ಸೋಮವಾರಪೇಟೆ, ಜು. 11: ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ತಾಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಇನ್ನು ಮುಂದೆ ಇಳಿದರೆ ಪೊಲೀಸ್ ಕೇಸ್ ದಾಖಲಾಗುತ್ತದೆ! ಜಲಪಾತದಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಂತಿಮವಾಗಿ ಇಂತಹದ್ದೊಂದು ಕ್ರಮಕ್ಕೆ ಇದೀಗ ಮುಂದಾಗಿದೆ.
ಜಲಪಾತದಲ್ಲಿ ಈವರೆಗೆ 14 ಮಂದಿ ಪ್ರಾಣ ಬಿಟ್ಟಿದ್ದು, ಇದರಲ್ಲಿ ಕಿರಿಯರಿಂದ ಹಿಡಿದು ಯುವಕ/ಯುವತಿಯರೇ ಅಧಿಕ. ನಯನ ಮನೋಹರವಾಗಿ ಕಂಗೊಳಿಸುವ ಮಲ್ಲಳ್ಳಿ ಜಲಪಾತ ಎಷ್ಟು ಸೌಂದರ್ಯದಿಂದ ಕೂಡಿದೆಯೋ ಅದಕ್ಕಿಂತ ಹೆಚ್ಚು ಅಪಾಯಕಾರಿ. ಜಲಪಾತದಲ್ಲಿ ಅರೆಕ್ಷಣ ಮೈಮರೆತರೆ ಸಾವು ಖಚಿತ. ಇಲ್ಲಿ ಆಗಾಗ್ಗೆ ನಡೆಯುತ್ತಿರುವ ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇದೀಗ ಕ್ರಮಕ್ಕೆ ಮುಂದಾಗಿದೆ.
ಇನ್ನು ಮುಂದೆ ನಿಯಮವನ್ನು ಮೀರಿ ಜಲಪಾತಕ್ಕೆ ಇಳಿದರೆ ಪೊಲೀಸ್ ಮೊಕದ್ದಮೆ ದಾಖಲಾಗು ವದು ಖಚಿತ. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಅದರಂತೆ ಜಲಪಾತದ ಮೇಲ್ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಈವರೆಗೆ ಜಲಪಾತವನ್ನು ಅತೀ ಹತ್ತಿರದಿಂದ ಕಣ್ತುಂಬಿಕೊಳ್ಳಲು ಜಲಪಾತದ ತಳಭಾಗದವರೆಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸುಮಾರು 100 ಅಡಿಗೂ ಎತ್ತರದಿಂದ ಧುಮ್ಮಿಕ್ಕಿ ಜಲಧಾರೆಯಾಗಿ ಹರಿಯುವ ಸ್ಥಳದವರೆಗೂ ಪ್ರವಾಸಿಗರು ತೆರಳುತ್ತಿದ್ದರು. ಈ ಸಂದರ್ಭ ನೀರಿಗೆ ಇಳಿದು ಅವಘಡಕ್ಕೆ ಒಳಗಾಗಿ ಹಲವಷ್ಟು ಮಂದಿ ಪ್ರಾಣ ತೆತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಇದೀಗ ಪ್ರವೇಶ ನಿರ್ಬಂಧಿಸಲಾಗಿದೆ.
ಜಲಪಾತದಲ್ಲಿ ನಡೆಯುತ್ತಿದ್ದ ಅವಘಡವನ್ನು ತಪ್ಪಿಸಲು ಪ್ರವಾಸೋದ್ಯಮ ಇಲಾಖೆ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗಿಲ್ಲ.
ಪ್ರವಾಸೋದ್ಯಮ ಇಲಾಖೆಯಿಂದ ಜಲಪಾತದ ತಳಭಾಗದವರೆಗೆ ಮೆಟ್ಟಿಲುಗಳ ನಿರ್ಮಾಣ, ಎರಡೂ ಬದಿಯಲ್ಲಿ ಪೈಪ್ ಅಳವಡಿಕೆ ಮಾಡಲಾಗಿದೆ. ಇದರೊಂದಿಗೆ ಜಲಪಾತಕ್ಕೆ ಇಳಿಯದಂತೆ ಮೆಶ್ ಅಳವಡಿಸಿದ್ದು, ಯಾರೂ ಸಹ ಒಳಗೆ ತೆರಳಬಾರದೆಂದು ಗೇಟ್ ನಿರ್ಮಿಸಿ ಬೀಗ ಜಡಿಯಲಾಗಿದೆ.
ಇದರೊಂದಿಗೆ ಪ್ರವಾಸೋದ್ಯಮ ಇಲಾಖೆ, ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ನಿಂದ ಎಚ್ಚರಿಕೆಯ ಫಲಕವನ್ನು ಹಾಕಲಾಗಿದೆ. ಈವರೆಗೆ ಜಲಪಾತದಲ್ಲಿ ಜೀವತೆತ್ತವರ ಸಂಖ್ಯೆಯನ್ನು ನಮೂದಿಸಿ ಜಲಪಾತಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಸಹ ಮತ್ತೆ ಮತ್ತೆ ಅನಾಹುತ ಮುಂದುವರೆಯುತ್ತಿದೆ.
