ಕುಶಾಲನಗರ, ಜು. 11: ಕುಶಾಲನಗರ ಪಟ್ಟಣದಲ್ಲಿರುವ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಮೂಲಭೂತ ಸೌಲಭ್ಯಗಳ ಕೊರತೆಯೊಂದಿಗೆ ಪ್ರಯಾಣಿಕರು ಅನಾನುಕೂಲತೆ ನಡುವೆ ಬಸ್ ಪ್ರಯಾಣಿಸುವ ದುಸ್ಥಿತಿಗೆ ಒಳಗಾಗಿರುವ ದೃಶ್ಯ ದಿನನಿತ್ಯ ಕಂಡುಬರುತ್ತಿದೆ. 3 ದಶಕಗಳ ಹಿಂದೆ ನಿರ್ಮಾಣವಾದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ಇದುವರೆಗೂ ಮೇಲ್ದರ್ಜೆಗೇರಿಸುವಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿರುವದು ಇದಕ್ಕೆ ಮುಖ್ಯ ಕಾರಣ ಎಂದರೆ ತಪ್ಪಾಗಲಾರದು. ನಿಲ್ದಾಣ ಮೂಲಕ ಸಾಗುವ ಕರ್ನಾಟಕ ರಸ್ತೆ ಸಾರಿಗೆ ಬಸ್‍ಗಳು ಐಷಾರಾಮಿ ಮಾದರಿಯಲ್ಲಿದ್ದರೂ ಬಸ್ ನಿಲ್ದಾಣ ಮಾತ್ರ ಹೈಟೆಕ್ ದರ್ಜೆಗೆ ಏರುವಲ್ಲಿ ವಿಫಲವಾಗಿದೆ.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಆರ್. ಗುಂಡುರಾವ್ ಅವರ ಪರಿಶ್ರಮದಿಂದ ನಿರ್ಮಾಣಗೊಂಡ ಬಸ್ ನಿಲ್ದಾಣದಲ್ಲಿ ಅಂದಿನ ದಿನಗಳಲ್ಲಿ ಕೇವಲ 50 ಬಸ್‍ಗಳ ಮಾರ್ಗಗಳು ಮಾತ್ರ ಈ ನಿಲ್ದಾಣ ಮೂಲಕ ಸಂಚರಿಸುತ್ತಿದ್ದವು. ಬೆರಳೆಣಿಕೆಯ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಿದ್ದರು. ಆದರೆ ಅತಿ ಶೀಘ್ರದಲ್ಲಿ ಬೆಳವಣಿಗೆ ಕಂಡ ಕುಶಾಲನಗರ ಬಸ್ ನಿಲ್ದಾಣದ ಮೂಲಕ ಪ್ರಸಕ್ತ ದಿನನಿತ್ಯ 500 ಕ್ಕೂ ಅಧಿಕ ಬಸ್‍ಗಳು ಸಂಚರಿಸುತ್ತಿವೆ.

