ಸೋಮವಾರಪೇಟೆ, ಜು. 11: ಕೂತಿ ಗ್ರಾಮದಲ್ಲಿ ವಿದ್ಯುತ್ ಸ್ಥಗಿತದಿಂದಾಗಿ ಕತ್ತಲೆಯಲ್ಲಿ ದಿನ ಕಳೆಯುವಂತಾಗಿದ್ದು, ಬಿ. ಎಸ್.ಎನ್.ಎಲ್. ನೆಟ್‍ವರ್ಕ್ ಸಹ ಸ್ಥಗಿತಗೊಂಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಮಾರ್ಗ ಆಗಾಗ್ಗೆ ದುರಸ್ತಿಗೀಡಾಗುತ್ತಿದೆ. ಈ ಭಾಗದಲ್ಲಿರುವ 11 ಕೆ.ವಿ. ವಿದ್ಯುತ್ ಮಾರ್ಗವನ್ನು ಬದಲಿಸಿ ಸೋಮವಾರಪೇಟೆ-ಹೊಸಬೀಡು-ತೋಳೂರುಶೆಟ್ಟಳ್ಳಿ ಮೂಲಕ ವಿದ್ಯುತ್ ಸಂಪರ್ಕವನ್ನು ಒದಗಿಸಿಕೊಡಬೇಕೆಂದು ಮನವಿ ಸಲ್ಲಿಸಿದ್ದರೂ ಸ್ಪಂದನ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈಗಿರುವ ವಿದ್ಯುತ್ ಮಾರ್ಗ ತೋಟ ಮತ್ತು ಅರಣ್ಯ ಪ್ರದೇಶದ ಮೂಲಕ ಹಾದುಹೋಗಿರುವದರಿಂದ ಮಳೆಗಾಲದಲ್ಲಿ ಎರಡು ಮೂರು ತಿಂಗಳು ಸಮಸ್ಯೆ ಇದ್ದೇ ಇರುತ್ತದೆ. ವಿದ್ಯುತ್ ಆಗಾಗ್ಗೆ ಕೈಕೊಡುತ್ತಿರುವದರಿಂದ ಬಿ.ಎಸ್.ಎನ್.ಎಲ್ ಮೊಬೈಲ್ ಸಂಪರ್ಕ ಸ್ಥಗಿತಗೊಳ್ಳುತ್ತಿದೆ. ಇದರಿಂದ ಗ್ರಾಮದಲ್ಲಿರುವ ಬ್ಯಾಂಕ್, ಪಂಚಾಯಿತಿ ಕಚೇರಿ ಮತ್ತು ಇತರ ಇಲಾಖಾ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳು ನಡೆಯುತ್ತಿಲ್ಲ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭ ಗ್ರಾಮಸ್ಥರಾದ ಕೆ.ಕೆ. ಸುಧಾಕರ್, ಎ.ಆರ್. ರಂಜಿತ್, ಉಮೇಶ್, ಧರ್ಮಪ್ಪ, ಅಮೃತ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.