ಸೋಮವಾರಪೇಟೆ, ಜು. 11: ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಶೇಷಚೇತನರಿಗೆ ಪರಿಕರ ವಿತರಣೆ ಹಾಗೂ ಕಳೆದ ಸಾಲಿನಲ್ಲಿ ಮಳೆಯಿಂದ ನಷ್ಟ ಅನುಭವಿಸಿದ ಸಂತ್ರಸ್ತರಿಗೆ ಧನ ಸಹಾಯ ವಿತರಣೆ ನಡೆಯಿತು. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಡಾ. ಯೋಗೇಶ್ ಮಾತನಾಡಿದರು. ತಾಲೂಕಿನ 77 ಜನರಿಗೆ ಗಾಲಿ ಕುರ್ಚಿ, ಹಾಸಿಗೆ, ವಾಕಿಂಗ್ ಸ್ಟಿಕ್ ಸೇರಿದಂತೆ ಅವರಿಗೆ ಅವಶ್ಯಕತೆ ಇರುವ ಪರಿಕರಗಳನ್ನು ವಿತರಿಸಲಾಗುತ್ತಿದೆ. ಕಳೆದ ಮುಂಗಾರು ಮಳೆಯಲ್ಲಿ ನಷ್ಟಕ್ಕೊಳಗಾಗಿದ್ದ ಈ ಭಾಗದ ನಾಲ್ಕು ಜನರನ್ನು ಗುರುತಿಸಿ ಸಹಾಯಧನ ವಿತರಿಸಲಾಗುತ್ತಿದೆ ಎಂದರು. ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಸಮಿತಿ ಅಧ್ಯಕ್ಷ ಕೆ.ಎ. ಯಾಕೂಬ್, ತಾಲೂಕು ಯೋಜನಾಧಿಕಾರಿ ಪ್ರಕಾಶ್, ವಲಯ ಮೇಲ್ವಿಚಾರಕಿ ಪದ್ಮಾವತಿ ಉಪಸ್ಥಿತರಿದ್ದರು.