ಸೋಮವಾರಪೇಟೆ, ಜು. 11: ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಭೂಕುಸಿತದಿಂದ ಕಣ್ಮರೆಯಾಗಿದ್ದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಕೆಲ ಭಾಗಗಳು ಇದೀಗ ಯಥಾಸ್ಥಿತಿಗೆ ತಲುಪಿದ್ದು, ಊಹೆಗೂ ಮೀರಿ ಪುನರ್‍ನಿರ್ಮಾಣಗೊಂಡಿದೆ.

ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡುವ ರಾಜ್ಯ ಹೆದ್ದಾರಿಯಲ್ಲಿ ಸಮರೋಪಾದಿ ಕಾಮಗಾರಿಗಳನ್ನು ಕೈಗೊಂಡ ಪರಿಣಾಮ ಕೇವಲ ನಾಲ್ಕೈದು ತಿಂಗಳಲ್ಲೇ ವಾಹನಗಳ ಸಂಚಾರಕ್ಕೆ ಅನುವು ಕಲ್ಪಿಸಲಾಗಿದ್ದರೆ, ಒಂದು ವರ್ಷದೊಳಗೆ ರಸ್ತೆಯನ್ನು ಸಂಪೂರ್ಣವಾಗಿ ಪುನರ್ ನಿರ್ಮಾಣ ಮಾಡುವ ಮೂಲಕ ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು, ಜಿಲ್ಲಾಡಳಿತ ಬದ್ಧತೆ ಪ್ರದರ್ಶಿಸಿದೆ.

ಕಳೆದ ಆಗಸ್ಟ್‍ನಲ್ಲಿ ಭಾರೀ ಭೂಕುಸಿತಕ್ಕೆ ಒಳಗಾಗಿ ಕಣ್ಮರೆಯಾಗಿದ್ದ ಹಟ್ಟಿಹೊಳೆ ಮುಂಭಾಗದ ರಸ್ತೆ, ಸಿಂಕೋನ ಎಸ್ಟೇಟ್ ಬಳಿಯ ರಸ್ತೆ ಮತ್ತು ಹಾಲೇರಿ ಬಳಿಯ ರಾಜ್ಯ ಹೆದ್ದಾರಿಗಳು ಇದೀಗ ಸಂಚಾರಕ್ಕೆ ಯೋಗ್ಯವಾಗಿದ್ದು, ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಇನ್ನೇನು ಹಟ್ಟಿಹೊಳೆ ಮೂಲಕ ಮಡಿಕೇರಿ ಸಂಪರ್ಕ ಅಸಾಧ್ಯ ಎಂಬಷ್ಟರ ಮಟ್ಟಿಗೆ ಭಯಾನಕ ಸನ್ನಿವೇಶ ನಿರ್ಮಾಣವಾಗಿದ್ದ ಪ್ರದೇಶಗಳಲ್ಲಿ ಇಂದು ಡಾಂಬರು ರಸ್ತೆ ನಿರ್ಮಾಣಗೊಂಡಿವೆ.

ಭೂ ಕುಸಿತಗೊಂಡಿದ್ದ ಸ್ಥಳಗಳಲ್ಲಿ ನೂತನವಾಗಿ ಮಣ್ಣು ತುಂಬಿಸಿ, ಡಾಂಬರು ಹಾಕಲಾಗಿದೆ. ಇದೀಗ ಬೀಳುತ್ತಿರುವ ಮಳೆಗೆ ಕೆಲ ಭಾಗದಲ್ಲಿ ರಸ್ತೆ ಜಗ್ಗುತ್ತಿದ್ದರೂ ಸಂಚಾರಕ್ಕೆ ಸದ್ಯಕ್ಕೆ ಸಮಸ್ಯೆಯಾಗಿಲ್ಲ.

