ಕರಿಕೆ, ಜು. 11: ಮಾಂದಲ್ಪಟ್ಟಿ ಕೊಡಗಿನ ರಮಣೀಯ ಪ್ರಕೃತಿ ಸೌಂದರ್ಯದ ನಿತ್ಯ ಜನಮನ ಸೆಳೆಯುವ ಅತಿ ಸುಂದರ ಪ್ರವಾಸಿ ಗಿರಿಧಾಮ. ಇಲ್ಲಿಗೆ ಪ್ರತಿ ನಿತ್ಯ ದೇಶ ವಿದೇಶಗಳಿಂದ ಪ್ರವಾಸಿಗರ ದಂಡು ಹರಿದು ಬರುತ್ತದೆ. ಆದರೆ ಈ ಗಿರಿಧಾಮ ಪ್ರವಾಸಿಗರ ಮೋಜು ಮಸ್ತಿಗಳಿಗೆ ಆಶ್ರಯವಾಗಿರುವದು ದುರಂತ.
ಮಾಂದಲ್ಪಟ್ಟಿ ಗಿರಿಧಾಮವು ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಹಚ್ಚಿನಾಡು ಗ್ರಾಮದ ಸೆಕ್ಷನ್ 4 ಮೀಸಲು ಅರಣ್ಯ ಪ್ರದೇಶ ಹಾಗೂ ಪುಷ್ಪಗಿರಿ ವನ್ಯಧಾಮದ ವ್ಯಾಪ್ತಿಗೊಳಪಡುವ ಅತಿ ಸುಂದರ ಗಿರಿ ಶಿಖರಗಳ ಶೋಲಾ ಅರಣ್ಯದ ಹುಲ್ಲುಗಾವಲು ಪ್ರದೇಶವನ್ನು ಹೊಂದಿರುವ ಪ್ರಕೃತಿ ಸೌಂದರ್ಯದ ಪ್ರದೇಶ. ಗಾಳಿಬೀಡು ಗ್ರಾಮ ಪಂಚಾಯಿತಿಯ ಪಾರ್ಕಿಂಗ್ ಗೇಟಿನಿಂದ ಪುಷ್ಪಗಿರಿ ವನ್ಯಧಾಮದ ಪ್ರವೇಶ ದ್ವಾರದವರೆಗೆ ಅಂದಾಜು 3 ಕಿ.ಮೀ. ಪ್ರದೇಶವು ಸೆಕ್ಷನ್ 4 ಮೀಸಲು ಅರಣ್ಯವಾಗಿದ್ದು, ಈ ಪ್ರದೇಶದಲ್ಲಿ ಕಡಿದಾದ ಇಳಿಜಾರು ಬೆಟ್ಟ ಗುಡ್ಡಗಳಲ್ಲಿ ಎಲ್ಲೆಂದರಲ್ಲಿ ಪ್ರವಾಸಿಗರು ವಾಹನ ಚಾಲನೆ ಮಾಡಿ ಸಾಹಸ ಕ್ರಿಯಾಚಟುವಟಿಗಳನ್ನು ಮಾಡುತ್ತಿದ್ದು ಇದರಿಂದ ಹುಲ್ಲುಗಾವಲಿನ ಮಣ್ಣುಗಳು ಸವಕಳಿಯಾಗಿ ಕೊರಕಲು ಉಂಟಾಗಿದೆ.
ಅಲ್ಲಲ್ಲಿ ಪುಂಡುಪೋಕರಿ ಹುಡುಗರ ದಂಡುಗಳು ಮದ್ಯಪಾನ ಮಾಡಿ ತ್ಯಾಜ್ಯಗಳನ್ನು ಅರಣ್ಯದೊಳಗೆ ಬಿಟ್ಟು ಹೋಗುತ್ತಿದ್ದಾರೆ. ಇದು ಸ್ವಚ್ಛ ಭಾರತದ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಇಲ್ಲಿ ನಡೆಯುವ ಈ ಮೇಲಿನ ಚಟುವಟಿಕೆಯ ಬಗ್ಗೆ ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಲವಾರು ಬಾರಿ ಮಾಹಿತಿ ನೀಡಿದ್ದರೂ ಆ ಜಾಗ ಮಡಿಕೇರಿ ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಜಾಗ ನಾವು ಏನು ಮಾಡಲಾಗುವದಿಲ್ಲಾ ನೀವು ಮಡಿಕೇರಿಗೆ ಹೋಗಿ ದೂರು ನೀಡಿ ಎಂದು ಉತ್ತರ ನೀಡುತ್ತಾರೆ. ಇದರಿಂದ ಸ್ವಚ್ಛ ಸುಂದರ ಪರಿಸರದ ಸವಿಯನ್ನು ಸವಿಯಲು ಬಂದ ಪ್ರಕೃತಿ ಪ್ರಿಯರಿಗೆ ನಿರಾಸೆ ಮೂಡಿದೆ. ಇತ್ತ ವನ್ಯಜೀವಿ ವಿಭಾಗವು ನನ್ನ ಕಾರ್ಯವ್ಯಾಪ್ತಿ ಜಾಗವಲ್ಲ ಎಂದು ಕಣ್ಣು ಮುಚ್ಚಿ ಕುಳಿತರೆ ಇತ್ತಾ ಸಂಬಂಧಿಸಿದ ಮಡಿಕೇರಿ ವಿಭಾಗದ ಸಿಬ್ಬಂದಿ ಮರ ವ್ಯಾಪಾರಿಗಳ ಹಿಂದೆ ಸುತ್ತುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕುತ್ತಾರೆ. ಗ್ರಾಮ ಪಂಚಾಯಿತಿಯು ಸ್ವಚ್ಛತೆ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ.
ಅರಣ್ಯ ಇಲಾಖೆ ಪೊಲೀಸ್ ಇಲಾಖೆ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಇಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯ ನಿವಾಸಿಗಳು ಹಾಗೂ ಪ್ರಕೃತಿ ಪ್ರಿಯರು ಒತ್ತಾಯಿಸಿದ್ದಾರೆ.