ಮಡಿಕೇರಿ, ಜು. 11: ಜಿಲ್ಲೆಯಲ್ಲಿ ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಹಾನಿಯುಂಟಾಗಿ ಕಷ್ಟ - ನಷ್ಟಗಳು, ರೋಗ - ರುಜಿನಗಳು ಕಾಣಿಸಿಕೊಂಡಿದ್ದರೆ ಈ ಬಾರಿ ಮಳೆಯಲ್ಲಿ ಏರು - ಪೇರು ಉಂಟಾಗಿದೆ. ಮಳೆ ಹಾಗೂ ಬಿಸಿಲು ಕಾಣಿಸಿಕೊಳ್ಳುತ್ತಿರುವದರಿಂದ ಅಲ್ಲಲ್ಲಿ ನೀರು ಸಂಗ್ರಹಗೊಂಡು ಅಶುಚಿತ್ವದೊಂದಿಗೆ ಸೊಳ್ಳೆ, ಕ್ರಿಮಿ- ಕೀಟಗಳ ಉತ್ಪತ್ತಿಯೊಂದಿಗೆ ರೋಗದ ಭೀತಿ ಎದುರಾಗಿದೆ. ಈಗಾಗಲೇ ಹೆಚ್1ಎನ್1 ಹಾಗೂ ಡೆಂಗಿ ಜ್ವರ ಪತ್ತೆಯಾಗಿದ್ದು, ಚಿಕುಂಗುನ್ಯ ಕಾಯಿಲೆ ಹರಡುವ ಸಾಧ್ಯತೆ ಕೂಡ ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 11 ಹೆಚ್1ಎನ್1, 9 ಡೆಂಗಿ ಹಾಗೂ 4 ಚಿಕುಂಗುನ್ಯ ಪ್ರಕರಣಗಳು ಪತ್ತೆಯಾಗಿವೆ. ಹೆಚ್.1 ಎನ್.1 ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಈ ವರ್ಷದಲ್ಲಿ ತಾ.10ರವರೆಗೆ 35 ಶಂಕಿತ ಹೆಚ್.1 ಎನ್.1 ಇನ್ಫ್ಲುಯೆಂಜಾ ರೋಗ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 11 ಪ್ರಕರಣಗಳಿಗೆ ಹೆಚ್1 ಎನ್1 ರೋಗ ಇರುವದು ಪ್ರಯೋಗಾಲಯದ ವರದಿಯಿಂದ ದೃಡಪಟ್ಟಿದೆ.
ಹೆಚ್.1 ಎನ್.1 ಇನ್ಫ್ಲುಯೆಂಜಾ ರೋಗವು ವೈರಸ್ನಿಂದ ಬರುವ ಕಾಯಿಲೆ ಆಗಿರುತ್ತದೆ. ಹೆಚ್.1 ಎನ್.1 ಇನ್ಫ್ಲುಯೆಂಜಾ ರೋಗಕ್ಕೂ ಹಂದಿಗಳಿಗೂ ಯಾವದೇ ಸಂಬಂಧವಿಲ್ಲ. ಹಂದಿ ಸಾಕಾಣಿಕೆ ಮಾಡುವದರಿಂದ ಮತ್ತು ಮಾಂಸ ಸೇವನೆಯಿಂದ ರೋಗವು ಹರಡುವದಿಲ್ಲ. ಈ ರೋಗವು ಕೇವಲ ಮನುಷ್ಯರಿಂದ ಮನುಷ್ಯರಿಗೆ ಮಾತ್ರ ಹರಡುತ್ತದೆ. ಹೆಚ್.1 ಎನ್.1 ಇನ್ಫ್ಲುಯೆಂಜಾ ರೋಗ (ಮೊದಲ ಪುಟದಿಂದ) ಲಕ್ಷಣಗಳೆಂದರೆ, ತೀವ್ರ ಸ್ವರೂಪದ ಜ್ವರ, ಕೆಮ್ಮು ಮತ್ತು ಹಳದಿ ಕಫ, ನೆಗಡಿ ಮತ್ತು ಗಂಟಲು ಕೆರೆತ. ಅತೀ ಬೇದಿ ವಾಂತಿ. ತೀವ್ರ ತರಹವಾದ ರೋಗ ಲಕ್ಷಣಗಳು ಅತೀಯಾದ ಮೈ ಕೈ ನೋವು, ಉಸಿರಾಟ ತೊಂದರೆ ಇರುತ್ತದೆ.