ಮಾದಾಪುರ ಪಟ್ಟಣದ ಬಳಿ ಗುಡ್ಡದ ಮೇಲಿದ್ದ ಅಯ್ಯಪ್ಪ ದೇವಾಲಯ ಭೂಕುಸಿತಕ್ಕೆ ಒಳಗಾಗಿ ರಾಜ್ಯಹೆದ್ದಾರಿ ಸಂಪೂರ್ಣ ಮುಚ್ಚಲ್ಪಟ್ಟಿದ್ದನ್ನು ಕೆಲವೇ ದಿನಗಳಲ್ಲಿ ತೆರವುಗೊಳಿಸಿ, ಅಲ್ಲಿ ನೂತನವಾಗಿ ರಸ್ತೆಯನ್ನು ನಿರ್ಮಿಸಲಾಗಿದೆ.

ಇನ್ನು ಹಟ್ಟಿಹೊಳೆಯಿಂದ 500 ಮೀಟರ್ ಹಿಂದಕ್ಕೆ ಎರಡು ಕಡೆಗಳಲ್ಲಿ ಭೂಕುಸಿತಗೊಂಡು ರಸ್ತೆ ಹೊಳೆ ಪಾಲಾಗಿತ್ತು. ಈ ಸ್ಥಳದಲ್ಲಿ ನೂರಾರು ಲೋಡ್ ಎಂ.ಸ್ಯಾಂಡ್ ಬಳಸಿ, ಸ್ಯಾಂಡ್ ಬ್ಯಾಗ್‍ಗಳ ಮೂಲಕ ತಡೆಗೋಡೆ ನಿರ್ಮಿಸಿ, ರಸ್ತೆಗೆ ಡಾಂಬರು ಹಾಕಲಾಗಿದೆ.

ಹಟ್ಟಿಹೊಳೆಯಿಂದ 200 ಮೀಟರ್ ಮುಂದಕ್ಕೆ ಭಾರೀ ಪ್ರಮಾಣದಲ್ಲಿ ಭೂಕುಸಿತಗೊಂಡು ಹತ್ತಾರು ಏಕರೆ ತೋಟ, ಮನೆಗಳು ಕೊಚ್ಚಿಕೊಂಡು ಹೋಗಿದ್ದ ಪ್ರದೇಶದಲ್ಲಿ ಈಗ ನೂತನ ಡಾಂಬರು ರಸ್ತೆ ಆಗಿದೆ. ಸುಮಾರು 250 ಮೀಟರ್‍ನಷ್ಟು ಉದ್ದದ ರಸ್ತೆಯನ್ನು ನಿರ್ಮಿಸಲಾಗಿದ್ದು, ವಾಹನ ಸಂಚಾರ ಸುಗಮಗೊಂಡಿದೆ.

ಈ ಪ್ರದೇಶದಲ್ಲಿ ನೂತನ ರಸ್ತೆ ನಿರ್ಮಾಣ ಅಸಾಧ್ಯ ಎಂದೇ ಎಲ್ಲರೂ ಭಾವಿಸಿದ್ದರು. ಅಷ್ಟರಮಟ್ಟಿಗೆ ಭೂ ಕುಸಿತ ಭಯಾನಕವಾಗಿತ್ತು. ಇದೀಗ ಅಂತಹ ಸನ್ನಿವೇಶ ಮರೆಯಾಗಿ ಸುಸ್ಥಿತಿಯ ರಸ್ತೆ ನಿರ್ಮಾಣವಾಗಿದೆ.

ಇದೇ ರೀತಿ ಸಿಂಕೋನ ಎಸ್ಟೇಟ್ ಬಳಿಯಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿ, ರಸ್ತೆಯನ್ನೇ ಇಲ್ಲವಾಗಿಸಿತ್ತು. ಪಕ್ಕದ ಎಸ್ಟೇಟ್ ಮಾಲೀಕರು ರಸ್ತೆಗಾಗಿ ತೋಟವನ್ನೇ ಬಿಟ್ಟುಕೊಟ್ಟಿದ್ದರು. ಹಗಲೂ ರಾತ್ರಿ ಜೆಸಿಬಿ ಯಂತ್ರಗಳು ಕಾರ್ಯಾರಂಭ ಮಾಡಿದ್ದರಿಂದ ಕೆಲ ತಿಂಗಳುಗಳಲ್ಲೇ ಕಚ್ಚಾ ರಸ್ತೆ ನಿರ್ಮಾಣವಾಗಿ ಬಸ್‍ಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಇದೀಗ ಅಂತಹ ರಸ್ತೆಯನ್ನು ಡಾಂಬರೀಕರಣ ಮಾಡಿ ಸುಸ್ಥಿತಿಗೆ ತರಲಾಗಿದೆ.

