ಗೋಣಿಕೊಪ್ಪ ವರದಿ, ಜು. 11: ಸಂಸಾರವನ್ನು ಮುನ್ನಡೆಸಲು ಮಹಿಳೆಗೆ ಲೋಕ ಜ್ಞಾನ ಅಗತ್ಯ ಎಂದು ವಕೀಲೆ ಸಿ.ಕೆ. ರಶೀದಾ ಹೇಳಿದರು.
ತಿತಿಮತಿ ಗ್ರಾಮದ ದೇವಮಚ್ಚಿ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಆರ್ಥಿಕ ಸ್ವಾವಲಂಬನೆಗೆ ಸಾಮಾಜಿಕ ಸಹಭಾಗಿತ್ವ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆ ಸ್ವಾವಲಂಭಿಯಾಗಲು ಪ್ರತೀ ಹೆಣ್ಣಿಗೆ ಶಿಕ್ಷಣದ ಅಗತ್ಯ ಹೆಚ್ಚಿದೆ. ಆತ್ಮರಕ್ಷಣೆಯ ವಿಚಾರದಲ್ಲಿ ಹೆಚ್ಚು ಜಾಗೃತಿಯಾಗಬೇಕಿದೆ. ಸಂಸಾರವನ್ನು ಸರಿದೂಗಿಸಿಕೊಂಡು ಸಾಗಲು ಲೋಕ ಜ್ಞಾನ ಕೂಡ ಅಗತ್ಯವಿದೆ. ಸಾಮಾಜಿಕವಾಗಿ ತೊಡಗಿಸಿಕೊಂಡಾಗ ಹೆಚ್ಚು ಜ್ಞಾನ ವಿಕಸನವಾಗಲಿದೆ ಎಂದರು.
ಕಾರ್ಯಕ್ರಮವನ್ನು ವೀರಾಜಪೇಟೆ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸದಾಶಿವ ಉದ್ಘಾಟಿಸಿ ಮಾತನಾಡಿ, ಮತ್ತೊಬ್ಬರನ್ನು ಪ್ರೋತ್ಸಾಹಿಸುವ ಗುಣ ಸಮಾಜಕ್ಕೆ ಬೇಕಿದೆ. ಈ ರೀತಿ ಸೇವೆ ನೀಡಬೇಕು ಎಂದರು.
ಈ ಸಂದರ್ಭ ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷೆ ಮಂಜುಳಾ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಜಯಂತಿ, ಸೇವಾ ಪ್ರತಿನಿಧಿಗಳಾದ ಸರಸ್ವತಿ, ನೇತ್ರಾವತಿ, ಮಿಲನ ಇದ್ದರು.