ವೀರಾಜಪೇಟೆ, ಜು. 11: ಜಿಲ್ಲೆಯ ಅಲ್ಪಸಂಖ್ಯಾತರು ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಸಮುದಾಯದ ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ವಕ್ಫ್ ಬೋರ್ಡ್‍ನ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎ. ಯಾಕೂಬ್ ಹೇಳಿದರು.
ವೀರಾಜಪೇಟೆಯ ಶಾಫಿ ಮದರಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಅಲ್ಪಸಂಖ್ಯಾತರು ಹಾಗೂ ಮದರಸ ಮಸೀದಿಗಳ ಆಡಳಿತ ಮಂಡಳಿಯ ಪ್ರತಿನಿಧಿಗಳ ಸರ್ಕಾರಗಳ ಯೋಜನೆಗಳ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯಾಕೂಬ್ ಅವರು ಮಸೀದಿ, ಮದರಸ, ಖಬರಸ್ಥಾನ, ಶಾದಿ ಮಹಲ್, ಶಾದಿಭಾಗ್ಯ, ಸರಳ ಬಡ್ಡಿಯ ಸಾ¯ ಸೌಲಭ್ಯ, ವಿದ್ಯಾರ್ಥಿ ವೇತನ, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೂ ಆರ್ಥಿಕ ನೆರವು ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದ್ದು ಸಮುದಾಯ ಬಾಂಧವರು ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ನೀಡಿ ವಕ್ಫ್ ಬೋರ್ಡ್ ಕಚೇರಿಯಲ್ಲಿ ನೋಂದಾವಣೆ ಮಾಡಿಕೊಂಡು ಯೋಜನೆಗಳ ಸೌಲಭ್ಯ ಪಡೆದುಕೊಳ್ಳುವಂತಾಗಬೇಕು. ಸಮುದಾಯವನ್ನು ಅಭಿವೃದ್ಧಿಯ ಮೂಲಕ ಮುಂದೆ ತರಲು ಸರ್ಕಾರಗಳು ಮುಂದಾಗಿದ್ದು ಪ್ರತಿಯೊಬ್ಬರು ಯೊಜನೆಗಳನ್ನು ಸದ್ಭಳಕೆ ಮಾಡಿಕೊಂಡಲ್ಲಿ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಪ್ರತಿ ಗ್ರಾಮದಿಂದಲೂ ಸಮುದಾಯ ಬಾಂಧವರಿಗೆ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವದರೊಂದಿಗೆ ಮಸೀದಿ, ಮದರಸ, ಖಬರಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಜಾಗಗಳ ಅಗತ್ಯ ದಾಖಲಾತಿಗಳನ್ನು ವಕ್ಫ್ ಬೋರ್ಡ್ ಕಚೇರಿಯಲ್ಲಿ ನೀಡಿ ನೋಂದಾವಣೆಯಗೆ ಅವಕಾಶ ಮಾಡಿ ಕೊಡಲಾಗಿದೆ ಎಂದರು
ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ (ಬಾಪು), ಸಮುದಾಯದ ಹಿರಿಯರಾದ ಎಸ್.ಹೆಚ್. ಮೈನೂದ್ಧಿನ್ ಸಭೆಯಲ್ಲಿ ಮಾತನಾಡಿದರು. ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ವೀರಾಜಪೇಟೆ ಶಾಫಿ ಜುಮಾ ಮಸೀದಿ ಅಧ್ಯಕ್ಷ ಖಾದರ್ ಬಾಷಾ, ಖತೀಬ್ ಕಲೀಲ್ ಫ್ಯಝಿ, ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ, ವಕ್ಫ್ ಬೋರ್ಡ್ ಸದಸ್ಯರುಗಳಾದ ತನ್ವೀರ್ ಅಹಮ್ಮದ್, ಸಿ.ಎಂ. ಅಬ್ದುಲ್ ಹಮೀದ್ ಮೌಲವಿ, ಅಬ್ದುಲ್ ಹನೀಫ್, ಮಹ್ಮದ್ ಅಜೀಜುದ್ದೀನ್, ವಕೀಲ ಯೂಸೂಫ್, ಮಹಮ್ಮದ್ ಹಾಜಿ, ಅಬ್ದುಲ್ ಶುಕೂರ್, ಅಬ್ದುಲ್ ರೆಹಮಾನ್, ಅಬ್ದುಲ್ ಸಮದ್, ಹಾತೀಫ್ ಮನ್ನಾ, ಅಬ್ದುಲ್ ಅಜೀಜ್, ಮೊಯ್ದು, ಷರೀಫ್, ಹಂಸ, ಅಬ್ದುಲ್ ನಾಸರ್, ಬೋರ್ಡ್ ಅಧಿಕಾರಿ ಸಮೀವುಲ್ಲಾ, ಕಾರ್ಯದರ್ಶಿ ಸಯೀದ್ ಸೇರಿದಂತೆ ವಿವಿಧ ಜಮಾಆತ್‍ನ ಪ್ರತಿನಿಧಿಗಳು ಹಾಜರಿದ್ದರು.
ಕಾರ್ಯಕ್ರಮಕ್ಕೆ ಸಿದ್ದಾಪುರ, ವೀರಾಜಪೇಟೆ, ಅಮ್ಮತ್ತಿ, ಪಾಲಿಬೆಟ್ಟ, ಗೋಣಿಕೊಪ್ಪಲು, ಕುಟ್ಟ, ತಿತಿಮತಿ, ಕೊಂಡಂಗೇರಿ, ನಾಪೋಕ್ಲು, ಸೇರಿದಂತೆ ವಿವಿಧ ಗ್ರಾಮಗಳಿಂದ ಮಸೀದಿಗಳ ಆಡಳಿತ ಮಂಡಳಿಯ ಪ್ರಮುಖರುಗಳು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ಹೇಳಿಕೊಂಡಾಗ ಅದಕ್ಕೆ ಪ್ರತಿಕ್ರಿಯಿಸಿದ ವಕ್ಭ್ ಬೋರ್ಡ್ ಅಧ್ಯಕ್ಷರು ನ್ಯಾಯಾಂಗ ಸಮಸ್ಯೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಕ್ಫ್ ಬೋರ್ಡ್ ವ್ಯಾಪ್ತಿಗೆ ಬರುವ ಎಲ್ಲ ಸಮಸ್ಯೆಗಳಿಗೆ ಪರಿಹಾರದ ಭರವಸೆ ನೀಡಿದರು.