ಗೋಣಿಕೊಪ್ಪ ವರದಿ, ಜು. 10: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಜಿಲ್ಲಾ ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್. ಎ. ಮುರುಳಿಧರ್ ಅವರು ಸಹೋದರ ಗಣೇಶ್ ಜ್ಞಾಪಕಾರ್ಥ ಸ್ಥಾಪಿಸಿರುವ ಕ್ರೀಡಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ ಕೊಡಗು ಚಾಂಪಿಯನ್ಸ್ ಲೀಗ್ ನಾಲ್ಕನೇ ಆವೃತ್ತಿ ವರದಿ ಬರೆದ ಎ. ಎನ್. ವಾಸು, ಪತ್ರಕರ್ತ ಸಣ್ಣುವಂಡ ಚೆಂಗಪ್ಪ ಅವರು ತಮ್ಮ ತಂದೆ ಸಣ್ಣುವಂಡ ಮಾದಪ್ಪ, ತಾಯಿ ಜಾನಕ್ಕಿ ಹೆಸರಿನಲ್ಲಿ ಸ್ಥಾಪಿಸಿರುವ ಪರಿಸರ ವರದಿ ಪ್ರಶಸ್ತಿಯನ್ನು ಪ್ರಜಾಸತ್ಯ ಪತ್ರಿಕೆಯಲ್ಲಿ ಕೊಡಗಿನಲ್ಲಿ ರೆಸಾರ್ಟ್ ಉದ್ಯಮದಿಂದ ನದಿ ನೀರಿಗೆ ಕನ್ನ ವರದಿ ಮಾಡಿದ ಉಷಾ ಪ್ರೀತಂ ಪ್ರಶಸ್ತಿ ಸ್ವೀಕರಿಸಿದರು. ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ತಮ್ಮ ಮಾವಂದಿಯರಾದ ದೇಯಂಡ ಪೂಣಚ್ಚ ಹಾಗೂ ಉಮೇಶ್ ಅವರ ಜ್ಞಾಪಕಾರ್ಥ ಸ್ಥಾಪಿಸಿರುವ ಗ್ರಾಮೀಣ ವರದಿ ಪ್ರಶಸ್ತಿಯನ್ನು ಕೊಡಗು ಧ್ವನಿ ಪತ್ರಿಕೆಯಲ್ಲಿ ಪ್ರಕಟಗೊಂಡ ಬಿದಿರಿನ ಸೇತುವೆ ಮೇಲೆ ಬದುಕಿನ ಪಯಣ ವರದಿ ಮಾಡಿದ ಎಚ್. ಕೆ. ಜಗದೀಶ್ ಸ್ವೀಕರಿಸಿದರು.

ಈ ಸಂದರ್ಭ ಜಿಲ್ಲಾ ಪತ್ರಕರ್ತರ ಸಂಘದಿಂದ ಪ್ರಶಸ್ತಿ ಪಡೆದ ವಿಜಯವಾಣಿ ವರದಿಗಾರ ಸಣ್ಣುವಂಡ ಕಿಶೋರ್ ನಾಚಪ್ಪ, ಶಕ್ತಿ ವರದಿಗಾರ್ತಿ ಬಡ್‍ಕಡ ರಜಿತಾ ಕಾರ್ಯಪ್ಪ, ಕೊಡಗು ಧ್ವನಿ ಸಂಪಾದಕ ಎಚ್. ಕೆ. ಜಗದೀಶ್, ಕನ್ನಡಪ್ರಭ ವರದಿಗಾರ ಸುಬ್ರಮಣಿ, ಹೊಸದಿಗಂತ ವರದಿಗಾರ ಸತೀಶ್ ನಾರಾಯಣ್ ಇವರುಗಳನ್ನು ಸನ್ಮಾನಿಸಲಾಯಿತು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಸಂಘಟಿತರಾಗುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪ್ರಶಸ್ತಿ ಪಡೆಯುವದರಿಂದ ಸಮಾಜ ನಮ್ಮನ್ನು ಗುರುತಿಸಲು ಸಹಕಾರಿಯಾಗುತ್ತದೆ. ಸಮಾಜಕ್ಕೂ ಉತ್ತಮ ವರದಿ ನೀಡಿದಂತಾಗುತ್ತದೆ ಎಂದರು.

ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಎಸ್. ಎ. ಮುರುಳಿಧರ್ ಮಾತನಾಡಿ, ಹೆಚ್ಚು ಪ್ರಶಸ್ತಿಗಳನ್ನು ಸ್ಥಾಪಿಸುವ ಮೂಲಕ ಪತ್ರರ್ಕರನ್ನು ಪ್ರೋತ್ಸಾಹಿಸಲು ಸಹಕಾರಿಯಾಗುತ್ತಿದೆ ಎಂದರು.

ಈ ಸಂದರ್ಭ ತಾಲೂಕು ಅಧ್ಯಕ್ಷ ಸಣ್ಣುವಂಡ ಚೆಂಗಪ್ಪ, ಪ್ರ. ಕಾರ್ಯದರ್ಶಿ ರೆಜಿತ್‍ಕುಮಾರ್, ಕಾರ್ಯದರ್ಶಿ ಸಣ್ಣುವಂಡ ಕಿಶೋರ್ ನಾಚಪ್ಪ, ಉಪಾಧ್ಯಕ್ಷ ಸುಬ್ರಮಣಿ, ಖಜಾಂಜಿ ರಾಜೇಶ್, ನಿರ್ದೇಶರು ಗಳಾದ ವಿ.ವಿ. ಅರುಣ್‍ಕುಮಾರ್, ಎನ್. ಎನ್. ದಿನೇಶ್, ಮುಸ್ತಫಾ, ಐನಂಡ ಬೋಪಣ್ಣ ಇದ್ದರು.