ಕೂಡಿಗೆ, ಜು. 11: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಡೈರಿ ಸರ್ಕಲ್‍ನಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಪ್ರಯಾಣಿಕರ ತಂಗುದಾಣವನ್ನು ಹಗಲು ವೇಳೆಯಲ್ಲಿ ಸಾರ್ವಜನಿಕರ ಬದಲು ನಾಯಿಗಳೇ ಆಕ್ರಮಿಸಿಕೊಂಡು ದರ್ಬಾರು ನಡೆಸುತ್ತಿವೆ!

ಕೂಡಿಗೆಯ ಡೈರಿ ಸರ್ಕಲ್ ತಂಗುದಾಣದಲ್ಲಿ ದಿನಂಪ್ರತಿ ನೂರಾರು ಪ್ರಯಾಣಿಕರು ಬಸ್‍ಗಾಗಿ ಕಾದು ಕುಳಿತುಕೊಳ್ಳುತ್ತಾರೆ. ಕೂಡಿಗೆ ಸೈನಿಕ ಶಾಲೆ, ಕೃಷಿ ಇಲಾಖೆ, ಕ್ರೀಡಾಶಾಲೆ, ಕೂಡಿಗೆ ಡೈರಿಯ ನೌಕರರು, ಕೈಗಾರಿಕಾ ಘಟಕಗಳಿಗೆ ಹೋಗುವ ನೌಕರರು, ಕೂಡಿಗೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು, ಆಸ್ಪತ್ರೆಗೆ ಬರುವವರು ಪ್ರಯಾಣಿಕರ ತಂಗುದಾಣದೊಳಗೆ ಕೂರಲು ಹೋದರೆ ನಾಯಿಗಳೇ ತುಂಬಿ ಪ್ರಯಾಣಿಕರು ರಸ್ತೆಯಲ್ಲಿ ನಿಲ್ಲುವ ಪ್ರಸಂಗ ದಿನಂಪ್ರತಿ ನಡೆಯುತ್ತಿದೆ. ನಾಯಿಗಳನ್ನು ಓಡಿಸಲು ಹೋದರೆ ಕಚ್ಚಲು ಬರುತ್ತವೆ. ಪ್ರಯಾಣಿಕರಿಗೆ ನಾಯಿಗಳು ಕಚ್ಚಿದ ಘಟನೆಗಳೂ ನಡೆದಿವೆ. ಇದರತ್ತ ಸಂಬಂಧಪಟ್ಟ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು, ಸಾರ್ವಜನಿಕರು ಆಗ್ರಹಿಸಿದ್ದಾರೆ.