ಸಾಮಾನ್ಯ ಫ್ಲ್ಲೂ ಹರಡುವ ರೀತಿಯಲ್ಲಿಯೇ ಇನ್ಪ್ಲೂಎಂಜಾ ಹೆಚ್1ಎನ್1 ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ವೈರಸ್ಗಳು ಹರಡುತ್ತವೆ. ವೈಯಕ್ತಿಕ ಸ್ವಚ್ಛತೆ ಇಲ್ಲದೇ, ಮೂಗು ಬಾಯಿ ಆಗಿಂದಾಗ್ಗೆ ಮುಟ್ಟುವದರಿಂದಲೂ ಸೋಂಕು ಹರಡಲಿದೆ.
ಈ ಲಕ್ಷಣಗಳು ಕಂಡುಬಂದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನವನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಸೋಂಕನ್ನು ದೃಢಪಡಿಸಲಾಗುತ್ತದೆ. ಪರೀಕ್ಷೆಯನ್ನು ಎಲ್ಲಾ ಶಂಕಿತ ಪ್ರಕರಣಗಳಿಗೆ ಮಾಡುವ ಅವಶ್ಯಕತೆ ಇರುವದಿಲ್ಲ. ಭಾರತ ಸರ್ಕಾರದ ಮಾರ್ಗದರ್ಶಿಯಂತೆ ಕೇವಲ ತೀವ್ರ ತರಹದ ಲಕ್ಷಣಗಳುಳ್ಳ ಪ್ರಕರಣಗಳಿಗೆ ಮಾತ್ರ ಪರೀಕ್ಷೆ ಮಾಡಬೇಕಾಗಿರುತ್ತದೆ.
ಹೆಚ್.1 ಎನ್.1 ಇನ್ಫ್ಲುಯೆಂಜಾ ಸೋಂಕಿಗೆ ಪರಿಣಾಮಕಾರಿಯಾದ ಔಷÀಧಿ ಲಭ್ಯವಿದ್ದು, ಜಿಲ್ಲೆಯಲ್ಲಿ ರೋಗ ಪ್ರಕರಣ ವರದಿಯಾದರೆ ಸೂಕ್ತ ಚಿಕಿತ್ಸೆ ನೀಡಲು ಟ್ಯಾಮಿಪ್ಲೂ ಔಷಧ ದಾಸ್ತಾನು ಇರುವದಾಗಿ ಇಲಾಖೆ ಮಾಹಿತಿ ನೀಡಿದೆ.
ಕ್ರಮಗಳೇನು...?
ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ನಿಂದ ಮೂಗನ್ನು ಮುಚ್ಚಿಕೊಳ್ಳಬೇಕು. ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು. ವ್ಯೆಯಕ್ತಿಕ ಸ್ವಚ್ಛತೆ ಪಾಲಿಸಿ, ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಬೇಕು. ಸೋಂಕು ಇದ್ದಲ್ಲಿ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುವದು ಸೂಕ್ತ. ಒತ್ತಡವನ್ನು ನಿಭಾಯಿಸಿ, ಪೌಷ್ಠಿಕ ಆಹಾರ ಸೇವಿಸಬೇಕು. ಚಿಕ್ಕ ಮಕ್ಕಳಿದ್ದಲ್ಲಿ ಅವರನ್ನು ಸೋಂಕಿಗೆ ಒಳಗಾಗದಂತೆ ಎಚ್ಚರವಹಿಸಬೇಕು. ಶಾಲಾ ಮಕ್ಕಳಲ್ಲಿ ಸೋಂಕಿದ್ದರೆ ಶಾಲೆಗೆ ಕಳುಹಿಸದೇ ಸೂಕ್ತ ಚಿಕಿತ್ಸೆ ಪಡೆದು ಮನೆಯಲ್ಲಿಯೇ ತೆಗೆದುಕೊಳ್ಳುವದು ಸೂಕ್ತ. ಜನನಿಬಿಡ ಪ್ರದೇಶದಿಂದ ದೂರವಿರಬೇಕು.
ಮಾಡಬಾರದ ಕ್ರಿಯೆಗಳು:
ಸೋಂಕಿತರ ಅತಿ ಸಮೀಪ ಹೋಗಬಾರದು. ಹಸ್ತಲಾಘವ, ಹಾಗೂ ಇತರ ರೂಪದಲ್ಲಿ ಶುಭ ಕೋರಬಾರದು. ವ್ಯೆದ್ಯರ ಸಲಹೆ ಇಲ್ಲದೇ ಔಷಧ ಸೇವನೆ ಮಾಡಬಾರದು. ಎಲ್ಲೆಂದರಲ್ಲಿ ಉಗುಳಬಾರದು. ಅನವಶ್ಯಕವಾಗಿ ಪ್ರಯಾಣಿಸಬಾರದು.
