗಳನ್ನು ಕಡಿಯಲಾಗಿದೆ. ರಸ್ತೆಗೆ ಬಾಗಿಕೊಂಡಿರುವ ದೊಡ್ಡ ಮರಗಳನ್ನು ತೆರವುಗೊಳಿಸುವಂತೆ ಅಲ್ಲಿನ ನಿವಾಸಿಗಳು ಕೋರಿಕೊಂಡ ಸಂದರ್ಭ ಮರ ಕಡಿಯುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ‘ಆ ಮರಗಳನ್ನು ಕಡಿಯಲು ನಮಗೆ ಹೇಳಿಲ್ಲ’ ಎಂದು ಕನಿಷ್ಟ ರೆಂಬೆಗಳನ್ನೂ ಕೂಡ ಕತ್ತರಿಸದೇ ಹಾಗೇ ತೆರಳಿದ್ದಾರೆ. ಈ ನಿರ್ಲಕ್ಷ್ಯದಿಂದಾಗಿಯೇ ಇದೀಗ ಅನಾಹುತ ಸಂಭವಿಸಿದೆ ಎಂದು ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲಿ ಇನ್ನಷ್ಟು ಅಪಾಯಕಾರಿ ಸ್ಥಿತಿಯಲ್ಲಿ ಮರಗಳಿದ್ದು, ತೆರವುಗೊಳಿಸದಿದ್ದಲ್ಲಿ ಇನ್ನಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ. ಮಧ್ಯಾಹ್ನ ಮರ ಬಿದ್ದರೂ ಸಂಜೆಗತ್ತಲಾದರೂ ಅರಣ್ಯ ಇಲಾಖೆಯಾಗಲಿ, ವಿದ್ಯುತ್ ಇಲಾಖೆಯಾಗಲಿ ಮರ ಹಾಗೂ ವಿದ್ಯುತ್ ಕಂಬ- ತಂತಿಗಳನ್ನು ತೆರವುಗೊಳಿಸುವ ಗೋಜಿಗೇ ಹೋಗದಿರುವದು ಗೋಚರಿಸಿದೆ.