ವೀರಾಜಪೇಟೆ ಜು:11ಅಪ್ರಾಪ್ತೆಯನ್ನು ಬಲತ್ಕಾರ ಮಾಡಿದ ಆರೋಪದ ಮೇಲೆ ಅಪ್ರಾಪ್ತೆಯ ತಾಯಿ ನೀಡಿದ ದೂರಿನ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಫೋಕ್ಸೋ ಕಾಯ್ದೆಯಡಿ ಕಡಂಗ ಗ್ರಾಮದ ಸಲಾಂನನ್ನು ಬಂಧಿಸಿದ್ದಾರೆ. ಅಪ್ರಾಪ್ತೆಯ ಬಲತ್ಕಾರಕ್ಕೆ ಸಹಕರಿಸಿದ ಗೆಸ್ಟ್ ಹೌಸ್‍ನ ಮಾಲೀಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಸಲಾಂನ ಮೇಲೆ 354(ಎ), 342, ರೆಡ್‍ವಿತ್ 34 ಐಪಿಸಿ, 8 ಮತ್ತು12 ರ ವಿಧಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ವಿವರ: ಕೇರಳದ ಕಣ್ಣಾನೂರು ಜಿಲ್ಲೆಯ ದಂಪತಿ ಕಳೆದ ಮೂರು ವರ್ಷಗಳ ಹಿಂದೆ ಕಡಂಗದ ಸಲಾಂನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ರಿಜು ದಂಪತಿ ಇತ್ತೀಚಿಗೆ ಮನೆ ಖಾಲಿ ಮಾಡಿ ಕೇರಳದಲ್ಲಿ ನೆಲೆಸಿದ್ದರು. ಈ ನಡುವೆ ಸಲಾಂ ಅಪ್ರಾಪ್ತೆಯ ತಂದೆಗೆ ದೂರವಾಣಿ ಕರೆ ಮಾಡಿ ಕುಟುಂಬದ ಜಾತಿ ಪ್ರಮಾಣಪತ್ರ ಮಾಡಿಸಿಕೊಡುವದಾಗಿ ನಂಬಿಸಿದ್ದಾರೆ. 09.07.19 ರಂದು ವೀರಾಜಪೇಟೆಗೆ ತಾಯಿ, ಮಗಳು ಬಂದಿದ್ದಾರೆ. ಆರೋಪಿ ಸಲಾಂ ಇಬ್ಬರನ್ನು ಬೆಳಗ್ಗಿನಿಂದ ಅಂಚೆ ಕಚೇರಿ, ತಾಲೂಕು ಕಚೇರಿಗಳಿಗೆ ಅಲೆದಾಡಿಸಿದ್ದಾನೆ. ಸಂಜೆ 6 ಗಂಟೆಗೆ ಜಾತಿ ದೃಢೀಕರಣ ಪತ್ರ ಸಿಗುತ್ತದೆ, ಅಲ್ಲಿಯವರೆಗೆ ವಿಶ್ರಾಂತಿ ಪಡೆಯಲೆಂದು ಚೆಂಬೆಬೆಳ್ಳೂರು ಗ್ರಾಮದ ಜೀವನ್ ಎಂಬವರ ಗೆಸ್ಟ್ ಹೌಸ್‍ಗೆ ಕರೆದುಕೊಂಡು ಹೋಗಿದ್ದಾರೆ. ಗೆಸ್ಟ್ ಹೌಸ್‍ನಲ್ಲಿ ಕೋಣೆ 1ರಲ್ಲಿ ತಾಯಿಯನ್ನು ಕೂಡಿ ಹಾಕಿದ್ದಾರೆ. ಕೋಣೆ 2ರಲ್ಲಿ ಸಲಾಂ ಅಪ್ರಾಪ್ತೆಯನ್ನು ಬಲತ್ಕಾರಕ್ಕೆ ಯತ್ನಿಸಿದ್ದಾನೆ, ಅಪ್ರಾಪ್ತೆ ಕಿರುಚಿಕೊಂಡಾಗ ಪಕ್ಕದ ಕೋಣೆಯಲ್ಲಿದ್ದ ತಾಯಿ ಗಾಬರಿಗೊಂಡು ಮಗಳಿಗೆ ಹಿಂಸೆ ಕೊಡುತ್ತಿದ್ದೀಯಾ ಎಂದು ಸಲಾಂಗೆ ಗದರಿಸಿದಾಗ ಇಬ್ಬರನ್ನು ವಾಹನದಲ್ಲಿ ಕೂರಿಸಿಕೊಂಡು ಬಂದು ವೀರಾಜಪೇಟೆ ಗಡಿಯಾರ ಕಂಬದ ಬಳಿ ಬಿಟ್ಟು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.