ಹೆಚ್.1 ಎನ್.1 ಇನ್ಫ್ಲುಯೆಂಜಾ ರೋಗ ಹೆಚ್ಚಿನ ಮಾಹಿತಿಗೆ ಆರೋಗ್ಯ ಇಲಾಖೆಯ ಸಹಾಯವಾಣಿ 104 ರ ಉಚಿತ ತುರ್ತು ಸಹಾಯವಾಣಿಯ ಸೌಲಭ್ಯ ಪಡೆಯಬಹುದಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಡೆಂಗಿ ಮತ್ತು ಚಿಕುಂಗುನ್ಯ
ಜಿಲ್ಲೆಯಲ್ಲಿ 01-01-2019 ರಿಂದ ತಾ. 10ರವರೆಗೆ 136 ಶಂಕಿತ ಡೆಂಗಿ ಜ್ವರ ರೋಗಿಗಳಲ್ಲಿ ಒಟ್ಟು 9 ಡೆಂಗಿ ಜ್ವರ ಪ್ರಕರಣಗಳು ರಕ್ತದ ಮಾದರಿ ಪರೀಕ್ಷೆಯಿಂದ ದೃಡಫಟ್ಟಿರುತ್ತವೆ. ಇವುಗಳಲ್ಲಿ ಎಲ್ಲಾ 9 ಡೆಂಗಿ ಜ್ವರ ಪ್ರಕರಣಗಳಿಗೆ ಸೂಕ್ತ ಬೆಂಬಲಾತ್ಮಕ ಚಿಕಿತ್ಸೆ ನೀಡಲಾಗಿದೆ ಮತ್ತು ಗುಣಮುಖವಾಗಿರುತ್ತಾರೆ. ಡೆಂಗಿ ಜ್ವರ ದಿಂದ ಯಾವದೇ ಸಾವು ಸಂಭವಿಸಿರುವದಿಲ್ಲ ಎಂದು ಇಲಾಖೆ ತಿಳಿಸಿದೆ.
ಅದೇ ರೀತಿ 01-01-2019 ರಿಂದ ತಾ. 10ರವರೆಗೆ ಜಿಲ್ಲೆಯಲ್ಲಿ 125 ಶಂಕಿತ ರೋಗಿಗಳಲ್ಲಿ ಒಟ್ಟು 4 ಚಿಕುಂಗುನ್ಯ ಪ್ರಕರಣಗಳು ರಕ್ತದ ಮಾದರಿ ಪರೀಕ್ಷೆಯಿಂದ ದೃಡಫಟ್ಟಿರುತ್ತವೆ. 04 ಚಿಕುಂಗುನ್ಯ ಜ್ವರ ಪ್ರಕರಣಗಳಿಗೆ ಸೂಕ್ತ ಬೆಂಬಲಾತ್ಮಕ ಚಿಕಿತ್ಸೆ ನೀಡಲಾಗಿದೆ ಮತ್ತು ಗುಣಮುಖವಾಗಿರುತ್ತಾರೆ ಎಂದು ಮಾಹಿತಿ ನೀಡಿದೆ.
ಡೆಂಗಿ ಮತ್ತು ಚಿಕುಂಗುನ್ಯ ರೋಗಗಳು ವೈರಾಣುವಿನಿಂದ ಬರುವ ಖಾಯಿಲೆಗಳು. ಇವು ಈಡಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಡೆಂಗೀ ಜ್ವರವು ಒಂದು ಮಾರಕವಾದ ಖಾಯಿಲೆ, ಆದರೆ ಚಿಕುಂಗುನ್ಯ ಮಾರಣಾಂತಿಕವಲ್ಲ. ಡೆಂಗಿ ರೋಗದಲ್ಲಿ ಮೂರು ಸ್ವರೂಪಗಳಿದ್ದು, ಡೆಂಗಿ ಜ್ವರ (ಸಾಮಾನ್ಯ), ಡೆಂಗಿ ರಕ್ತಸ್ರಾವ ಜ್ವರ (ಡಿ.ಹೆಚ್.ಎಫ್), ಡೆಂಗಿ ಆಘಾತಕರ ಸ್ವರೂಪ (ಡಿ.ಎಸ್.ಎಸ್)ಗಳಾಗಿವೆ.
ರೋಗ ಲಕ್ಷಣಗಳು:
ಡೆಂಗಿ ಜ್ವರದಲ್ಲಿ ತೀವ್ರ ಜ್ವರ, ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು.