ಅಂದಾಜು 25 ಸಾವಿರಕ್ಕೂ ಅಧಿಕ ಪ್ರಯಾಣಿಕರು ಈ ಬಸ್ ನಿಲ್ದಾಣ ಮೂಲಕ ದಿನನಿತ್ಯ ಸಂಚರಿಸಬೇಕಾಗಿದೆ. ಒಂದೆಡೆ ಖಾಸಗಿ ಬಸ್ ನಿಲ್ದಾಣದ ಸಮಸ್ಯೆ ನಡುವೆ ಮಧ್ಯಮ ವರ್ಗದ ವಿದ್ಯಾರ್ಥಿಗಳು ಕೂಡ ಸರಕಾರಿ ಬಸ್ ಅನ್ನು ಅವಲಂಬಿಸಬೇಕಾದ ಪರಿಸ್ಥಿತಿ ಕೂಡ ಉಂಟಾಗಿದೆ. ಮಡಿಕೇರಿ ಡಿಪೋಗೆ ಒಳಪಡುತ್ತಿರುವ ಕುಶಾಲನಗರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮೂಲಕ ಇಷ್ಟೊಂದು ಸಂಖ್ಯೆಯಲ್ಲಿ ಬಸ್ ರೂಟ್‍ಗಳು ಸಂಚರಿಸುವ ಮೂಲಕ ಲಕ್ಷಾಂತರ ರೂಪಾಯಿಗಳ ಆದಾಯ ಲಭಿಸುತ್ತಿದ್ದರೂ ಕುಶಾಲನಗರದ ಬಸ್ ನಿಲ್ದಾಣ ಮಾತ್ರ ಶಿಥಿಲಗೊಂಡು ಪ್ರಯಾಣಿಕರಿಗೆ ಸೌಲಭ್ಯಗಳ ಕೊರತೆ ಮುಂದುವರೆದಿರುವದು ಮಾತ್ರ ವಿಷಾದನೀಯ ಎನ್ನುತ್ತಾರೆ ಪ್ರಯಾಣಿಕರು.

ಸುಮಾರು 2 ಎಕರೆಗೂ ಅಧಿಕ ಜಾಗದಲ್ಲಿ ಬಸ್ ನಿಲ್ದಾಣವಿದ್ದು, ಈ ನಿಲ್ದಾಣಕ್ಕೆ ಯಾವದೇ ರೀತಿಯ ಭದ್ರತೆಯನ್ನು ಒದಗಿಸುವಲ್ಲಿ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಯೋಜನೆ ರೂಪಿಸಿಲ್ಲ. ಬಸ್ ನಿಲ್ದಾಣದ ಪ್ರದೇಶಕ್ಕೆ ಆವರಣ ಗೋಡೆ ಇಲ್ಲದೆ ಖಾಸಗಿ ವಾಹನಗಳು ಎಲ್ಲೆಂದರಲ್ಲಿ ಸಂಚರಿಸುತ್ತಿರುವದು ಪ್ರಯಾಣಿಕರು ಅಪಾಯಕಾರಿ ಸನ್ನಿವೇಶವನ್ನು ಎದುರಿಸುವಂತಾಗಿದೆ.

ಸರಕಾರಿ ಬಸ್ ನಿಲ್ದಾಣದಿಂದ 200 ಮೀ ದೂರದ ತನಕ ಯಾವದೇ ಖಾಸಗಿ ವಾಹನಗಳು ಪ್ರಯಾಣಿಕರನ್ನು ಒಯ್ಯುವಂತಿಲ್ಲ ಎನ್ನುವ ಸರಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ದಿನನಿತ್ಯ ಮ್ಯಾಕ್ಸಿಕ್ಯಾಬ್‍ಗಳು, ಖಾಸಗಿ ಬಸ್‍ಗಳು ಸರಕಾರಿ ಬಸ್ ನಿಲ್ದಾಣದ ಒತ್ತಿನಲ್ಲಿ ಬಂದು ಪ್ರಯಾಣಿಕರನ್ನು ಕರೆದೊಯ್ಯುತ್ತಿರುವದು ಸಾಮಾನ್ಯ ದೃಶ್ಯವಾಗಿದೆ. ಈ ಮೂಲಕ ಸರಕಾರಿ ಸಂಸ್ಥೆಗೆ ಒದಗಬೇಕಾದ ಆದಾಯಕ್ಕೆ ಕುತ್ತು ಉಂಟಾಗುತ್ತಿದೆ.

