ಕೂಡಿಗೆ, ಜು. 11: ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಹುದುಗೂರು ಅರಣ್ಯ ಸಸ್ಯ ಕ್ಷೇತ್ರದ ಆವರಣದಲ್ಲಿ ಬೆಳೆಸಲಾದ ಸಿಲ್ವರ್ ಗಿಡಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ.
ತಾಲೂಕಿನ ಜಿಲ್ಲಾ ಪಂಚಾಯಿತಿ ಸದಸ್ಯರ ಶಿಫಾರಸ್ಸು ಪತ್ರ ಮತ್ತು ರೈತರ ಜಮೀನಿನ ದಾಖಲಾತಿಗಳನ್ನು ಪಡೆದು ಅವರ ಜಮೀನಿನ ಆಧಾರದ ಅನುಗುಣವಾಗಿ ಒಬ್ಬ ರೈತರಿಗೆ 250 ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ 2 ಲಕ್ಷಕ್ಕೂ ಅಧಿಕ ಗಿಡಗಳನ್ನು ತಾಲೂಕಿನಾದ್ಯಂತ ರೈತರು ಪಡೆದುಕೊಂಡು ತಮ್ಮ ಜಮೀನುಗಳಲ್ಲಿ ನೆಡುವದರಲ್ಲಿ ತಲ್ಲೀನರಾಗಿದ್ದಾರೆ.
ಸಸಿ ವಿತರಣೆ ಸಂದರ್ಭ ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯಾಧಿಕಾರಿ ಎಸ್.ಕೆ. ಫಿರೋಜ್‍ಖಾನ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಹೆಚ್.ಎಸ್ .ರವಿ, ಅರಣ್ಯ ರಕ್ಷಣಾ ಸಮಿತಿಯ ಕಾರ್ಯದರ್ಶಿ ಗೋವಿಂದರಾಜ್ ಸೇರಿದಂತೆ ರೈತರು ಇದ್ದರು.