ಡೆಂಗಿ ರಕ್ತಸ್ರಾವ ಜ್ವರದಲ್ಲಿ ಈ ಎಲ್ಲಾ ಲಕ್ಷಣಗಳ ಜೊತೆಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ರಕ್ತ ಸ್ರಾವದ ಗುರುತುಗಳು, ಕಪ್ಪು ಮಲ ವಿಸರ್ಜನೆ, ವಿಪರೀತ ಬಾಯಾರಿಕೆ, ತಣ್ಣನೆಯ ಬಿಳುಚಿಕೊಂಡ ಚರ್ಮ, ಚಡಪಡಿಸುವಿಕೆ ಅಥವಾ ಜ್ಞಾನ ತಪ್ಪುವದು. ಜ್ವರ ಬಂದ 3-5 ದಿನಗಳಲ್ಲಿ ಮೂಗು ಮತ್ತು ವಸಡಿನಲ್ಲಿ ರಕ್ತ ಸ್ರಾವದ ಚಿನ್ಹೆಗಳು ಕಂಡು ಬರುತ್ತದೆ. 5-6 ದಿನಗಳ ನಂತರವೂ ಜ್ವರ ಮುಂದುವರೆದಲ್ಲಿ ಮಧ್ಯದಲ್ಲಿ ಸ್ವಲ್ಪ ಕಡಿಮೆಯಾಗಿ ಮತ್ತೆ ಹೆಚ್ಚಾಗುತ್ತದೆ.
ಚಿಕುಂಗುನ್ಯ ರೋಗದಲ್ಲಿ ಇದ್ದಕ್ಕಿದ್ದಂತೆ ಜ್ವರ, ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತ ಉಂಟಾಗಲಿದೆ ಎಂದು ಇಲಾಖೆ ತಿಳಿಸಿದೆ.
ಚಿಕಿತ್ಸೆ:
ಡೆಂಗಿ ಮತ್ತು ಚಿಕುಂಗುನ್ಯಾ ರೋಗಗಳಿಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವದಿಲ್ಲ. ರೋಗಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಿದಲ್ಲಿ ಡೆಂಗಿ ರೋಗದ ಲಕ್ಷಣಗಳನ್ನು ಪರಿಹರಿಸಿ ಮುಂದಾಗಬಹುದಾದ ತೊಂದರೆ ಮತ್ತು ಸಾವನ್ನು ತಪ್ಪಿಸಬಹುದು. ಡೆಂಗಿ ಜ್ವರದಲ್ಲಿ ಆಸ್ಪಿರಿನ್ ಮತ್ತು ಬ್ರೂಫಿನ್ ಮುಂತಾದ ಔಷಧಿಗಳನ್ನು ಕೊಡಬಾರದು. ಇವು ರಕ್ತಸ್ರಾವ ಮತ್ತು ಹೊಟ್ಟೆ ನೋವನ್ನು ಇನ್ನಷ್ಟು ತೀವ್ರಗೊಳಿಸುತ್ತವೆ. ವೈದ್ಯರ ಸಲಹೆ ಮೇರೆಗೆ “ಪ್ಯಾರಸಿಟಮಾಲ್” ಕೊಡಬಹುದು. ಡೆಂಗಿ ರಕ್ತಸ್ರಾವ ಜ್ವರದ ಲಕ್ಷಣಗಳು ಒಂದಕ್ಕಿಂತ ಹೆಚ್ಚು ಕಂಡು ಬಂದಲ್ಲಿ ರೋಗಿಯನ್ನು ತುರ್ತಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಬೇಕು ಎಂದು ಮಾಹಿತಿ ನೀಡಿದೆ.