ಕಳೆದ ಜೂನ್ ತಿಂಗಳ 28ರಂದು ಸಂಜೆ 6 ಗಂಟೆಗೆ ಆಗಮಿಸಿದ ಬೆಂಗಳೂರಿನ 8 ಮಂದಿ ಪ್ರವಾಸಿಗರು ಇಷ್ಟೆಲ್ಲಾ ಎಚ್ಚರಿಕೆಗಳನ್ನೂ ಮೀರಿ ಜಲಪಾತಕ್ಕೆ ಇಳಿದಿದ್ದಾರೆ. ಕಲ್ಲುಬಂಡೆಗಳ ಮೇಲೆ ತೆರಳುತ್ತಿದ್ದಂತೆ ಹೈಡಲ್ ಪವರ್ ಪ್ರಾಜೆಕ್ಟ್ನಿಂದ ಆಣೆಕಟ್ಟೆಯ ನೀರನ್ನು ಹೊರಬಿಡ ಲಾಗಿದ್ದು, ಒಮ್ಮೆಲೆ ಜಲಪಾತ ಭೋರ್ಗರೆದಿದೆ. ಈ ಸಂದರ್ಭ ಜೀವ ಉಳಿಸಿಕೊಳ್ಳಲು ಪ್ರವಾಸಿಗರು ಒದ್ದಾಡಿದ್ದು, ಸ್ಥಳೀಯರ ಸಹಕಾರ ದಿಂದ ಹೇಗೋ ಜೀವದೊಂದಿಗೆ ಪಾರಾಗಿದ್ದಾರೆ.
‘ಒಂದು ವೇಳೆ ಕಲ್ಲು ಬಂಡೆಯ ಮೇಲೆ ಕೂರದೇ ನೀರಿನಲ್ಲಿ ಇಳಿದಿದ್ದರೆ 8 ಮಂದಿಯ ಪ್ರಾಣ ಹಾರುತ್ತಿತ್ತು’ ಎಂದು ರಕ್ಷಣಾ ಕಾರ್ಯದಲ್ಲಿದ್ದ ಸ್ಥಳೀಯರು ಅಭಿಪ್ರಾಯಿಸಿದ್ದಾರೆ. ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಜಲಪಾತದಲ್ಲಿ ಪ್ರವಾಸಿ ಮಿತ್ರ ಸಿಬ್ಬಂದಿಗಳು ಕಾರ್ಯನಿರ್ವ ಹಿಸುತ್ತಿದ್ದು, ಈ ಸಮಯದಲ್ಲಿ ಜಲಪಾತಕ್ಕೆ ಇಳಿಯಲು ಯಾರಿಗೂ ಅವಕಾಶ ನೀಡುತ್ತಿರಲಿಲ್ಲ. ಇವರುಗಳ ಕರ್ತವ್ಯ ಸಮಯ ಮುಗಿದ ನಂತರ ಆಗಮಿಸುವ ಪ್ರವಾಸಿಗರು ಜಲಪಾತಕ್ಕೆ ಇಳಿದು ಇಂತಹ ಅನಾಹುತಕ್ಕೆ ಒಳಗಾಗುತ್ತಿದ್ದಾರೆ.
ಜಲಪಾತದ ತಳಭಾಗದಲ್ಲಿ ಗೇಟ್ ಅಳವಡಿಸಿ ಬೀಗ ಜಡಿದಿದ್ದರೂ ಸಹ ಅದರ ಮೇಲೆ ಹತ್ತಿ ಒಳಹೋಗುವ ಮೂಲಕ ಅಪಾಯವನ್ನು ಆಹ್ವಾನಿಸುತ್ತಿದ್ದರು. ಇದೀಗ ಇಂತಹ ಅನಾಹುತಗಳಿಗೆ ಪೂರ್ಣ ವಿರಾಮ ನೀಡಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ಜಲಪಾತದ ಮೇಲ್ಭಾಗದಲ್ಲಿ ಬೃಹತ್ ಕಲ್ಲುಬಂಡೆಗಳಿರುವ ಸ್ಥಳದಲ್ಲಿಯೇ ಬ್ಯಾರಿಕೇಡ್ಗಳನ್ನು ಅಳವಡಿಸಿದೆ. ಆ ಮೂಲಕ ಜಲಪಾತದ ತಳಭಾಗಕ್ಕೆ ತೆರಳದಂತೆ ತಡೆಯೊಡ್ಡಿದೆ.
ಇದನ್ನೂ ಮೀರಿ ಜಲಪಾತದ ತಳಭಾಗಕ್ಕೆ ತೆರಳಿದರೆ ಅಕ್ರಮ ಪ್ರವೇಶ ನಿಯಮದಡಿ ಅಂತಹ ಪ್ರವಾಸಿಗರು, ಸಾರ್ವಜನಿಕರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳೇ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
- ವಿಜಯ್ ಹಾನಗಲ್