ಮಡಿಕೇರಿ, ಜು. 10: ಪ್ರಸಕ್ತ ಜಿಲ್ಲೆಯಲ್ಲಿ ದಕ್ಷಿಣ ಕೊಡಗಿನ ಬ್ರಹ್ಮಗಿರಿ ತಪ್ಪಲು ಸೇರಿದಂತೆ ಘಟ್ಟ ಪ್ರದೇಶಗಳಲ್ಲಿ ಮಾತ್ರ ನಿರಂತರವಾಗಿ ಹೆಚ್ಚು ಮಳೆಯಾಗುತ್ತಿರುವ ಬಗ್ಗೆ ಇದು ಮೋಡಬಿತ್ತನೆಯಿಂದ ಆಗುತ್ತಿರುವ ಮಳೆಯೇ ಎಂಬ ಸಂಶಯ ಉಂಟಾಗಿದೆ. ಈ ಕುರಿತು ಸರಕಾರ ಜಿಲ್ಲಾಡಳಿತ ಸ್ಪಷ್ಟನೆ ನೀಡುವಂತೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ ಜನತೆಯ ಪರವಾಗಿ ಮನವಿ ಮಾಡಿದ್ದಾರೆ.
ಈ ಕುರಿತು ‘ಶಕ್ತಿ’ಗೆ ಹೇಳಿಕೆ ನೀಡಿರುವ ಅವರು ಜಿಲ್ಲೆಯ ನಡುಭಾಗದಲ್ಲಿ ಹಾಗೂ ಉತ್ತರ ಕೊಡಗಿನಲ್ಲಿ ಮಳೆಯ ಪ್ರಮಾಣ ಕ್ಷೀಣಗೊಂಡಿದ್ದರೂ ದಕ್ಷಿಣ ಕೊಡಗಿನ ಗಡಿ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾತ್ರ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿಯುತ್ತಿದೆ. ಇದರೊಂದಿಗೆ ರಾತ್ರಿ ಹಾಗೂ ಮುಂಜಾನೆಯ ವೇಳೆಯಲ್ಲಿ ಆಗಸದಲ್ಲಿ ರಾಕೆಟ್ ಚಲಾಯಿಸಿದಂತೆ ಶಬ್ದವೂ ಕೇಳಿಬರುತ್ತಿದೆ. ನೆರೆಯ ಕೇರಳದ ಮಟ್ಟನೂರಿನಲ್ಲಿ ವಿಮಾನ ನಿಲ್ದಾಣವಾಗಿರುವದರಿಂದ ಆರಂಭದಲ್ಲಿ ಇದು ವಿಮಾನದ ಶಬ್ದ ಎಂದೆನಿಸಿದರೂ ಇದೀಗ ವಿಮಾನದ ಹಾರಾಟವಲ್ಲ ಎಂದು ಗಮನಕ್ಕೆ ಬರುತ್ತಿರುವದಾಗಿ ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ದಿನಂಪ್ರತಿ ದಿಢೀರನೆ ಭಾರೀ ಮಳೆಯಾಗುವದು ನಂತರ ವಿರಾಮ ಕಂಡುಬರುತ್ತಿದೆ. ಜಿಲ್ಲೆಯ ಇತರೆಡೆಗಳಲ್ಲಿ ಸ್ವಲ್ಪಮಟ್ಟಿಗೆ ಮಳೆ ಮಾತ್ರವಿದ್ದು, ಈ ರೀತಿಯ ವಾತಾವರಣ ಜಿಲ್ಲೆಯ ಈ ಪ್ರದೇಶಗಳಲ್ಲಿ ಮಾತ್ರ ಗೋಚರಿಸುತ್ತಿರುವದು ಜನತೆಯನ್ನು ಕತ್ತಲಲ್ಲಿಟ್ಟು ಮೋಡಬಿತ್ತನೆಯ ಮೂಲಕ ಕೃತಕ ಮಳೆ ಸುರಿಸಲಾಗುತ್ತಿದೆಯೇ ಎಂದು ಅನುಮಾನಪಡುವಂತಾಗಿರುವದಾಗಿ ಮೊಣ್ಣಪ್ಪ ಹೇಳಿದ್ದಾರೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ; ಇಲ್ಲಿಗೆ ಹೆಚ್ಚಿನ ಮಳೆಯಾದಲ್ಲಿ ಈ ನೀರು ಕೇರಳ ರಾಜ್ಯಕ್ಕೆ ಹರಿದುಹೋಗುತ್ತದೆಯೇ ವಿನಃ ಕರ್ನಾಟಕ ರಾಜ್ಯಕ್ಕೆ ಲಭಿಸದು ಎಂದು ಹೇಳಿರುವ ಅವರು, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿತ್ತು. ಈ ಗಡಿಭಾಗಗಳು ಕೇರಳ ರಾಜ್ಯದ ತಪ್ಪಲಿನಲ್ಲಿ ಬರುತ್ತಿರುವದರಿಂದ ಅಲ್ಲಿನ ರಾಜ್ಯದಿಂದಲೂ ಈ ಪ್ರಯತ್ನ ನಡೆಯುತ್ತಿದೆಯೇ ಎಂಬ ಸಂಶಯ ಮೂಡುವಂತಾಗಿದೆ. ಈ ಬಗ್ಗೆ ಕೊಡಗು ಜಿಲ್ಲಾಡಳಿತ, ಸರಕಾರ ಜನತೆಗೆ ನೈಜಾಂಶ ತಿಳಿಸುವಂತಾಗಬೇಕೆಂದು ಅವರು ಆಗ್ರಹಿಸಿದ್ದು, ಭಾರೀ ಮಳೆಗೆ ಈ ವಿಭಾಗದ ಬೆಳೆಗಾರರ ವಿವಿಧ ಫಸಲುಗಳು ನೆಲಕಚ್ಚುವ ಆತಂಕ ವ್ಯಕ್ತಪಡಿಸಿದ್ದಾರೆ.