ಬಸ್ ನಿಲ್ದಾಣದಲ್ಲಿ ಕಳ್ಳಕಾಕರ ಹಾವಳಿ ಕೂಡ ಅಧಿಕಗೊಂಡಿದ್ದು ಪ್ರಯಾಣಿಕರ ನಗದು, ಚಿನ್ನ ಕಳುವಾಗುತ್ತಿರುವ ಪ್ರಕರಣಗಳು ಆಗಾಗ್ಯೆ ಮರುಕಳಿಸುತ್ತಿವೆ. ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲಿನ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇನ್ನೊಂದೆಡೆ ಕುಡುಕರ ಹಾಗೂ ಕೆಲವು ಪಡ್ಡೆ ಹುಡುಗರ ಹಾವಳಿ ಕೂಡ ನಿಲ್ದಾಣದಲ್ಲಿ ಅತಿಯಾಗಿದ್ದು ಮಹಿಳೆಯರಿಗೆ ಹಾಗೂ ವೃದ್ಧರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ನಿಲ್ದಾಣದ ಆವರಣದಲ್ಲಿರುವ ವಾಹನ ನಿಲುಗಡೆ ಕೇಂದ್ರದಲ್ಲಿ ಎಲ್ಲೆಂದರಲ್ಲಿ ಖಾಸಗಿ ವಾಹನಗಳು ನಿಲುಗಡೆಗೊಳ್ಳುತ್ತಿದ್ದು ಈ ವಾಹನಗಳಿಗೆ ಭದ್ರತೆ ಕೊರತೆ ಕೂಡ ಎದುರಾಗುತ್ತಿವೆ. ಮಳೆಗಾಲದಲ್ಲಿ ಇಡೀ ನಿಲ್ದಾಣ ಕೆಸರು ನೀರಿನಿಂದ ಅವೃತಗೊಳ್ಳುತ್ತಿದ್ದು ಪ್ರಯಾಣಿಕರು ಮತ್ತು ನಿಲ್ದಾಣದ ಒಳಗಿರುವ ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳು ಕೂಡ ತೊಂದರೆಗೆ ಒಳಗಾಗುತ್ತಿರುವದು ಸಾಮಾನ್ಯವಾಗಿದೆ.

ಪಟ್ಟಣದ ಮೇಲ್ಭಾಗದಿಂದ ಚರಂಡಿಯಲ್ಲಿ ಹರಿಯುತ್ತಿರುವ ನೀರು ಸಂಪೂರ್ಣ ಬಸ್ ನಿಲ್ದಾಣದ ಆವರಣದ ಒಳಭಾಗದಲ್ಲಿ ಹರಿಯುವಂತಹ ದೃಶ್ಯ ಗೋಚರಿಸುತ್ತಿದೆ. ಸಿಬ್ಬಂದಿಗಳ ಕೊರತೆ ಕೂಡ ಈ ನಿಲ್ದಾಣದಲ್ಲಿದ್ದು ಕೇವಲ 4 ಮಂದಿ ನಿಯಂತ್ರಣಾಧಿಕಾರಿಗಳು ಕೆಲಸ ನಿರ್ವಹಿಸಬೇಕಾಗಿದೆ. ಕಂಪ್ಯೂಟರ್ ಬುಕ್ಕಿಂಗ್, ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಸೇರಿದಂತೆ ಹಲವು ಕೆಲಸಗಳಿಗೆ ಸಿಬ್ಬಂದಿಗಳ ಕೊರತೆ ಕೂಡ ಕಂಡುಬಂದಿದೆ.

ಹಗಲು ಮತ್ತು ರಾತ್ರಿ ಸೇರಿದಂತೆ 500 ಕ್ಕೂ ಅಧಿಕ ಬಸ್‍ಗಳು ಓಡಾಡುತ್ತಿದ್ದರೂ ರಾತ್ರಿ 9 ಗಂಟೆ ನಂತರ ಬಸ್‍ಗಳು ನಿಲ್ದಾಣಕ್ಕೆ ಬರದೆ ನೇರವಾಗಿ ಹೆದ್ದಾರಿ ಮೂಲಕ ಸಾಗುತ್ತಿರುವದು ಕೂಡ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಮಳೆ ಗಾಳಿಗೆ ರಾತ್ರಿ ವೇಳೆ ಮುಖ್ಯರಸ್ತೆಯಲ್ಲಿ ಬಸ್ ಅನ್ನು ಕಾಯಬೇಕಾದ ಪರಿಸ್ಥಿತಿ ಹಾಗೂ ಪ್ರಯಾಣಿಕರಿಗೆ ಬಸ್ ಸಂಚಾರದ ವೇಳೆ ಮತ್ತಿತರ ಮಾಹಿತಿ ಕೊರತೆ ಕೂಡ ಎದುರಾಗುತ್ತಿದೆ.

