ಮಡಿಕೇರಿ, ಜು. 11: ವೀರಾಜಪೇಟೆ ತಾಲೂಕಿನ ಎಲ್ಲಾ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ಗೋಣಿಕೊಪ್ಪಲಿನ ಸರ್ವದೈವತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ ಅವರು ಇಲಾಖೆಯ ನಿಯಮ, ಸರ್ಕಾರದ ಆದೇಶ ಹಾಗೂ ಮಕ್ಕಳ ಸುರಕ್ಷತೆ ಹಾಗೂ ಶೈಕ್ಷಣಿಕ ಪ್ರಗತಿಯ ಬಗ್ಗೆ ಮುಖ್ಯ ಶಿಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು.
ಶಿಕ್ಷಕರುಗಳಿಗೆ ಪುಸ್ತಕಗಳನ್ನು ಓದಿ ಜ್ಞಾನ ವಿಕಾಸ ಮಾಡಿಕೊಳ್ಳುವಂತೆ ತಿಳಿಹೇಳಿದರು. ವಿಷಯವಾರು ತರಬೇತಿಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪಡೆದುಕೊಳ್ಳವ ಬಗ್ಗೆ ಮಾಹಿತಿ ನೀಡಿದರು. ಕೆಲವು ಸಾಹಿತಿಗಳ ಪುಸ್ತಕಗಳನ್ನು ಓದುವದರಿಂದ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಾಂಶುಪಾಲೆ ಲಲಿತಾ ಮೊಣ್ಣಪ್ಪ, ಶಿಕ್ಷಣಾಧಿಕಾರಿ ಕಚೇರಿಯ ಇಸಿಓ ಅಯ್ಯಪ್ಪ, ಉತ್ತಪ್ಪ, ರಂಗಸ್ವಾಮಿ ಉಪಸ್ಥಿತರಿದ್ದರು. ಕೆಲವು ಮುಖ್ಯ ಶಿಕ್ಷಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. 2019-20ನೇ ಸಾಲಿನ ಕ್ರೀಡೆ, ಪ್ರತಿಭಾ ಕಾರಂಜಿ ಹಾಗೂ ವಿವಿಧ ಕ್ಲಬ್ ಚಟುವಟಿಕೆಯನ್ನು ನಡೆಸುವಂತೆ ಸಭೆಯಲ್ಲಿ ಸೂಚಿಸಲಾಯಿತು. ವಿದ್ಯಾರ್ಥಿನಿ ದೀಪ್ತಿ ಪ್ರಾರ್ಥಿಸಿ, ಪ್ರದೀಪ್ ಸ್ವಾಗತಿಸಿ, ರಂಗಸ್ವಾಮಿ ವಂದಿಸಿದರು.