ಇಲ್ಲಿ ಭಾರೀ ಪ್ರಮಾಣದ ಮಣ್ಣನ್ನು ಹಾಕಿ ಗುಂಡಿ ಮುಚ್ಚಲಾಗಿದ್ದು, ತಡೆಗೋಡೆಯ ಅವಶ್ಯಕತೆ ಹೆಚ್ಚಿದೆ. ಒಂದು ವೇಳೆ ತಡೆಗೋಡೆ ನಿರ್ಮಿಸದಿದ್ದರೆ ರಸ್ತೆಗೆ ಆಯಸ್ಸು ಇರುವದಿಲ್ಲ ಎಂದು ಸ್ಥಳೀಯರು ಅಭಿಪ್ರಾಯಿಸುತ್ತಿದ್ದಾರೆ.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ತೋಟವೂ ಕುಸಿತಗೊಂಡಿರುವ ಹಾಲೇರಿ ಬಳಿಯಲ್ಲಿ ನೂತನ ಮೋರಿ ನಿರ್ಮಿಸಲಾಗಿದೆ. ಭೂ ಕುಸಿತದಿಂದ ಸಣ್ಣ ತೋಡು ನಿರ್ಮಾಣವಾಗಿದ್ದ ಪ್ರದೇಶದಲ್ಲಿ ದೊಡ್ಡ ಮೋರಿ ನಿರ್ಮಿಸಿ ನೀರಿನ ಸರಾಗ ಹರಿವಿಗೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ರಸ್ತೆಯನ್ನೂ ಡಾಂಬರೀಕರಣ ಮಾಡಲಾಗಿದ್ದು, ವಾಹನ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಲಾಗಿದೆ.

ಒಟ್ಟಾರೆ ಸೋಮವಾರಪೇಟೆ-ಮಾದಾಪುರ-ಹಟ್ಟಿಹೊಳೆ ಮೂಲಕ ಹಿಂದೆ ಇದ್ದ ರಸ್ತೆ ಸಂಪರ್ಕ, ಇನ್ನು ಮುಂದೆ ಅಸಾಧ್ಯ ಎಂದೇ ಎಲ್ಲರೂ ಭಾವಿಸಿದ್ದರು. ಭೂಕುಸಿತ ಅಷ್ಟರ ಮಟ್ಟಿಗೆ ಭಯಾನಕತೆಯನ್ನು ಸೃಷ್ಟಿಸಿತ್ತು. ಆದರೆ ಒಂದು ವರ್ಷದಲ್ಲೇ ರಸ್ತೆ ಸಂಪರ್ಕವನ್ನು ಸಾಧಿಸಲಾಗಿದ್ದು, ಇಲಾಖೆ, ಗುತ್ತಿಗೆದಾರರು, ಜನಪ್ರತಿನಿಧಿಗಳ ಕಾರ್ಯ ಈ ವಿಷಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯಕ್ಕೆ ಸಂಚಾರಕ್ಕೆ ಯೋಗ್ಯವಾಗಿರುವ ರಸ್ತೆಗಳ ಗುಣಮಟ್ಟದ ವಿಷಯ ಪ್ರಸ್ತುತ ಮಳೆಗಾಲದಲ್ಲಿ ಅರಿವಿಗೆ ಬರಲಿದೆ!

- ವಿಜಯ್ ಹಾನಗಲ್