ಒಡೆಯನಪುರ, ಜು. 10: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ.ಗೆ ಸೇರಿದ ದೊಡ್ಡಕುಂದ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಸೇರಿದ ಸ್ಮಶಾನದ ಜಾಗವನ್ನು ಗ್ರಾ.ಪಂ. ಹಾಲಿ ಉಪಾಧ್ಯಕ್ಷ ಅಹಮ್ಮದ್ (ಮೋಣು) ಎಂಬವರು 1 ವಾರದ ಹಿಂದೆ ಗ್ರಾಮಸ್ಥರ ಅರಿವಿಗೆ ಬಾರದೆ ಜಾಗಕ್ಕೆ ಬೇಲಿ ನಿರ್ಮಿಸಿ ಅತಿಕ್ರಮಿಸಿದ್ದರು. ಈ ಹಿನೆÀ್ನಲೆಯಲ್ಲಿ ಇಂದು ದೊಡ್ಡಕುಂದ, ರಾಮೇನಹಳ್ಳಿ ಮತ್ತು ಕಿರಿಕೊಡ್ಲಿ ಗ್ರಾಮಸ್ಥರು ಅತಿಕ್ರಮಿಸಿದ ಜಾಗವನ್ನು ತೆರವುಗೊಳಿಸಿದರು.

ದೊಡ್ಡಕುಂದ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಪರಿಶಿಷ್ಟ ಜಾತಿ ಸಮುದಾಯದವರು 2 ಎಕರೆ ಜಾಗವನ್ನು ಸ್ಮಶಾನ ಕಾರ್ಯಕ್ಕಾಗಿ ಮೀಸಲಿಟ್ಟಿದ್ದರು. ಇದೆ ಸ್ಮಶಾನಕ್ಕೆ ಸೇರಿದ ಜಾಗದಲ್ಲಿ ಪಕ್ಕದ ರಾಮೇನಹಳ್ಳಿ ಮತ್ತು ಕಿರಿಕೊಡ್ಲಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯ ದವರು ಅಂತ್ಯ ಸಂಸ್ಕಾರ ನಡೆಸುತ್ತಾರೆ. ಹಲವಾರು ದಶಕಗಳಿಂದ ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದ ಜಾಗವನ್ನು ವಾರದ ಹಿಂದೆ ಬ್ಯಾಡಗೊಟ್ಟ ಗ್ರಾ.ಪಂ. ಉಪಾಧ್ಯಕ್ಷ ಅಹಮದ್ ಎಂಬವರು ಬೇಲಿ ನಿರ್ಮಿಸಿಕೊಂಡು ಒತ್ತುವರಿ ಮಾಡಿಕೊಂಡಿದ್ದರು.

ವಿಷಯ ಗ್ರಾಮಸ್ಥರಿಗೆ ತಿಳಿದು ಈ ಕುರಿತು ಸೋಮವಾರಪೇಟೆ ತಹಶೀಲ್ದಾರರಿಗೆ ಅಹಮದ್‍ಗೆ ದೂರುನೀಡಿ ಜಾಗವನ್ನು ತೆರವುಗೊಳಿಸಿಕೊಡುವಂತೆ ಮನವಿ ಮಾಡಿದ್ದರು.ಅದರಂತೆ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರಿಗೆ ಸೇರಿದ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿದ್ದ ಅಹಮದ್‍ಗೆ ಛೀಮಾರಿ ಹಾಕಿ ಜಾಗವನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೂ ಆಹಮದ್ ಅತಿಕ್ರಮಿಸಿದ ಜಾಗವನ್ನು ತೆರವು ಗೊಳಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ದೊಡ್ಡಕುಂದ, ರಾಮೇನಹಳ್ಳಿ ಮತ್ತು ಕಿರಿಕೊಡ್ಲಿ ಗ್ರಾಮಸ್ಥರು ಜಾತಿ ಬೇಧ ಮರೆತು ಎಲ್ಲರೂ ಒಂದಾಗಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಿದರು.

ಕಾರ್ಯಾಚರಣೆಯಲ್ಲಿ ಉಭಯ ಗ್ರಾಮಗಳ ಪ್ರಮುಖರಾದ ಶಿವಣ್ಣ ಮಾಸ್ತರ್, ಜವರೇಗೌಡ, ಬಿ.ಕೆ.ವಸಂತ್, ಬಿ.ಕೆ.ಮಧು, ಬಿ.ಜೆ.ರಾಜು, ಜರ್ನಾಧನ್, ಜೆ.ಆರ್. ವೇಧಕುಮಾರ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

-ವಿ.ಸಿ.ಸುರೇಶ್ ಒಡೆಯನಪುರ