ನಿಯಂತ್ರಣ ಕ್ರಮಗಳು:
ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ನೀಡಿ ಏಡೀಸ್ ಲಾರ್ವಾ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಏಡೀಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸಿ ಸಾರ್ವಜನಿಕರಲ್ಲಿ ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಗ್ರಾಮಾಂತರ ಮತ್ತು ನಗರ/ಪಟ್ಟಣ ಪ್ರದೇಶಗಳಲ್ಲಿ ಪ್ರಮುಖ ಸ್ಥಳಗಳ ಪರಿಸರದಲ್ಲಿ ಬಿಸಾಡಿದ ಮಳೆನೀರು ಸಂಗ್ರಹವಾಗುವಂತಹ ಘನ ತ್ಯಾಜ್ಯ ವಸ್ತುಗಳಾದ ಪ್ಲಾಸ್ಟಿಕ್ ವಸ್ತುಗಳು, ಎಳನೀರಿನ ಚಿಪ್ಪುಗಳು, ಗಾಜಿನ ವಸ್ತುಗಳು, ಹಳೆಯ ಟೈರುಗಳು ಇತ್ಯಾದಿಗಳನ್ನು ವಾರಕ್ಕೊಮ್ಮೆ ವಿಲೇವಾರಿ ಮಾಡಿ, ಸೊಳ್ಳೆಗಳು ಉತ್ಪತ್ತಿಯಾಗದಂತೆ ಆರೋಗ್ಯ ಶಿಕ್ಷಣ ನೀಡಿ ಅಗತ್ಯ ಕ್ರಮವಹಿಸಲು ಮತ್ತು ಎಲ್ಲಾ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಮನ್ವಯದೊಂದಿಗೆ ಅಗತ್ಯ ಕ್ರಮವಹಿಸಲು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚಿಸಿ ಕ್ರಮವಹಿಸಲಾಗುತ್ತಿದೆ.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಈಗಾಗಲೇ ಡೆಂಗಿ ಜ್ವರ ಪ್ರಕರಣಗಳು ವರದಿಯಾಗಿರುವದರಿಂದ ಇವುಗಳ ಅಗತ್ಯ ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಎಲ್ಲಾ ಪ್ರಾಥಮಿಕ / ಸಮುದಾಯ ಆರೋಗ್ಯ ಕೇಂದ್ರಗಳಿಗೆ, ಜಿಲ್ಲಾ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿ ಕ್ರಮವಹಿಸಲು ಸೂಚಿಸಲಾಗಿದೆ.
ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಡೆಂಗಿ ಜ್ವರದ ಅಗತ್ಯ ಬೆಂಬಲಾತ್ಮಕ ಚಿಕಿತ್ಸೆಯ ಔಷಧಗಳನ್ನು ದಾಸ್ತಾನಿರಿಸಿಕೊಳ್ಳಲಾಗಿದೆ. ತುರ್ತು ಸಂಧರ್ಭಗಳಲ್ಲಿ ರೋಗಿಗಳ ಹೆಚ್ಚಿನ ಉನ್ನತ ಚಿಕಿತ್ಸೆಗೆ ಅನುಕೂಲವಾಗುವಂತೆ ರೆಪರಲ್ ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
ಮಾಸಿಕ ತಾಲೂಕು ಮಟ್ಟದ ಪ್ರಗತಿ ಪರಿಶಿಲನಾ ಸಭೆಗಳನ್ನು ನಡೆಸುವದರ ಜೊತೆಗೆ ಜಿಲ್ಲೆಯ ಎಲ್ಲಾ ತಾಲೂಕು ಹಿರಿಯ ಆರೋಗ್ಯ ಸಹಾಯಕರುಗಳು, ಹಿರಿಯ ಪುರುಷ ಆರೋಗ್ಯ ಸಹಾಯಕರುಗಳು, ಕಿರಿಯ ಪುರುಷ ಆರೋಗ್ಯ ಸಹಾಯಕರುಗಳ ವಿಶೇಷ ಸಭೆಯನ್ನು ಮುಂಗಾರು ಪ್ರಾರಂಭದ ಅವದಿಯಿಂದಲೇ ಸಭೆ ಕರೆದು ಜಿಲ್ಲೆಯಲ್ಲಿ ಡೆಂಗಿ ಜ್ವರ ಮತ್ತು ಇನ್ನಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿ, ರೋಗ ಪ್ರಕರಣಗಳು ಉಲ್ಭಣಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳ ಸಮನ್ವಯದೊಂದಿಗೆ ನಿರ್ವಹಿಸಲು ಸೂಚಿಸಿ ಕ್ರಮವಹಿಸಲಾಗಿದೆ.
ಡೆಂಗಿಜ್ವರ ಮತ್ತು ಚಿಕುಂಗುನ್ಯ ರೋಗ ಪ್ರಕರಣಗಳನ್ನು ಜಿಲ್ಲೆಯ ಕೇಂದ್ರಸ್ಥಾನದಲ್ಲಿಯೇ ಇಐISಂ ಪರೀಕ್ಷೆಯನ್ನು ಮಾಡುವ ವ್ಯವಸ್ಥೆಯನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಸೂಚನೆಯಂತೆ ಪ್ರಯೋಗಾಲಯ ಪರೀಕ್ಷೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. -ಸಂತೋಷ್