ರಾತ್ರಿ ವೇಳೆ 150 ಕ್ಕೂ ಅಧಿಕ ಐಷಾರಾಮಿ ಬಸ್‍ಗಳು ಸೇರಿದಂತೆ 200 ಕ್ಕೂ ಅಧಿಕ ಬಸ್‍ಗಳು ಸಂಚರಿಸುತ್ತಿದ್ದು ಈ ಬಸ್‍ಗಳಲ್ಲಿ ಸಂಚರಿಸಲು ಮಾಹಿತಿ ಕೊರತೆಯಿಂದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆ ಕುಶಾಲನಗರ ಸರಕಾರಿ ಬಸ್ ನಿಲ್ದಾಣವನ್ನು ದಿನದ 24 ಗಂಟೆಗಳ ಕಾಲ ಪ್ರಯಾಣಿಕರಿಗೆ ಬಳಕೆ ಮಾಡುವ ಬಗ್ಗೆ ಸಾರಿಗೆ ಸಂಸ್ಥೆ ಚಿಂತನೆ ಮಾಡಬೇಕಾಗಿದೆ ಎಂದು ಕುಶಾಲನಗರ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು ಆಗ್ರಹಿಸಿದ್ದಾರೆ.

ಇನ್ನೊಂದೆಡೆ ಕೇರಳದ ಮಟ್ಟನ್ನೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾದ ಹಿನ್ನೆಲೆ ಕುಶಾಲನಗರದಿಂದ ನೇರವಾಗಿ ಮಟ್ಟನ್ನೂರಿಗೆ ಬೆಳಗಿನ ಜಾವ ಐಷಾರಾಮಿ ಬಸ್ ಮಾರ್ಗದ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಕೆಎಸ್‍ಆರ್‍ಟಿಸಿ ವಿಭಾಗಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕುಶಾಲನಗರ ಬಸ್ ನಿಲ್ದಾಣದ ಮೂಲಕ ಮೈಸೂರು, ಮದ್ದೂರು ಕಡೆಗೆ ತೆರಳುವ ಇತರ ಘಟಕಗಳ ಬಸ್‍ಗಳು ಪಾಸ್ ಹೊಂದಿದ ವಿದ್ಯಾರ್ಥಿಗಳನ್ನು ಬಸ್‍ನಲ್ಲಿ ಸಂಚರಿಸಲು ಅವಕಾಶ ಕಲ್ಪಿಸುತ್ತಿರುವದು ಮಕ್ಕಳಿಗೆ ತುಂಬಾ ತೊಂದರೆ ಉಂಟುಮಾಡುತ್ತಿದೆ ಎನ್ನುವ ದೂರುಗಳು ಕೂಡ ಕೇಳಿಬಂದಿವೆ.

ಹಲವು ಸಮಸ್ಯೆಗಳನ್ನು ಒಳಗೊಂಡಿರುವ ಕುಶಾಲನಗರ ಸರಕಾರಿ ಬಸ್ ನಿಲ್ದಾಣವನ್ನು ತಕ್ಷಣ ಮೇಲ್ದರ್ಜೆಗೇರಿಸುವದರೊಂದಿಗೆ ಪ್ರಯಾಣಿಕರ ಸಂಕಷ್ಟಗಳಿಗೆ ಶಾಶ್ವತ ಕಾಯಕಲ್ಪ ಕಲ್ಪಿಸುವಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೂಡಲೇ ಚಿಂತನೆ ಹರಿಸಬೇಕಾಗಿದೆ.

- ಚಂದ್ರಮೋಹನ್